ಸಾರಾಂಶ
ಹಿರಿಯೂರು: ನಗರದ ಹೋಟೆಲ್, ಲಾಡ್ಜ್, ಉದ್ದಿಮೆ, ಬ್ಯಾಂಕ್, ಆಸ್ಪತ್ರೆ, ಶಾಲಾ-ಕಾಲೇಜುಗಳೇ ಲಕ್ಷಾಂತರ ರು. ಕಂದಾಯ ಬಾಕಿ ಉಳಿಸಿಕೊಂಡರೆ ನಗರದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ನಗರಸಭೆ ಅಧ್ಯಕ್ಷ ಅಜಯ್ ಕುಮಾರ್ ಪ್ರಶ್ನಿಸಿದರು.
ನಗರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನಗರಸಭೆಯ 2025 - 26ನೇ ಸಾಲಿನ ಕರಡು ಆಯವ್ಯಯ ಅಂದಾಜು ಪಟ್ಟಿ ತಯಾರಿಸುವ ಸಂಬಂಧ ಸಾರ್ವಜನಿಕರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.ಕಂದಾಯವನ್ನೇ ಕಟ್ಟದಿದ್ದರೆ ನಗರದ ಅಭಿವೃದ್ಧಿ ಹೇಗೆ ಸಾಧ್ಯ. ದೊಡ್ಡ ದೊಡ್ಡ ಹೋಟೆಲ್‌ಗಳು, ಲಾಡ್ಜ್‌ಗಳು, ಉದ್ದಿಮೆಗಳು, ಬ್ಯಾಂಕ್ ಗಳು, ಖಾಸಗಿ ಆಸ್ಪತ್ರೆಗಳು, ಶಾಲಾ- ಕಾಲೇಜುಗಳೇ ಲಕ್ಷಾಂತರ ರು ಗಳ ಕಂದಾಯ ಬಾಕಿ ಉಳಿಸಿಕೊಂಡಿವೆ. ಆದಷ್ಟು ಬೇಗ ಅವರೆಲ್ಲಾ ಬಾಕಿಯಿರುವ ಕಂದಾಯ ಕಟ್ಟಬೇಕಾಗಿದೆ ಎಂದರು.
ನಗರದ ಜನರ ಬಹುದಿನಗಳ ಬೇಡಿಕೆಯಾದ ಯುಜಿಡಿಗೆ ಸಂಬಂಧಿಸಿದಂತೆ ಈಗಾಗಲೇ ಹಣ ಮಂಜೂರಾಗಿದ್ದು, ಅದರಲ್ಲಿ ಈಗ 100 ಕೋಟಿ ರು. ಬಿಡುಗಡೆಯಾಗಿದೆ. ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಡಿಪಿಆರ್ ಆಗಿ ಟೆಂಡರ್ ನೋಟಿಫಿಕೇಶನ್ ಗೆ ಹೋಗಿದೆ. ಅಮೃತ್ ಜಿ ಯೋಜನೆಯಡಿಯಲ್ಲಿ 2.50 ಕೋಟಿ ಅನುದಾನ ಬಂದಿದ್ದು, ಪಾರ್ಕ್‌ಗಳ ಅಭಿವೃದ್ಧಿಗಾಗಿ ಬಳಸಬಹುದಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದ್ದೇವೆ. ಅನುಮೋದನೆಯಾಗಿ ಬಂದ ತಕ್ಷಣ ನಗರದ ಬಡಾವಣೆಗಳ ಎಲ್ಲಾ ಪಾರ್ಕ್‌ಗಳಿಗೆ ಕಾರ್ಯಕಲ್ಪ ಒದಗಿಸಲಾಗುವುದು ಎಂದು ತಿಳಿಸಿದರು.ನಗರದ ಮುಖ್ಯ ರಸ್ತೆ ಸೇರಿದಂತೆ ಲಕ್ಕವ್ವನಹಳ್ಳಿ ರಸ್ತೆ, ಟಿಟಿ.