ಶ್ರೀಶೈಲ ಮಠದಕನ್ನಡಪ್ರಭ ವಾರ್ತೆ ಬೆಳಗಾವಿನಗರದ ಹೃದಯಭಾಗದಲ್ಲಿದ್ದು, ಇತಿಹಾಸ, ಹಸಿರು ಪರಿಸರ, ಶಿಕ್ಷಣ ಹಾಗೂ ಸೇನಾ ಪರಂಪರೆಯನ್ನು ತನ್ನೊಳಗೆ ಕಟ್ಟಿಕೊಂಡಿರುವ ಬೆಳಗಾವಿ ಕಂಟೋನ್ಮೆಂಟ್‌ನ ನಾಗರಿಕ ಪ್ರದೇಶ ಮಹಾನಗರ ಪಾಲಿಕೆಯ ತೆಕ್ಕೆಗೆ ಯಾವಾಗ ಬರಲಿದೆ ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ.
ಶ್ರೀಶೈಲ ಮಠದ
ಕನ್ನಡಪ್ರಭ ವಾರ್ತೆ ಬೆಳಗಾವಿನಗರದ ಹೃದಯಭಾಗದಲ್ಲಿದ್ದು, ಇತಿಹಾಸ, ಹಸಿರು ಪರಿಸರ, ಶಿಕ್ಷಣ ಹಾಗೂ ಸೇನಾ ಪರಂಪರೆಯನ್ನು ತನ್ನೊಳಗೆ ಕಟ್ಟಿಕೊಂಡಿರುವ ಬೆಳಗಾವಿ ಕಂಟೋನ್ಮೆಂಟ್‌ನ ನಾಗರಿಕ ಪ್ರದೇಶ ಮಹಾನಗರ ಪಾಲಿಕೆಯ ತೆಕ್ಕೆಗೆ ಯಾವಾಗ ಬರಲಿದೆ ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ. 756 ಎಕರೆ ನಾಗರಿಕ ಪ್ರದೇಶದ ಹಸ್ತಾಂತರಕ್ಕೆ 70 ಪುಟಗಳ ಸಮಗ್ರ ವರದಿ ಸಿದ್ಧವಾಗಿದೆ. ಕೇಂದ್ರ ರಕ್ಷಣಾ ಸಚಿವಾಲಯದ ನೀತಿಯೂ ಇದೆ. ರಾಜ್ಯ ಸರ್ಕಾರದ ಹಂತದಲ್ಲೂ ಪ್ರಸ್ತಾವನೆ ಪರಿಶೀಲನೆಯಲ್ಲಿದೆ. ಆದರೂ ಅಂತಿಮ ಹಸ್ತಾಂತರಕ್ಕೆ ಇನ್ನೂ ಅನುಮೋದನೆ ದೊರೆತಿಲ್ಲ.
ಕಡತದ ಪಯಣ ಇನ್ನೂ ಮುಗಿದಿಲ್ಲ:ಕಂಟೋನ್ಮೆಂಟ್ ವ್ಯಾಪ್ತಿಯ ನಾಗರಿಕ ವಸಾಹತುಗಳನ್ನು ಆಯಾ ಸ್ಥಳೀಯ ಸ್ವ-ಆಡಳಿತ ಸಂಸ್ಥೆಗಳಿಗೆ ಹಸ್ತಾಂತರಿಸುವ ಕೇಂದ್ರ ರಕ್ಷಣಾ ಸಚಿವಾಲಯದ ನೀತಿಯಡಿ ಬೆಳಗಾವಿಯ 756 ಎಕರೆ ನಾಗರಿಕ ಪ್ರದೇಶದ ಕುರಿತು ವರದಿ ಸಿದ್ಧಪಡಿಸಲಾಗಿದೆ. ಆದರೆ ವರದಿ ಸಿದ್ಧವಾಗುವುದೇ ಹಸ್ತಾಂತರವಲ್ಲ. ಭೂ ಮಾಲೀಕತ್ವದ ಹಕ್ಕುಗಳು, ಸ್ವತ್ತುಗಳ ವರ್ಗಾವಣೆ, ಬಾಕಿ ಇರುವ ಹೊಣೆಗಾರಿಕೆಗಳು, ಸಿಬ್ಬಂದಿ, ರಸ್ತೆ, ನೀರು, ಒಳಚರಂಡಿ ಹಾಗೂ ಇತರೆ ನಾಗರಿಕ ಮೂಲಸೌಕರ್ಯಗಳ ಜವಾಬ್ದಾರಿ ಸೇರಿದಂತೆ ಹಲವು ವಿಷಯಗಳು ಇನ್ನೂ ಅಂತಿಮ ನಿರ್ಧಾರಕ್ಕಾಗಿ ಕಾಯುತ್ತಿವೆ. ಸದ್ಯ ಪ್ರಸ್ತಾವನೆ ಕರ್ನಾಟಕ ನಗರಾಭಿವೃದ್ಧಿ ಇಲಾಖೆಯ ಪರಿಗಣನೆಯಲ್ಲಿದೆ. ರಾಜ್ಯಮಟ್ಟದ ಪರಿಶೀಲನೆ ಬಳಿಕ ಸಚಿವ ಸಂಪುಟ ಹಾಗೂ ರಕ್ಷಣಾ ಸಚಿವಾಲಯದೊಂದಿಗೆ ಚರ್ಚಿಸಿ ಮುಂದಿನ ಹಂತಕ್ಕೆ ಕಳುಹಿಸಬೇಕಿದೆ.
