ಕನ್ನಡಪ್ರಭ ವಾರ್ತೆ ಬೆಂಗಳೂರು
ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಬೇಸರಗೊಂಡು ಕೆರೆಗೆ ಹಾರಿ ಗೃಹಣಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆ ಸಂಬಂಧ ಮೃತಳ ಪತಿ ಶರತ್ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ.ಕೊಮ್ಮಘಟ್ಟದ ನಿವಾಸಿ ಚೈತ್ರಾ (29) ಮೃತೆ. ಶಾಪಿಂಗ್ ಹೋಗುವುದಾಗಿ ಮನೆಯಲ್ಲಿ ಹೇಳಿ ಬಂದು ಕೊಮ್ಮಘಟ್ಟ ಕೆರೆಗೆ ಹಾರಿ ಚೈತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮರುದಿನ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಸಂತೆ ಸರಗೂರಿನ ಕಲ್ಯಾ ಗ್ರಾಮದ ಶರತ್ ಹಾಗೂ ಚೈತ್ರಾ ಪ್ರೀತಿಸಿ ವಿವಾಹವಾಗಿದ್ದು, ಈ ದಂಪತಿಗೆ 4 ವರ್ಷದ ಹೆಣ್ಣು ಮಗುವಿದೆ. ಮದುವೆ ಬಳಿಕ ಕೊಮ್ಮಘಟ್ಟದಲ್ಲಿ ಅವರು ನೆಲೆಸಿದ್ದರು. ಆಟೋ ಚಾಲಕನಾಗಿ ಶರತ್ ಜೀವನ ಸಾಗಿಸುತ್ತಿದ್ದು, ಇತ್ತೀಚಿಗೆ ಕೌಟುಂಬಿಕ ವಿಷಯವಾಗಿ ಸತಿ-ಪತಿ ಮಧ್ಯೆ ಮನಸ್ತಾಪ ಮೂಡಿ ಜಗಳವಾಡುತ್ತಿದ್ದರು. ಪ್ರತಿ ದಿನ ಮದ್ಯ ಸೇವಿಸಿ ಬಂದು ಪತ್ನಿ ಮೇಲೆ ಶರತ್ ಗಲಾಟೆ ಮಾಡುತ್ತಿದ್ದ. ಇದರಿಂದ ಚೈತ್ರಾ ಬೇಸತ್ತು ಹೋಗಿದ್ದರು. ಅಲ್ಲದೆ ವಿಪರೀತ ಸಾಲವನ್ನು ಸಹ ಆತ ಮಾಡಿಕೊಂಡಿದ್ದ. ಈತನ ಸಾಲ ತೀರಿಸಲು ತವರು ಮನೆಯಿಂದ ಚೈತ್ರಾ ಆರ್ಥಿಕ ನೆರವು ಪಡೆದಿದ್ದರು. ಆದಾಗ್ಯೂ ಶರತ್ ಬದಲಾಗಲಿಲ್ಲ. ಕೊನೆಗೆ ಪತಿಯ ಹಿಂಸೆ ಸಹಿಸಲಾರದೆ ಆಕೆ ಆತ್ಮಹತ್ಯೆಗೆ ನಿರ್ಧರಿಸಿದ್ದಾರೆ. ಅಂತೆಯೇ ತನ್ನ ಪಕ್ಕದ ಮನೆಯಲ್ಲಿ ಮಗಳನ್ನು ಬಿಟ್ಟು ಪತಿಗೆ ಕರೆ ಮಾಡಿ ಶಾಪಿಂಗ್ ಹೋಗುವುದಾಗಿ ಹೇಳಿ ಕೊಮ್ಮಘಟ್ಟ ಕೆರೆಗೆ ಹಾರಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.ಕೆಲ ಹೊತ್ತಿನ ಬಳಿಕ ಮನೆಗೆ ಮರಳಿದ ಶರತ್, ಸಂಜೆಯಾದರು ಮನೆಗೆ ಪತ್ನಿ ಮರಳದೆ ಹೋದಾಗ ಆತಂಕಗೊಂಡಿದ್ದಾನೆ. ಕೂಡಲೇ ಸುತ್ತಮುತ್ತ ಹುಡುಕಾಟ ನಡೆಸಿದ ಆತ, ಬಳಿಕ ಕುಂಬಳಗೋಡು ಪೊಲೀಸರಿಗೆ ದೂರು ನೀಡಿದ್ದಾನೆ. ಮರುದಿನ ಕೆರೆಯಲ್ಲಿ ಚೈತ್ರಾ ಮೃತದೇಹ ಪತ್ತೆಯಾಗಿದೆ. ಮೃತಳ ಪೋಷಕರ ದೂರು ಆಧರಿಸಿ ಆಕೆಯ ಪತಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
