ದೌರ್ಜನ್ಯಗಳ ನಡುವೆ ಮಹಿಳಾ ದಿನ ಆಚರಿಸುವುದಾದರೂ ಹೇಗೆ?

| Published : Mar 25 2025, 12:47 AM IST

ಸಾರಾಂಶ

ಶಿವಮೊಗ್ಗ: ಹಣ ಬಲದ ನಡುವೆ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಮುಚ್ಚಿಹೋಗುತ್ತಿರುವ ಕಾಲಘಟ್ಟದಲ್ಲಿ ಮಹಿಳಾ ದಿನಾಚರಣೆ ಆಚರಿಸುವುದಾದರು ಹೇಗೆ ? ಎಂದು ಸಾಮಾಜಿಕ ಕಾರ್ಯಕರ್ತೆ ಅಕ್ಕೈ ಪದ್ಮಶಾಲಿ ಬೇಸರ ವ್ಯಕ್ತಪಡಿಸಿದರು.

ಶಿವಮೊಗ್ಗ: ಹಣ ಬಲದ ನಡುವೆ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಮುಚ್ಚಿಹೋಗುತ್ತಿರುವ ಕಾಲಘಟ್ಟದಲ್ಲಿ ಮಹಿಳಾ ದಿನಾಚರಣೆ ಆಚರಿಸುವುದಾದರು ಹೇಗೆ ? ಎಂದು ಸಾಮಾಜಿಕ ಕಾರ್ಯಕರ್ತೆ ಅಕ್ಕೈ ಪದ್ಮಶಾಲಿ ಬೇಸರ ವ್ಯಕ್ತಪಡಿಸಿದರು.ನಗರದ ಸಿ.ಭೀಮಸೇನರಾವ್ ಕಾನೂನು ಮಹಾವಿದ್ಯಾಲಯ ಹಾಗೂ ಕಾನೂನು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವತಿಯಿಂದ ಸೋಮವಾರ ಚಂದನ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೆ ಇದೆ. ಸೌಜನ್ಯ ಅತ್ಯಾಚಾರ ಪ್ರಕರಣದಲ್ಲಿ ನಿಜವಾದ ದೋಷಿಗಳು ಹಣ ಬಲದಿಂದ ಸಾಕ್ಷಿಗಳನ್ನು ನಾಶ ಮಾಡಿ ತಲೆ ಎತ್ತಿ ಓಡಾಡುತ್ತಿದ್ದಾರೆ. ಗೌರಿ ಲಂಕೇಶ್ ಅವರಂತಹ ಸಾಮಾಜಿಕ ಹೋರಾಟಗಾರ್ತಿಯ ಕೊಲೆ ನ್ಯಾಯಯುತ ಅಂತ್ಯ ಸಿಗದೆ ಹೋರಾಟ ನಡೆಸುತ್ತಿದೆ. ಮೀನು ಕದ್ದ ಕಾರಣಕ್ಕೆ ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ ಅಮಾನುಷ ಘಟನೆಗಳು ಕಣ್ಣೆದುರಿಗೆ ನಡೆಯುತ್ತಿರುವ ಈ ಹೊತ್ತಿನಲ್ಲಿ ಮಹಿಳಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸುವುದಾದರು ಹೇಗೆ ಎಂದು ಪ್ರಶ್ನಿಸಿದರು.

ಭಾರತದಲ್ಲಿ ಸಂವಿಧಾನದ ನೈತಿಕತೆ ಬಹುಮುಖ್ಯವಾಗಿದೆ. ಅದರಿಂದಲೇ ನಾವೆಲ್ಲ ಇಷ್ಟು ಚೆನ್ನಾಗಿ ಬದುಕಲು ಸಾಧ್ಯವಾಗಿದೆ. ಇತರೆ ಮುಂದುವರೆದ ರಾಷ್ಟ್ರಗಳಿಗೆ ಭಾರತದ ಸಂವಿಧಾನ ಮಾದರಿಯಾಗಿದೆ. ಅದರೆ ಶಿಕ್ಷಣ ಮತ್ತು ಉದ್ಯೋಗ ಶ್ರೀಮಂತರ ಕೈಯಲ್ಲಿದೆ. ನಮ್ಮ ಬಗ್ಗೆ ಯಾರು ಯೋಚಿಸುತ್ತಾರೆ ಎನ್ನುವ ಆತಂಕವನ್ನು ನೊಂದವರಿಂದ ದೂರಮಾಡಲು ಯುವ ಸಮೂಹ ಮುಂದೆ ಬರಬೇಕಿದೆ ಎಂದರು.