ಹಸ್ತಾಂತರದ ಪ್ರಸ್ತಾವನೆಯಲ್ಲಿ 112 ಎಕರೆ ಅಂಶ ಇದೀಗ ಪ್ರಮುಖ ಚರ್ಚೆಯ ವಿಷಯವಾಗಿದೆ. ಕಂಟೋನ್ಮೆಂಟ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ 112 ಎಕರೆ ನಾಗರಿಕ ಪ್ರದೇಶವನ್ನು ಮಾತ್ರ ಹಸ್ತಾಂತರಿಸಲು ಪ್ರಸ್ತಾಪಿಸಿದ್ದಾರೆ. ಆದರೆ 756 ಎಕರೆ ನಾಗರಿಕ ಪ್ರದೇಶದ ಕುರಿತು ಸಮಗ್ರ ವರದಿ ಸಿದ್ಧವಾಗಿರುವಾಗ 112 ಎಕರೆ ಮಾತ್ರ ಏಕೆ ಎಂಬ ಪ್ರಶ್ನೆ ಎದುರಾಗಿದೆ. ಹಾಗಾದರೆ ಉಳಿದ ಪ್ರದೇಶದ ಸ್ಥಿತಿ ಏನು? ನಾಗರಿಕ ಪ್ರದೇಶದ ಗಡಿ ಯಾವ ಆಧಾರದ ಮೇಲೆ ನಿಗದಿಯಾಗಲಿದೆ? ಅಂತಿಮವಾಗಿ ಮಹಾನಗರ ಪಾಲಿಕೆ ವ್ಯಾಪ್ತಿಗೆ ಎಷ್ಟು ಪ್ರದೇಶ ಬರಲಿದೆ? ಎಂಬ ಪ್ರಶ್ನೆಗಳಿಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.ಕೇಂದ್ರ ರಕ್ಷಣಾ ಸಚಿವಾಲಯದ ಹೊಸ ಮಾರ್ಗಸೂಚಿಗಳು ಮಾತ್ರ ಈ ಪ್ರಕ್ರಿಯೆಗೆ ಹೊಸ ತಿರುವು ನೀಡಿವೆ. ಕಂಟೋನ್ಮೆಂಟ್ ಮಿತಿಯೊಳಗಿನ ನಾಗರಿಕ ವಸಾಹತುಗಳನ್ನು ಸ್ಥಳೀಯ ಪುರಸಭೆ ಸಂಸ್ಥೆಗಳಿಗೆ ಹಸ್ತಾಂತರಿಸಲು ಅವಕಾಶ ಕಲ್ಪಿಸಿರುವುದರಿಂದ, ಅಂತಿಮವಾಗಿ ಗುರುತಿಸಲಾದ ಸಂಪೂರ್ಣ ನಾಗರಿಕ ಪ್ರದೇಶವೇ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಸಾಧ್ಯತೆಯಿದೆ ಎಂಬ ನಿರೀಕ್ಷೆ ಮೂಡಿದೆ. ಆದರೆ ಕೇಂದ್ರದ ಮಾರ್ಗಸೂಚಿ ಇದ್ದರೂ, ರಾಜ್ಯ ಸಚಿವ ಸಂಪುಟದ ಅನುಮೋದನೆ ಹಾಗೂ ಕೇಂದ್ರದ ಅಂತಿಮ ಒಪ್ಪಿಗೆ ಇಲ್ಲದೆ ಹಸ್ತಾಂತರ ಸಾಧ್ಯವಿಲ್ಲ.
