ಕೋರ್ಟ್ ನಲ್ಲೇ ಶೌಚಾಲಯ ಇಲ್ಲ ಅಂದರೆ ಹೇಗೆ?

| Published : Dec 05 2024, 12:33 AM IST

ಸಾರಾಂಶ

ಜಿಲ್ಲಾ ನ್ಯಾಯಾಲಯದಲ್ಲಿ ಶೌಚಾಲಯವಿಲ್ಲ. ವಕೀಲರು, ಕಕ್ಷಿದಾರರಿಗೆ ತೊಂದರೆ ಆಗಿದೆ ಎಂದು ಹೇಳುವುದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗಜಿಲ್ಲಾ ನ್ಯಾಯಾಲಯದಲ್ಲಿ ಶೌಚಾಲಯವಿಲ್ಲ. ವಕೀಲರು, ಕಕ್ಷಿದಾರರಿಗೆ ತೊಂದರೆ ಆಗಿದೆ ಎಂದು ಹೇಳುವುದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.ನಗರದ ತರಾಸು ರಂಗಮಂದಿರದಲ್ಲಿ ವಕೀಲರ ಸಂಘದಿಂದ ಆಯೋಜಿಸಿದ್ದ ವಕೀಲರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶೌಚಾಲಯದ ಕೊರತೆ ಇದೆ ಎಂದು ವಕೀಲರೇ ಭಿನ್ನವತ್ತಳೆ ಅರ್ಪಿಸಿದರೆ ಹೇಗೆ? ಸಂವಿಧಾನ ಕೈಯಲ್ಲಿಟ್ಟಿಕೊಂಡಿದ್ದೀರಿ, ಆದರೆ ಜನ ಸಾಮಾನ್ಯರಿಗೆ ಹಕ್ಕುಗಳನ್ನು ಕೊಡಿಸುವ ಸ್ಥಾನದಲ್ಲಿರುವವರ ನಿಮ್ಮ ಪರಿಸ್ಥಿತಿ ಹೀಗಾದರೆ ನ್ಯಾಯ ಕೊಡಿಸಿ ಎಂದು ಜನ ಸಾಮಾನ್ಯರು ನಿಮ್ಮ ಬಳಿ ಏಕೆ ಬರಬೇಕು ಎಂದು ಪ್ರಶ್ನಿಸಿದರು.ಚಿತ್ರದುರ್ಗ ಹೊರವಲಯದಲ್ಲಿ 10 ಎಕರೆ ಜಾಗದಲ್ಲಿ ನಿರ್ಮಾಣವಾಗುತ್ತಿರುವ ನ್ಯಾಯಾಲಯ ಕಟ್ಟಡ ನಿರ್ಮಾಣ ತ್ವರಿತವಾಗಿ ಪೂರ್ಣಗೊಳಿಸಲು ಎಲ್ಲ ರೀತಿ ಸಹಕಾರ ನೀಡಲಾಗುವುದು. 2021 ರಿಂದ ಕಟ್ಟಡ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬಿದ್ದಿರುವ ಸಂಗತಿ ಬಗ್ಗೆ ಗಮನ ಸೆಳೆಯಲಾಗಿದ್ದು, ಅನುದಾನ ಬಿಡುಗಡೆಗೆ ಯತ್ನಿಸಲಾಗುವುದು. ಕೋರ್ಟ್ ಕಟ್ಟಡಕ್ಕೆ ಅನುದಾನ ಕೊಡಿಸಲು ಸಿಎಂ ಬಳಿಗೆ ನಿಯೋಗ ಹೋಗಿ ಒತ್ತಡ ಹಾಕೋಣ ಎಂದರು.ರಾಜ್ಯದಲ್ಲಿ ಸುಮಾರು 25 ಲಕ್ಷ ಪ್ರಕರಣಗಳು ಬಾಕಿ ಇವೆ. ಅದರಲ್ಲಿ ಹೈಕೋರ್ಟ್ ಒಂದರಲ್ಲೇ ₹2.50 ಲಕ್ಷ ಪ್ರಕರಣ ಬಾಕಿ ಇವೆ. ಇಳಿದ 22 ಲಕ್ಷಕ್ಕೂ ಹೆಚ್ಚಿನ ಪ್ರಕರಣಗಳು ಜಿಲ್ಲಾ, ತಾಲೂಕು ಮಟ್ಟದ ನ್ಯಾಯಾಲಯಗಳಲ್ಲಿ ಪ್ರಕರಣಗಳು ಬಾಕಿ ಇರುವುದು ಬೇಸರದ ಸಂಗತಿ. ವರ್ಷದ ಮೇಲ್ಪಟ್ಟ ಪ್ರಕರಣಗಳೇ 1 ಲಕ್ಷ ಇವೆ. ಸಾವಿರಾರು ಪ್ರಕರಣಗಳು 10 ವರ್ಷ, 20 ವರ್ಷ ಬಾಕಿ ಇದ್ದರೆ ಈ ವ್ಯವಸ್ಥೆ ಬಗ್ಗೆ ಜನ ಏನು ಅಂದುಕೊಳ್ಳಬೇಕು ಎಂದು ನೋವು ತೋಡಿಕೊಂಡರು.

