ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಬಿಜೆಪಿ ಅಧಿಕಾರದಲ್ಲಿ ಬಸವರಾಜ ಬೊಮ್ಮಾಯಿ ನೀರಾವರಿ ಸಚಿವರಾಗಿದ್ದಾಗ ಎಷ್ಟು ಅಣೆಕಟ್ಟುಗಳಿಗೆ ಭೇಟಿ ನೀಡಿದ್ದರು? ಗಟ್ಟಿತನದ ಸಮೀಕ್ಷೆ ನಡೆಸಿದ್ದರು? ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಖಾರವಾಗಿ ಪ್ರಶ್ನಿಸಿದ್ದಾರೆ.ನಗರದ ಐವಾನ್ ಇ ಶಾಹಿ ಅತಿಥಿ ಗೃಹದಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಧಿಕಾರದಲ್ಲಿದ್ದಾಗ ಎಲ್ಲಿಯೂ ಹೋಗದೆ ಏನೂ ಮಾಡದೆ ಇದ್ದವರಿಂದ ನಾವು ಪಾಠ ಕಲಿಯಬೇಕಾಗಿಲ್ಲ ಎಂದರು.
ತುಂಗಭದ್ರಾ ಡ್ಯಾಂ ಗೇಟ್ ಕೊಚ್ಚಿ ಹೋದ ಪ್ರಕರಣ ಹಿನ್ನೆಲೆಯಲ್ಲಿ ಅಗತ್ಯಕ್ರಮ ಕೈಗೊಳ್ಳಲಾಗುವುದು. ಡಿಸಿಎಂ ಅವರು ಭೇಟಿ ನೀಡಿದ್ದಾರೆ. ಜೊತೆಗೆ ಆಣೆಕಟ್ಟುಗಳ ಗಟ್ಟಿತನದ ಸಮೀಕ್ಷೆ ನಡೆಸಲಾಗುತ್ತದೆ ಎಂದೂ ಹೇಳಿದರು.ತಾಂತ್ರಿಕ ಸಮಸ್ಯೆಯಿಂದ ಘಟನೆ ನಡೆದಿದೆ. ಏನಾದರೂ ಲೋಪದೋಷವಾಗಿದ್ದರೆ ಕ್ರಮ ಕೈಗೊಳ್ಳಲಾಗುವುದು. ಮೊದಲ ಬೆಳೆಗೆ ನೀರಿನ ತೊಂದರೆ ಇಲ್ಲ ಎರಡನೆಯ ಬೆಳೆಗೂ ತೊಂದರೆಯಾಗದು. ತುಂಗಾಭದ್ರ ಡ್ಯಾಂಗೆ ಸಮನಾಂತರ ಸೇತುವೆ ನಿರ್ಮಾಣಕ್ಕೆ ಸಮೀಕ್ಷೆ ನಡೆಸಲಾಗಿದೆ ಎಂದರು.
ಕೆಕೆಆರ್‌ಡಿಬಿ ಅಕ್ರಮಗಳ ತನಿಖೆ:ಕೆಕೆಆರ್‌ಡಿಬಿಯಲ್ಲಿ ನಡೆದಿರುವ ಅಕ್ರಮಗಳ ತನಿಖೆ ನಡೆಯುತ್ತಿದೆ. ಪ್ರಾಥಮಿಕ ವರದಿ ಬಂದಿದೆ. ಕೆಲ ಅಧಿಕಾರಿಗಳು ನಿವೃತ್ತರಾಗಿದ್ದಾರೆ. ನಿವೃತ್ತ ಅಧಿಕಾರಿಗಳ ಬದಲು ಪಸ್ತುತ ಕರ್ತವ್ಯದಲ್ಲಿರುವ ಐಎಎಸ್ ಅಧಿಕಾರಿಗಳಿಂತ ತನಿಖೆ ನಡೆಸಲಾಗುವುದು.