ಪಾಲಿಕೆಗೆ ಸೇರಿದರೆ ಏನು ಬದಲಾಗಲಿದೆ?:ನಾಗರಿಕ ಪ್ರದೇಶ ಮಹಾನಗರ ಪಾಲಿಕೆಗೆ ಸೇರಿದರೆ ಅಲ್ಲಿನ ನಿವಾಸಿಗಳ ದೈನಂದಿನ ಬದುಕಿನಲ್ಲೂ ಬದಲಾವಣೆ ನಿರೀಕ್ಷಿಸಲಾಗಿದೆ. ನೀರು ಪೂರೈಕೆ, ರಸ್ತೆ ನಿರ್ವಹಣೆ, ಒಳಚರಂಡಿ, ಕಸ ವಿಲೇವಾರಿ, ಬೀದಿ ದೀಪ, ಕಟ್ಟಡ ಪರವಾನಗಿ ಸೇರಿದಂತೆ ಹಲವು ಮೂಲಸೌಲಭ್ಯಗಳು ಪಾಲಿಕೆಯ ವ್ಯಾಪ್ತಿಗೆ ಬರಬಹುದು. ತೆರಿಗೆ ವ್ಯವಸ್ಥೆಯಲ್ಲೂ ಬದಲಾವಣೆ ಸಂಭವಿಸುವ ಸಾಧ್ಯತೆಯಿದೆ. ಕಂಟೋನ್ಮೆಂಟ್‌ನ ಆಸ್ತಿಗಳು ಯಾರ ಪಾಲಾಗಲಿವೆ? ಸಿಬ್ಬಂದಿಯ ಗತಿ ಏನು? ರಸ್ತೆ, ಚರಂಡಿ ಹಾಗೂ ಇತರೆ ಮೂಲಸೌಕರ್ಯಗಳ ನಿರ್ವಹಣೆ ಯಾರ ಹೊಣೆ? ಬಾಕಿ ಇರುವ ಆರ್ಥಿಕ ಹೊಣೆಗಾರಿಕೆಗಳನ್ನು ಯಾರು ವಹಿಸಿಕೊಳ್ಳಲಿದ್ದಾರೆ? ಎಂಬುದಕ್ಕೆ ಹಸ್ತಾಂತರಕ್ಕೂ ಮುನ್ನ ಸ್ಪಷ್ಟ ಉತ್ತರ ಬೇಕಿದೆ.ಎರಡ್ಮೂರು ತಿಂಗಳು ಬೇಕು:
ಕಂಟೋನ್ಮೆಂಟ್‌ನ ನಾಗರಿಕ ಪ್ರದೇಶದ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ಎರಡರಿಂದ ಮೂರು ತಿಂಗಳು ಬೇಕಾಗಬಹುದು. ಅಂತಿಮವಾಗಿ ನಾಗರಿಕ ಪ್ರದೇಶವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.ಆದರೆ ಕಡತದ ಹಂತಗಳು ಇನ್ನೂ ಹಲವು ಇರುವುದರಿಂದ ಎರಡು–ಮೂರು ತಿಂಗಳ ನಂತರವೇ ನಿಜವಾದ ಹಸ್ತಾಂತರ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಯಿದೆ.
ಕಂಟೋನ್ಮೆಂಟ್ ಇತಿಹಾಸ..
ಬೆಳಗಾವಿ ಕಂಟೋನ್ಮೆಂಟ್‌ಗೆ ಎರಡು ಶತಮಾನಗಳ ಇತಿಹಾಸವಿದೆ. 1832ರಲ್ಲಿ ಸ್ಥಾಪನೆಯಾದ ಕಂಟೋನ್ಮೆಂಟ್, ಮುಖ್ಯ ಕಂಟೋನ್ಮೆಂಟ್ ಮತ್ತು ಕೋಟೆ ವಲಯ ಎಂಬ ಎರಡು ಭಾಗಗಳನ್ನು ಒಳಗೊಂಡಿದೆ. ಕಂಟೋನ್ಮೆಂಟ್ ಎಂದರೆ ಕೇವಲ ಸೇನಾ ನೆಲೆ ಎಂಬ ಕಲ್ಪನೆಗೆ ಮೀರಿದ ಹಲವು ಆಯಾಮಗಳು ಇಲ್ಲಿವೆ. ವಿಶಾಲವಾದ ಹಸಿರು ಪ್ರದೇಶ, ಮರಗಳ ಸಾಲು, ಅಚ್ಚುಕಟ್ಟಾದ ರಸ್ತೆಗಳು ಹಾಗೂ ವಾಯುವಿಹಾರಕ್ಕೆ ಸೂಕ್ತವಾದ ವಾತಾವರಣದಿಂದ ಇದು ಬೆಳಗಾವಿಯ ಹಸಿರು ಶ್ವಾಸಕೋಶದಂತಿದೆ. ಬೆಳಗಿನ ಜಾವ ವಾಯುವಿಹಾರಕ್ಕೆ ಬರುವ ಜನರಿಗೆ ಇದು ನೆಚ್ಚಿನ ತಾಣ. ಅಲ್ಲದೇ, ಇದು ರಾಜ್ಯದ ಏಕೈಕ ಕಂಟೋನ್ಮೆಂಟ್ ಎಂಬ ಹೆಗ್ಗಳಿಕೆಯೂ ಇದೆ. ಮರಾಠಾ ಲಘು ಪದಾತಿದಳದ ರೆಜಿಮೆಂಟಲ್ ಕೇಂದ್ರ, ಕಿರಿಯ ನಾಯಕರ ತರಬೇತಿ ವಿಭಾಗ ಸೇರಿದಂತೆ ಹಲವು ಪ್ರಮುಖ ಸೇನಾ ಸ್ಥಾಪನೆಗಳು ಕಂಟೋನ್ಮೆಂಟ್‌ನಲ್ಲಿವೆ. ಹೀಗಾಗಿ ಸೇನಾ ನೆಲೆ, ನಾಗರಿಕ ವಸಾಹತು, ಶಿಕ್ಷಣ ಕೇಂದ್ರ, ಐತಿಹಾಸಿಕ ತಾಣ ಹಾಗೂ ಹಸಿರು ಪ್ರದೇಶಗಳ ಅಪರೂಪದ ಸಂಗಮವೇ ಬೆಳಗಾವಿ ಕಂಟೋನ್ಮೆಂಟ್. ಇಂತಹ ಐತಿಹಾಸಿಕ ಹಿನ್ನೆಲೆ ಹೊಂದಿರುವ ಕಂಟೋನ್ಮೆಂಟ್‌ನ ನಾಗರಿಕ ಪ್ರದೇಶದ ಭವಿಷ್ಯದ ಬಗ್ಗೆ ಚರ್ಚೆ ನಡೆಯುತ್ತಿವೆ.ದಂಡುಮಂಡಳಿ ಪ್ರದೇಶವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಕುರಿತು ಯಾವುದೇ ಅಂತಿಮ ನಿರ್ಧಾರವಾಗಿಲ್ಲ. 112 ಎಕರೆ ಪ್ರದೇಶವನ್ನು ಹೊರತುಪಡಿಸುವ ಪ್ರಸ್ತಾವ ಮಾತ್ರ ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ. 756 ಎಕರೆ ಹಸ್ತಾಂತರದ ಪ್ರಸ್ತಾವನೆಗೆ ಡಿಒ ಹಾಗೂ ಸ್ಥಳೀಯ ಮಿಲಿಟರಿ ಪ್ರಾಧಿಕಾರದಿಂದ ಆಕ್ಷೇಪವಿದೆ. ಅಂತಿಮ ತೀರ್ಮಾನ ಕೇಂದ್ರ ರಕ್ಷಣಾ ಸಚಿವಾಲಯದ್ದಾಗಿದೆ. ಅಲ್ಲಿಯವರೆಗೆ ಸಾರ್ವಜನಿಕರು ಹಾಗೂ ಗುತ್ತಿಗೆದಾರರು ಆತಂಕಪಡುವ ಅಗತ್ಯವಿಲ್ಲ.- ಮಂಚಲವಾರ ಸುದಾಮ ಹರಿವಿಜಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಬೆಳಗಾವಿ ದಂಡುಮಂಡಳಿ
ದಂಡುಮಂಡಳಿಯ ನಾಗರಿಕ ಪ್ರದೇಶವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಪ್ರಕ್ರಿಯೆ ಇನ್ನೂ ಅಂತಿಮ ಹಂತ ತಲುಪಿಲ್ಲ. 756 ಎಕರೆ ಪ್ರದೇಶದ ಕುರಿತು ಪ್ರಸ್ತಾವ ಪರಿಶೀಲನೆಯಲ್ಲಿದೆ. ರಾಜ್ಯ ಸಚಿವ ಸಂಪುಟದ ಅನುಮೋದನೆ ಹಾಗೂ ಕೇಂದ್ರ ರಕ್ಷಣಾ ಸಚಿವಾಲಯದ ಅಂತಿಮ ಒಪ್ಪಿಗೆಯ ಬಳಿಕವೇ ಹಸ್ತಾಂತರ ಪ್ರಕ್ರಿಯೆ ಆರಂಭವಾಗಲಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ಎರಡರಿಂದ ಮೂರು ತಿಂಗಳು ಬೇಕಾಗಬಹುದು. ಅಂತಿಮವಾಗಿ ನಾಗರಿಕ ಪ್ರದೇಶ ಮಹಾನಗರ ಪಾಲಿಕೆಗೆ ಹಸ್ತಾಂತರವಾಗುವ ವಿಶ್ವಾಸವಿದೆ.
- ಮೊಹಮ್ಮದ ರೋಷನ್, ಜಿಲ್ಲಾಧಿಕಾರಿ, ಬೆಳಗಾವಿ