ಹದಿನಾರು ಬಜೆಟ್‌ ಮಂಡಿಸಿರುವ ಸಿದ್ದರಾಮಯ್ಯ ಅವರು ಅಹಿಂದ ವರ್ಗಗಳಿಗೆ ಏನು ಅನುಕೂಲ ಮಾಡಿದ್ದಾರೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಪ್ರಶ್ನಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹದಿನಾರು ಬಜೆಟ್‌ ಮಂಡಿಸಿರುವ ಸಿದ್ದರಾಮಯ್ಯ ಅವರು ಅಹಿಂದ ವರ್ಗಗಳಿಗೆ ಏನು ಅನುಕೂಲ ಮಾಡಿದ್ದಾರೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಪ್ರಶ್ನಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ, ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯಕ್ಕೆ ಬೆಲೆ ಸಿಗಬೇಕಾದರೆ ಶೇ.75ರಷ್ಟು ಮೀಸಲಾತಿ ಬೇಕು ಎಂಬ ಮಾತನ್ನು ಸಿದ್ದರಾಮಯ್ಯ ಹೇಳಿದ್ದಾರೆ. 16 ಬಜೆಟ್‌ ಮಂಡಿಸಿರುವ ಅವರು ಅಹಿಂದ ವರ್ಗಗಳಿಗೆ ಶೇಕಡಾ ಎಷ್ಟು ಅನುದಾನ ನೀಡಿದ್ದರು ಎಂಬುದನ್ನು ಹೇಳಲಿ ಎಂದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಿದ್ದರು. ಅದಕ್ಕೆ ಸುಮಾರು 70 ಕೋಟಿ ರು. ಖರ್ಚು ಮಾಡಿದ್ದರು. ಅದರಿಂದ ಯಾರಿಗೆ ಅನುಕೂಲವಾಗಿದೆ ಎಂದು ಅವರೇ ಹೇಳಬೇಕು. ಅಹಿಂದ ವರ್ಗದವರನ್ನು ಹೆಚ್ಚು ಎಂಎಲ್ಸಿ ಮತ್ತು ಎಂಎಲ್‌ಎ ಮಾಡಿದವರು ಯಾರು ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರನ್ನು ಶಾಸಕ ಮಾಡಲು ಗಲ್ಲಿ ಗಲ್ಲಿ ಸುತ್ತಿದ್ದೇನೆ. ವೀರೇಂದ್ರ ಪಾಟೀಲ್‌ ಅವರನ್ನು ಮಂತ್ರಿ ಮಾಡಿದ್ದು ಯಾರು? ರೋಷನ್‌ ಬೇಗ್‌ ಅವರನ್ನು ಗೃಹ ಸಚಿವ ಮಾಡಿದ್ದು ಯಾರು? ಸಿ.ಎಂ.ಇಬ್ರಾಹಿಂ ಅವರನ್ನು ಕೇಂದ್ರದ ಮಂತ್ರಿ ಮಾಡಿದ್ದು ಯಾರು? ಅವರು ಎಷ್ಟು ಜನ ಮುಸ್ಲಿಮರನ್ನು ಎಂಎಲ್ಸಿ ಮಾಡಿದ್ದಾರೆ ಎಂದು ಹೇಳಲಿ. ಅವರು ಇಬ್ಬರನ್ನು ಮಂತ್ರಿ ಮಾಡಿದ್ದಾರೆ. ಅದನ್ನು ಒಪ್ಪಿಕೊಳ್ಳುತ್ತೇನೆ. ನಾನು ಸುಮಾರು 26 ಮಂದಿ ಮುಸ್ಲಿಮರನ್ನು ಎಂಎಲ್ಸಿ ಮಾಡಿದ್ದೇನೆ. ಸಿದ್ದರಾಮಯ್ಯ ಎಷ್ಟು ಜನರನ್ನು ಮಾಡಿದ್ದಾರೆ ಎಂದು ಹೇಳಲಿ ಎಂದು ದೇವೇಗೌಡ ಆಗ್ರಹಿಸಿದರು.