ರಸ್ತೆ, ಹುಳಿಯಾರು ರಸ್ತೆ ಎಲ್ಲಾ ಕಡೆ ಪುಟ್‌ಪಾತ್‌ಗಳು ಒತ್ತುವರಿಯಾಗಿವೆ. ತರಕಾರಿ ಅಂಗಡಿಗಳು, ಫುಟ್‌ಪಾತ್ ವ್ಯಾಪಾರಿಗಳು ಪಾದಚಾರಿ ರಸ್ತೆಯನ್ನು ಆಕ್ರಮಿಸಿದ್ದು, ಪ್ರಧಾನ ರಸ್ತೆ ಹಾಗೂ ಹುಳಿಯಾರು ರಸ್ತೆ ಸೇರಿದಂತೆ ಎಲ್ಲಾ ರಸ್ತೆಗಳನ್ನು ಅಗಲೀಕರಣ ಮಾಡುವುದೊಂದೇ ಪರಿಹಾರವಾಗಿದೆ. ಈ ಕಾರ್ಯಕ್ಕೆ ಈಗಾಗಲೇ ಕೈ ಹಾಕಿದ್ದು, ಕೆಲವು ಕಟ್ಟಡ ಮಾಲೀಕರು ನ್ಯಾಯಾಲಯಕ್ಕೆ ಹೋಗಿದ್ದಾರೆ. ನ್ಯಾಯಾಲಯ ಕಾನೂನು ಪ್ರಕಾರ ರಸ್ತೆ ಅಗಲೀಕರಣ ಮಾಡಿ ಎಂಬುದಾಗಿ ಹೇಳಿದ್ದು ಶೀಘ್ರವಾಗಿ ಆ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ಪೌರಾಯುಕ್ತ ಎ.ವಾಸಿಂ ಮಾತನಾಡಿ, ಬೀದಿಬದಿ ವ್ಯಾಪಾರಿಗಳಿಗೆ ಒಂದು ಕಡೆ ವ್ಯಾಪಾರಕ್ಕಾಗಿ ಸ್ಥಳ ನಿಗದಿ ಮಾಡಿಕೊಡಲು ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ. ನಗರದ ಬೈಪಾಸ್‌ನಿಂದ ನಗರಕ್ಕೆ ಬರುವ ರಸ್ತೆಯುದ್ದಕ್ಕೂ ಲಾರಿಗಳನ್ನು ನಿಲ್ಲಿಸುವುದರಿಂದ ಟ್ರಾಫಿಕ್ ಉಂಟಾಗುತ್ತಿದೆ ಎಂಬ ದೂರುಗಳಿದ್ದು, ನಗರದ ಟ್ರಾಫಿಕ್ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ, ಪೊಲೀಸ್ ಇಲಾಖೆ ಜೊತೆ ಚರ್ಚಿಸಿ ಟ್ರಾಫಿಕ್ ಸಿಗ್ನಲ್‌ಗಳ ಅಳವಡಿಕೆ ಸೇರಿದಂತೆ ಸಿಸಿ ಟಿವಿಗಳ ಕಣ್ಗಾವಲು ಅಳವಡಿಕೆ ಮಾಡಲಾಗುತ್ತದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ನಗರಸಭೆ ವ್ಯವಸ್ಥಾಪಕಿ ಮಂಜುಳಾ, ನಗರಸಭೆ ಸದಸ್ಯರಾದ ಬಿ.ಎನ್.ಪ್ರಕಾಶ್, ಲೆಕ್ಕಾಧೀಕ್ಷಕ ಗೋವಿಂದರಾಜು, ಜನಾರ್ಧನ್ ಕರಡಿ, ಆರೋಗ್ಯ ನಿರೀಕ್ಷಕರಾದ ಮೀನಾಕ್ಷಿ, ಅಶೋಕ್, ಮಹಾಲಿಂಗಪ್ಪ, ಎಇಇ ರಾಜು, ಹರ್ಷವರ್ಧನ, ಪ್ರಸನ್ನ, ಶ್ರೀರಂಗಪ್ಪ ಮತ್ತಿತರರಿದ್ದರು.