ಸುಪ್ರೀಂ ಕೋರ್ಟ್ ನಿಂದ ಕೆಳ ಹಂತದ ಕೋರ್ಟ್ ತನಕ 25, 50 ವರ್ಷಗಳಷ್ಟು ಹಳೆಯದಾದ ಪ್ರಕರಣಗಳು ಬಾಕಿ ಇರುವುದು ಬೇಸರ ಸಂಗತಿ. ತುಟ್ಟಿ ವಕೀಲರನ್ನು ನೇಮಕ ಮಾಡಿಕೊಂಡು ಕೇಸ್ ದಾಖಲು ಮಾಡಿಕೊಂಡರೆ ಬೇಗ ತೀರ್ಪು ಬರಲಿವೆ. ಸಾಮಾನ್ಯ ವಕೀಲರ ನೇಮಕ ಮಾಡಿಕೊಂಡಲ್ಲಿ ತೀರ್ಪು ವಿಳಂಬ ಆಗಲಿವೆ. ಸಣ್ಣ ರೈತರು, ಬಡವರ ಪ್ರಕರಣಗಳನ್ನು 6 ತಿಂಗಳೊಳಗೆ ಪೂರ್ಣಗೊಳಿಸಬೇಕೆಂದು ಕಾಯ್ದೆ ರೂಪಿಸಿದ್ದೇವೆ ಎಂದರು.

ಸಂವಿಧಾನವನ್ನು ದುರುಪಯೋಗ ಮಾಡಿಕೊಳ್ಳುವ ಜನರಿಗೆ ಬುದ್ದಿ ಕಲಿಸಲು ವಕೀಲರು, ಸಂವಿಧಾನ ಸೈನಿಕರಂತೆ ಕೆಲಸ ಮಾಡಬೇಕು. ದೇಶದೊಳಗಿನ ಯಾವುದೇ ಸಮಸ್ಯೆಗೆ ಸಂವಿಧಾನವೇ ಅತ್ಯುತ್ತಮ ಪರಿಹಾರ. ಇಂದು ಸಂವಿಧಾನವನ್ನು ಅಪಹಾಸ್ಯ ನಿರ್ಲಕ್ಷ, ಹಾಗೂ ದುರುಪಯೋಗ ಮಾಡುವವರನ್ನು ನೋಡುತ್ತಿದ್ದೇವೆ. ಅಂಥವರಿಗೆ ಸರಿಯಾದ ಬುದ್ಧಿ ಕಲಿಸಬೇಕು ಎಂದು ಹೇಳಿದರು.

ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ರೋಣ್ ವಾಸುದೇವ್ ಮಾತನಾಡಿ, ಸುಪ್ರೀಂ ಕೋರ್ಟ್ ಈಗಾಗಲೇ ಹೇಳಿರುವಂತೆ, ಪ್ರತಿ ಒಂದು ಮಿಲಿಯನ್ ಜನಸಂಖ್ಯೆಗೆ 50 ಜನ ನ್ಯಾಯಾಧೀಶರು ಇರಬೇಕು. ನಮ್ಮಲ್ಲಿ ಒಂದು ಮಿಲಿಯನ್ ಜನಸಂಖ್ಯೆಗೆ ಕೇವಲ 14 ಮಂದಿ ನ್ಯಾಯಾಧೀಶರು ಇದ್ದಾರೆ. ಕಳೆದ 24 ವರ್ಷಗಳಲ್ಲಿ ನ್ಯಾಯಾಲಯಗಳ ಸಂಖ್ಯೆ, ನ್ಯಾಯಾಧೀಶರ ಸಂಖ್ಯೆ ಹೆಚ್ಚಳವಾಗಿಲ್ಲ. ಹೀಗಿದ್ದರೆ ವ್ಯವಸ್ಥೆ ಸರಿ ಹೋಗುವುದು ಹೇಗೆ ಎಂದು ಪ್ರಶ್ನಿಸಿದರು.

ಹಿರಿಯ ವಕೀಲ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್. ಕಾಂತರಾಜ್, 50 ವರ್ಷ ಸಾರ್ಥಕ ಸೇವೆ ಸಲ್ಲಿಸಿದ ಎನ್. ಜಿ. ಕೃಷ್ಣಮೂರ್ತಿ ಸೇರಿದಂತೆ 25 ವರ್ಷಗಳ ಸೇವೆ ಸಲ್ಲಿಸಿದ ಹಲವು ವಕೀಲರುಗಳನ್ನು ಸನ್ಮಾನಿಸಲಾಯಿತು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವೈ. ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ನ್ಯಾಯಾಧೀಶರುಗಳಾದ ಶಂಕರಪ್ಪ ನಿಂಬಣ್ಣ ಕಲ್ಕಣಿ, ಗಂಗಾಧರ ಸಿ.ಎಚ್, ಮಮತಾ ಡಿ., ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಸಿಇಒ ಸೋಮಶೇಖ‌ರ್, ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ. ಅನಿಲ್‌ ಕುಮಾ‌ರ್, ಪ್ರಧಾನ ಕಾರ್ಯದರ್ಶಿ ಆರ್. ಗಂಗಾಧರ್ ಇದ್ದರು.