ವಾಹನಗಳ ನಂಬರ್ ಪ್ಲೇಟ್ ಗೋಚರಿಸದಿದ್ದರೆ ಹೇಗೆ ದಂಡ ವಿಧಿಸುತ್ತೀರಿ?

| Published : Jun 30 2024, 12:51 AM IST

ಸಾರಾಂಶ

ಪ್ರಕರಣ ದಾಖಲಾದ ಮಾಹಿತಿಯನ್ನು ಕೂಡಲೇ ವಾಹನದ ನೊಂದಾಯಿತ ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್ ಕಳುಹಿಸಲಾಗುವುದು.

ಕನ್ನಡಪ್ರಭ ವಾರ್ತೆ ಮೈಸೂರುಮುರಿದ ನಂಬರ್ಪ್ಲೇಟ್, ಮುಚ್ಚಿದ ನಂಬರ್ ಪ್ಲೇಟ್ಇ ದ್ದಾಗ ಹೇಗೆ ದಂಡ ವಿಧಿಸುತ್ತೀರಿ ಎಂದು ನ್ಯಾಯವಾದಿ ಪಿ.ಜೆ. ರಾಘವೇಂದ್ರ ಪೊಲೀಸರನ್ನು ಪ್ರಶ್ನಿಸಿದ್ದಾರೆ.ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ರಸ್ತೆ ಅಪಘಾತ ಸಂಭವಿಸುತ್ತಿದ್ದು, ಪ್ರತಿದಿನ 1 ರಿಂದ 2 ಮಂದಿ ಮೃತಪಡುತ್ತಿದ್ದಾರೆ. ವಾರ್ಷಿಕ ಸರಾಸರಿ 450 ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಸಂಬಂಧ ಜಿಲ್ಲೆಯ ಎಲ್ಲಾ ಠಾಣಾ ವ್ಯಾಪ್ತಿಯ 23 ಸ್ಥಳಗಳಲ್ಲಿ ಒಟ್ಟು 50 ಕ್ಯಾಮರಾ ಅಳವಡಿಸಲಾಗಿದೆ.ಈ ಕ್ಯಾಮೆರಾಗಳು ಜು. 1 ರಿಂದ ಚಾಲನೆಗೊಳ್ಳುತ್ತಿದ್ದು ಸಂಚಾರ ನಿಯಮಗಳ ಉಲ್ಲಂಘನೆ (ಹೆಲ್ಮೆಟ್ ಧರಿಸದೇ ಚಲಿಸುವುದು, ಟ್ರಿಪಲ್ ರೈಡಿಂಗ್, ಸೀಟ್ ಬೆಲ್ಟ್ ಧರಿಸದೇ ಇರುವುದು, ಕೋ ಪ್ಯಾಸೆಂಜರ್ ಒಳಗೊಂಡಂತೆ) ಹಾಗೂ ವಾಹನ ಚಾಲನೆಯಲ್ಲಿ ಮೊಬೈಲ್ ಬಳಕೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುವುದು ಎಂದು ಮೈಸೂರಿನ ಎಸ್ಪಿ ಸೀಮಾ ಲಾಟ್ಕರ್ ಸೂಚಿಸಿದ್ದಾರೆ.ಪ್ರಕರಣ ದಾಖಲಾದ ಮಾಹಿತಿಯನ್ನು ಕೂಡಲೇ ವಾಹನದ ನೊಂದಾಯಿತ ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್ ಕಳುಹಿಸಲಾಗುವುದು. ವಾಹನದ ವಾರಸುದಾರರ ವಿಳಾಸಕ್ಕೆ ಚಲನ್ ರವಾನಿಸಲಾಗುವುದು. ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನದ ಮಾಲೀಕರು, ಚಾಲಕರು ಆನ್ಲೈನ್ ವೆಬ್ ಸೈಟ್ ಅಥವಾ ಹತ್ತಿರದ ಪೊಲೀಸ್ ಠಾಣೆಯಲ್ಲಿ ದಂಡದ ಮೊತ್ತವನ್ನು ಕೂಡಲೇ ಪಾವತಿಸಬೇಕು. ದಂಡ ಪಾವತಿಸದಿದ್ದಲ್ಲಿ ಮೋಟಾರು ವಾಹನ ಕಾಯ್ದೆ 1988 ಕಲಂ 187ರನ್ವಯ 3 ತಿಂಗಳು ಕಾರಾಗೃಹ ವಾಸ ಅಥವಾ 500 ರೂ. ದಂಡ ಅಥವಾ ಎರಡನ್ನೂ ಅನುಭವಿಸಬೇಕಾಗುತ್ತದೆ ಎಂದು ಎಸ್ಪಿ ಎಚ್ಚರಿಸಿದ್ದಾರೆ.ಆದ್ದರಿಂದ ಸಾರ್ವಜನಿಕರು ಸಂಚಾರಿ ನಿಯಮ ಪಾಲಿಸಿ ಅಪರಾಧಗಳನ್ನು ತಡೆಗಟ್ಟಲು ಸಹಕರಿಸಬೇಕು ಎಂದು ಅವರು ಕೋರಿದ್ದಾರೆ.ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳಿಗೆ ನಂಬರ್ ಪ್ಲೇಟುಗಳೇ ಇಲ್ಲದಿದ್ದರೆ ಅಥವಾ ನಂಬರ್ ಪ್ಲೇಟ್ ಗೋಚರಿಸದಿದ್ದರೆ. ನಂಬರ್ ಪ್ಲೇಟ್ ಮರೆಮಾಚಿದ್ದರೆ, ನಂಬರ್ ಪ್ಲೇಟ್ ಮುರಿದು ಹೋಗಿದ್ದರೆ,ನಂಬರ್ ಪ್ಲೇಟಿನ ನಂಬರ್ ಮೇಲೆ ಸ್ಟಿಕ್ಕರ್ ಅಂಟಿಸಿದ್ದರೆ ಅಂತಹ ವಾಹನಗಳ ಮಾಲೀಕರನ್ನು ಪೊಲೀಸರು ಪತ್ತೆ ಹಚ್ಚುವುದು ಹೇಗೆ?ಪ್ರಕರಣ ದಾಖಲಿಸುವುದು ಹೇಗೆ? ದಂಡ ವಿಧಿಸುವುದು ಹೇಗೆ?ನಗರ ಹಾಗೂ ಜಿಲ್ಲೆಯಲ್ಲಿ ಸಂಚರಿಸುವ ಶೇ. 50 ವಾಹನಗಳ ನಂಬರ್ ಪ್ಲೇಟ್ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿಲ್ಲ. ಟ್ರಕ್, ಲಾರಿ, ಗೂಡ್ಸ್ ಆಟೋ ಮುಂತಾದ ವಾಹನಗಳ ನಂಬರ್ ಪ್ಲೇಟ್ ಕಂಬಿಗಳ ಹಿಂದೆ ಅವಿತಿರುತ್ತದೆ. ಲಾರಿಗಳ ನಂಬರ್ ಪ್ಲೇಟ್‌ಗೆ ಧೂಳು, ಸಿಮೆಂಟ್ ಮೆತ್ತಿದೆ. ಮರಳಿನ ಲಾರಿಗಳ ನಂಬರ್ ಪ್ಲೇಟನ್ನು ಮಡಚಲಾಗಿದೆ. ಸರ್ಕಾರಿ ವಾಹನಗಳೂ ಸೇರಿದಂತೆ ಹಲವು ವಾಹನಗಳ ನಂಬರ್ ಪ್ಲೇಟ್ ಉದ್ದೇಶಪೂರ್ವಕವಾಗಿ ಮುರಿದಿರುತ್ತದೆ ಎಂದು ತಿಳಿಸಿದ್ದಾರೆ.