ರೋಣ ಮತ್ತು ಗಜೇಂದ್ರಗಡ ತಾಲೂಕುಗಳ ವಿದ್ಯಾರ್ಥಿನಿಯರಿಗಾಗಿ ಮಾತೋಶ್ರೀ ಬಸಮ್ಮನವರ ಪುಣ್ಯಸ್ಮರಣೆ ದಿನ ಮೊದಲ ಹಂತದಲ್ಲಿ 844 ವಿದ್ಯಾರ್ಥಿನಿಯರಿಗೆ ಲಸಿಕೆ ನೀಡಲಾಗಿದೆ.

ರೋಣ: ಗರ್ಭಕಂಠ ಕ್ಯಾನ್ಸರ್‌ ತಡೆಗೆ 9ರಿಂದ 14 ವರ್ಷದೊಳಗಿನ ಪ್ರತಿಯೊಬ್ಬ ಹೆಣ್ಣುಮಕ್ಕಳಿಗೆ ಎಚ್‌ಪಿವಿ ಲಸಿಕೆ ಹಾಕಿಸಬೇಕು. ರೋಣ ಹಾಗೂ ಗಜೇಂದ್ರಗಡ ತಾಲೂಕುಗಳಲ್ಲಿ ಉಚಿತ ಎಚ್‌ಪಿವಿ ಲಸಿಕೆಯನ್ನು ಹಾಕಿಸಲಾಗುತ್ತಿದ್ದು, ಲಸಿಕೆಯು ಗರ್ಭಕಂಠದ ಕ್ಯಾನ್ಸರ್ ಉಂಟಾಗದಂತೆ ಪ್ರತಿರೋಧಕ ಶಕ್ತಿಯನ್ನು ಉಂಟುಮಾಡುತ್ತದೆ ಎಂದು ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.ಬುಧವಾರ ಪಟ್ಟಣದ ಗುರುಭವನದಲ್ಲಿ 2ನೇ ಹಂತದ ಎಚ್‌ಪಿವಿ ಲಸಿಕೆ ಅಭಿಯಾನ ಸಮಾರಂಭದಲ್ಲಿ ಮಾತನಾಡಿದರು.ರೋಣ ಮತ್ತು ಗಜೇಂದ್ರಗಡ ತಾಲೂಕುಗಳ ವಿದ್ಯಾರ್ಥಿನಿಯರಿಗಾಗಿ ಮಾತೋಶ್ರೀ ಬಸಮ್ಮನವರ ಪುಣ್ಯಸ್ಮರಣೆ ದಿನ ಮೊದಲ ಹಂತದಲ್ಲಿ 844 ವಿದ್ಯಾರ್ಥಿನಿಯರಿಗೆ ಲಸಿಕೆ ನೀಡಲಾಗಿದೆ. ಈಗ ಮತ್ತೇ ಆ ಎಲ್ಲ 844 ವಿದ್ಯಾರ್ಥಿನಿಯರಿಗೂ ಎರಡನೇ ಹಂತದ ಲಸಿಕೆಯ ಜತೆಗೆ ಹಾಕಲಾಗುವುದು. ಜತೆಗೆ ಹೊಸದಾಗಿ ಬರುವ ವಿದ್ಯಾರ್ಥಿನಿಯರಿಗೆ ಮೊದಲ ಹಂತದ ಲಸಿಕೆಯನ್ನು ನೀಡಲಾಗುತ್ತದೆ ಎಂದರು.ಈ ಎಲ್ಲ ಲಸಿಕೆಯನ್ನು ಎಸ್.ಎರ್. ಪಾಟೀಲ ಪ್ರತಿಷ್ಠಾನದಿಂದ ಉಚಿತವಾಗಿ ನೀಡಲಾಗುತ್ತಿದೆ. ಇದರ ಸದುಪಯೋಗಪಡಿಸಿಕೊಳ್ಳಬೇಕು. ಆ ಮೂಲಕ ಹೆಣ್ಣುಮಕ್ಕಳಲ್ಲಿ ಕಂಡುಬರುವ ಗರ್ಭಕಂಠದ ಕ್ಯಾನ್ಸರ್ ರೋಗವನ್ನು ಪ್ರಾಥಮಿಕ ಹಂತದಲ್ಲಿ ನಿರ್ಮೂಲನೆ ಮಾಡಲು ಲಸಿಕಾ ಅಭಿಯಾನ ಸಹಾಯಕವಾಗಲಿದೆ. ಎಚ್‌ಪಿವಿ ಲಸಿಕೆಯನ್ನು ನಮ್ಮ ಮನೆಯಲ್ಲಿರುವ 9ರಿಂದ 14 ವರ್ಷ ನನ್ನ ಮೊಮ್ಮಕ್ಕಳಿಗೂ ಹಾಕಿಸಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ, ಟಿ. ಈಶ್ವರ, ತಾಲೂಕು ವೈದ್ಯಾಧಿಕಾರಿ ಡಾ. ಬಿ.ಎಸ್. ಭಜಂತ್ರಿ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಬಸವರಾಜ ನವಲಗುಂದ, ವಿ.ಆರ್. ಗುಡಿಸಾಗರ, ಬಸವರಾಜ ಜಗ್ಗಲ, ಕೆ.ಬಿ. ಧನ್ನೂರ, ಯೂಸುಫ್ ಇಟಗಿ, ಐ.ಬಿ. ಕೊಟ್ಟೂರಶೆಟ್ಟಿ, ಎಲ್.ಡಿ. ಬಾಕಳೆ, ಕೆ.ಎ. ಹಾದಿಮನಿ, ಎಂ.ಎ. ಫನಿಬಂದ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಾರ್ಷಿಕ ಸ್ನೇಹ ಸಮ್ಮೇಳನ

ಮುಂಡರಗಿ: ಇಲ್ಲಿಯ ದಿ. ಪೀಪಲ್ಸ್ ರೂರಲ್ ಮತ್ತು ಅರ್ಬನ್ ಡೆವಲಪ್‌ ಮೆಂಟ್ ಸೊಸೈಟಿ ನಾಗರಹಳ್ಳಿ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಸ್ವಾಮಿ ವಿವೇಕಾನಂದ ಕನ್ನಡ ಪೂರ್ವ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ 37ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ, ಪಾಲಕರ ದಿನಾಚರಣೆ ಮತ್ತು ಪಾರಿತೋಷಕ ವಿತರಣೆ ಹಾಗೂ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಫೆ. 13ರಂದು ಜರುಗಲಿದೆ.ಬೆಳಗ್ಗೆ 9ಕ್ಕೆ ಪಾಲಕರ ದಿನಾಚರಣೆ ಜರುಗಲಿದ್ದು, ಸಂಸ್ಥೆಯ ಅಧ್ಯಕ್ಷ ಮಲ್ಲಣ್ಣ ಹಳೇಮನಿ ಅಧ್ಯಕ್ಷತೆ ವಹಿಸುವರು. ಬಹುಮಾನ ವಿತರಕರಾಗಿ ಉಪಾಧ್ಯಕ್ಷ ಎಸ್.ವಿ. ಪಾಟೀಲ, ನಾಗೇಶ ಹುಬ್ಬಳ್ಳಿ, ಎಸ್.ವೈ. ವಿಭೂತಿ ಆಗಮಿಸುವರು.ಬಿ.ಆರ್.ಪಿ. ಹನುಮರಡ್ಡಿ ಇಟಗಿ ಉಪನ್ಯಾಸ ನೀಡುವರು.ಸಂಜೆ 4 ಕ್ಕೆ ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ ಜರುಗಲಿದ್ದು ಈಶ್ವರಪ್ಪ ಹಂಚಿನಾಳ ಅಧ್ಯಕ್ಷತೆ ವಹಿಸುವರು. ಸಂಸ್ಥೆಯ ಗೌ. ಕಾರ್ಯದರ್ಶಿ ವಿ. ಸೀತಾರಾಮರಾಜು ಉದ್ಘಾಟಿಸುವರು. ಅತಿಥಿಗಳಾಗಿ ಕರಬಸಪ್ಪ ಹಂಚಿನಾಳ, ಜಿ.ಎಸ್. ಅಣ್ಣಿಗೇರಿ, ಶ್ರೀಧರ ಹೊಸಮನಿ, ಸಿದ್ದು ದೇಸಾಯಿ ಆಗಮಿಸುವರು ಎಂದು ಮುಖ್ಯೋಪಾಧ್ಯಾಯರಾದ ಡಿ.ಟಿ. ಇಮ್ರಾಪೂರ, ಪರಮೇಶ ನಾಯಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.