ಮುಡಾ ಹಗರಣ ರಾಜಕೀಯ ಪ್ರೇರಿತ: ಮುಡಾ ಪ್ರಕರಣ ರಾಜಕೀಯ ದುರುದ್ದೇಶದಿಂದ ಮಾಡಲಾಗುತ್ತಿದೆ. ರಾಜ್ಯಪಾಲರ ಕಚೇರಿ ಬಿಜೆಪಿಯ ಪ್ರಾದೇಶಿಕ ಕಚೇರಿಯಾಗಿ ಮಾರ್ಪಟ್ಟಿದೆ. ಎಲ್ಲೆಲ್ಲಿ ಬಿಜೆಪಿ ಬಲಹೀನವಾಗಿದೆ ಅಲ್ಲಲ್ಲಿ ರಾಜಭವನದ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ.ರಾಜಭವನ ದುರಪಯೋಗ: ಜು.5 ರಂದು ಸಿಎಂಗೆ ರಾಜ್ಯಪಾಲರು ಪತ್ರ ಬರೆಯುತ್ತಾರೆ. ಮತ್ತೆ 15ನೇ ತಾರೀಖಿಗೆ ಮತ್ತೊಂದು ಪತ್ರ ಬರೆಯುತ್ತಾರೆ. 26 ರಂದು ಈ ಬಗ್ಗೆ ಸರ್ಕಾರ ನೂರು ಪುಟಗಳ ಉತ್ತರ ಸಲ್ಲಿಸಿದೆ. ಅದೇ ದಿನ ಅಬ್ರಾಹಂ ದೂರು ದಾಖಲಿಸಿದ ಕೂಡಲೇ ರಾಜ್ಯಪಾಲರು ಸಿಎಂಗೆ ನೋಟಿಸ್ ಕೊಡುತ್ತಾರೆ. ಸರ್ಕಾರದ ಉತ್ತರವನ್ನು ಕೂಡಾ ಪರಿಶೀಲನೆ ನಡೆಸದೆ, ಕೇವಲ ಖಾಸಗಿ ದೂರು ದಾಖಲಿಸಿದ ತಕ್ಷಣ ಶೋಕಾಸ್ ನೋಟಿಸ್ ನೀಡಲಾಗಿದೆ. ದೂರದಾರರ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಚಾರ, ಪ್ರಕರಣವೊಂದರಲ್ಲಿ ಅವರಿಗೆ ಸುಪ್ರಿಂ ಕೋರ್ಟ್ ದಂಡ ಹಾಕಿದೆ. ಅಂತವರ ಮಾತು ರಾಜ್ಯಪಾಲರು ಕೇಳುತ್ತಾರೆ ಎಂದರೆ ಮೇಲಿನಿಂದ ಅವರಿಗೆ ಆದೇಶ ಬಂದಿದೆ. ರಾಜ್ಯಪಾಲರು ಅವರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ರಾಜಭವನ ದುರಪಯೋಗವಾಗುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಪಾದಯಾತ್ರೆ: ಬಿಜೆಪಿ ನಾಯಕರ ಪಾದಯಾತ್ರೆ ಕುರಿತಂತೆ ಮಾತನಾಡಿದ ಅವರು, ವಿಜಯೇಂದ್ರ ಹಾಗೂ ಅಶೋಕ ಅವರ ನಾಯಕತ್ವವನ್ನು ಬಿಜೆಪಿಯ ಮತ್ತೊಂದು ಗುಂಪು ಒಪ್ಪುತ್ತಿಲ್ಲ. ಇದು ಬಿಜೆಪಿ ವರ್ಸಸ್ ಬಿಜೆಪಿಯಾಗಿದೆ. ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ದಿಲ್ಲಿ ಚಲೋ ಮಾಡಿದರೆ ನಾವೇ ಅವರಿಗೆ ಬೆಂಬಲ ಕೊಡುತ್ತೇವೆ ಎಂದರು.ಗುರುಮಿಠಕಲ್ ಶಾಸಕರು ತಮ್ಮ ಕ್ಷೇತ್ರದಲ್ಲಿ ಖರ್ಗೆ ಕುಟುಂಬ ಹಸ್ತಕ್ಷೇಪ ಮಾಡುತ್ತಿದೆ ಎಂದು ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಅವರ ಬಗ್ಗೆ ಹೆಚ್ಚಿಗೆ ಮಾತನಾಡುವುದಿಲ್ಲ. ಅವರು ತಮಗೆ ಬರುವ ಕಾಲ್ ರೆಕಾರ್ಡಿಂಗ್ ಮಾಡಿಕೊಂಡು ಏನೇನೂ ಮಾಡಿದರು ಎನ್ನುವ ಬಗ್ಗೆ ಎಲ್ಲರಿಗೂ ಗೊತ್ತಿದೆ. ಬೇರೆ ಶಾಸಕರ ಕ್ಷೇತ್ರದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮಠಕ್ಕೆ ನೋಟಿಸ್, ತಪ್ಪೇನಿದೆ?:ಅಂದೋಲಮಠಕ್ಕೆ ಮಹಾನಗರ ಪಾಲಿಕೆ ನೋಟಿಸ್ ಕೊಟ್ಟಿದೆ ಅದರಲ್ಲೇನು ತಪ್ಪಿದೆ? ಆಂದೋಲ ಸ್ವಾಮಿ ಬಗ್ಗೆ ಮಾತನಾಡಲು ನನಗೆ ಪುರುಸೊತ್ತಿಲ್ಲ. ನನಗೆ ಮಾಡಲು ಬಹಳ ಕೆಲಸಗಳಿವೆ ಎಂದರು. ಈ ವೇಳೆ ಶಾಸಕ ಅಲ್ಲಂಪ್ರಭು ಪಾಟೀಲ್ ಇದ್ದರು.