ಪಲ್ಸರ್, ಹೋಂಡಾ, ಬಜಾಜ್, ಟಿವಿಎಸ್ ಮುಂತಾದ ಬೈಕ್ ಎದುರಿನ ನಂಬರ್ ಪ್ಲೇಟ್ ಡೂಮಿನ ಅಡಿಯಲ್ಲಿ ತಲೆ ಮರೆಸಿಕೊಂಡಿರುತ್ತದೆ. ಇಂತಹ ವಾಹನಗಳ ನಂಬರ್ ಪ್ಲೇಟನ್ನು ಗಮನಿಸಬೇಕಾದರೆ ರಸ್ತೆಯಲ್ಲಿ ಮಲಗಿ ವಾಹನದಡಿ ನುಗ್ಗಿ ಓದಬೇಕಾಗುತ್ತದೆ.ಬೈಕಿನ ಡೂಮಿನ ಕೆಳಗೆ ಹಾಗೂ ಗೂಡ್ಸ್ ವಾಹನಗಳ ಕಂಬಿಗಳ ಹಿಂದೆ ಅವಿತಿರುವ ನಂಬರ್ ಪ್ಲೇಟಿನಲ್ಲಿರುವ ಸಂಖ್ಯೆಯನ್ನು 20 ಅಡಿ ಎತ್ತರದಲ್ಲಿ ಅಳವಡಿಸಿದ ಕ್ಯಾಮರಾ ಕಣ್ಣು ಸೆರೆ ಹಿಡಿಯಲು ಸಾಧ್ಯವೇ? ಖಂಡಿತಾ ಇಲ್ಲ.ವಿರೂಪಗೊಂಡ, ಮಡಚಿದ, ಮುರಿದ ಹಾಗೂ ಅವಿತಿರುವ ನಂಬರ್ ಪ್ಲೇಟುಗಳುಳ್ಳ ವಾಹನಗಳನ್ನು ಪತ್ತೆ ಹಚ್ಚಿ ದಂಡಿಸಿದರೆ ಶೇ. 75ರಷ್ಟು ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣ ಕಡಿಮೆಯಾಗುತ್ತದೆ.ಹೆಲ್ಮೆಟ್ ಧರಿಸದ ವಾಹನ ಸವಾರರು ಹಾಗೂ ಸೀಟ್ ಬೆಲ್ಟ್ ಧರಿಸದ ವಾಹನ ಸವಾರರು ಅಪಘಾತದಲ್ಲಿ ಮೃತರಾದರೆ ಅದು ಸ್ವಯಂಕೃತ ಅಪರಾಧ. ಇದು ಆತ್ಮಹತ್ಯೆಗೆ ಸಮ.ಆದರೆ ನಂಬರ್ ಪ್ಲೇಟನ್ನು ಮರೆಮಾಚಿ ಅಥವಾ ನಂಬರ್ ಪ್ಲೇಟ್ ಕಳಚಿಟ್ಟು ವಾಹನ ಸವಾರಿ/ಚಾಲನೆ ಮಾಡುವವರಿಂದ ಸಮಾಜ ಘಾತುಕ ಕೃತ್ಯಗಳು ನಡೆಯಬಹುದು.ಹಾಗಾಗಿ ಮೈಸೂರಿನ ಎಸ್ಪಿ ಹಾಗೂ ಪೊಲೀಸ್ ಆಯುಕ್ತರು ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಕಾರ್ಯಾಚರಣೆ ಬದಿಗಿಟ್ಟು,ನಂಬರ್ ಪ್ಲೇಟ್ ಕಾರ್ಯಾಚರಣೆಯತ್ತ ಗಮನಹರಿಸಿದರೆ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳ ಜೊತೆಗೆ ಗಂಭೀರ ಅಪರಾಧಗಳ ಸಂಖ್ಯೆಯೂ ಇಳಿಮುಖ ಆಗಬಹುದು ಎಂದು ರಾಘವೇಂದ್ರ ಅವರು ತಿಳಿಸಿದ್ದಾರೆ.