ಮಹಿಳೆಯರು ದ್ವಿತೀಯ ದರ್ಜೆ ಪ್ರಜೆ ಎಂಬ ಕಾಲ ಈಗಿಲ್ಲ. ಲೈಂಗಿಕ ಅಲ್ಪಸಂಖ್ಯಾತರ ಮೇಲೆ‌ ನಿರಂತರ ಹಲ್ಲೆ ದೌರ್ಜನ್ಯಗಳು ನಡೆಯುತ್ತಿದೆ. ಸಮಾಜದ ಕೊಡುಗೆಯಾಗಿ ಭಿಕ್ಷಾಟನೆಯಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿತ್ತು‌. ಅದರೆ ಪರಿಸ್ಥಿತಿಗಳು ಬದಲಾಗುತ್ತಿವೆ. ಲೈಂಗಿಕ ಅಲ್ಪಸಂಖ್ಯಾತರ ವೈವಿಧ್ಯತೆಯನ್ನು ಅರ್ಥಮಾಡಿಕೊಂಡು, ಶಿಕ್ಷಣ ಮತ್ತು ಉದ್ಯೋಗ ಹೆಚ್ಚು ಅವಕಾಶ ಸಿಗುವಂತಾಗಬೇಕು. ಮಡಿವಂತಿಕೆಯಿಂದ ಮುಕ್ತತೆಯತ್ತ ಸಮಾಜ ಮತ್ತಷ್ಟು ಬದಲಾವಣೆಯಾಗಬೇಕಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಭಾರತದಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನವಿದೆ. ಮಹಿ ಎಂದರೆ ಭೂಮಿ. ನಮ್ಮ ಅಸ್ಥಿತ್ವದ ನಿಜವಾದ ನೆಲೆಯೆ ಮಹಿಳೆ ಎಂದು ಪುರಾಣಗಳಲ್ಲಿ ವ್ಯಾಖ್ಯಾನಿಸಲಾಗಿದೆ ಎಂದು ತಿಳಿಸಿದರು.

ಸಾಮಾಜಿಕ ಜಾಲತಾಣಗಳು ಹಾಗೂ ಟಿವಿ ಧಾರಾವಾಹಿಗಳಲ್ಲಿ ಹೆಣ್ಣು ಮಕ್ಕಳನ್ನು ತಪ್ಪಾಗಿ ವೈಭವಿಕರಿಸಲಾಗುತ್ತಿದೆ‌. ಇದಕ್ಕೆಲ್ಲ ಪಾಶ್ಚಾತ್ಯ ಸಂಸ್ಕೃತಿಯ ಅಂಧತ್ವದ ಅನುಕರಣೆಯೆ ಮೂಲ ಕಾರಣ. ಶಿಕ್ಷಣ ಮತ್ತು ಸಬಲೀಕರಣದಿಂದ ಸಮಾಜ ಸುಧಾರಿಸುತ್ತದೆ. ಕುಟುಂಬದಿಂದ ಸಾರ್ವಜನಿಕ ಆಡಳಿತದವರೆಗೆ ಪ್ರತಿ ಹಂತದಲ್ಲಿ ಸಮಾನತೆ ಸೃಷ್ಟಿಯಾಗಬೇಕು. ಮಹಿಳೆಯರು ಅಗತ್ಯ ಕೌಶಲ್ಯತೆಯೊಂದಿಗೆ ನಿಮಗೆ ನೀವೇ ಸದೃಢರಾಗಿ ಎಂದು ಹೇಳಿದರು.

ಎನ್ಇಎಸ್ ನಿರ್ದೇಶಕಿ ಎಂ.ಆರ್.ಸೀತಾಲಕ್ಷ್ಮೀ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಎ.ಅನಲ ಅಧ್ಯಕ್ಷತೆ ವಹಿಸಿದ್ದರು.

ದೈಹಿಕ ಶಿಕ್ಷಣ ನಿರ್ದೇಶಕ ಡಾ.ಎಸ್.ಕಾಂತರಾಜ್, ಸಹ ಪ್ರಾಧ್ಯಾಪಕಿ ಅನುಪಮ.ವಿ.ಯು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.