ಶೋಷಿತರಿಗೆ ಮಿಡಿಯುತ್ತಿದ್ದ ತಾಯಿ ಹೃದಯಿ ಸ್ವಾಮೀಜಿ: ನಾಗರಾಜಮೂರ್ತಿ

| Published : Feb 20 2025, 12:46 AM IST

ಶೋಷಿತರಿಗೆ ಮಿಡಿಯುತ್ತಿದ್ದ ತಾಯಿ ಹೃದಯಿ ಸ್ವಾಮೀಜಿ: ನಾಗರಾಜಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಹಿರಿಯ ಗುರುಗಳ ಮಾರ್ಗದರ್ಶನದಲ್ಲಿ ಸಿದ್ಧಲಿಂಗ ಸ್ವಾಮೀಜಿ ಅವರು ಕೂಡ ಅದೇ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ

ಕನ್ನಡಪ್ರಭ ವಾರ್ತೆ ತುಮಕೂರು

ಶೋಷಿತರ ಕಷ್ಟಗಳಿಗೆ ಸದಾ ಮಿಡಿಯುತ್ತಿದ್ದ ತಾಯಿ ಹೃದಯಿ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಅವರು ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ಅಭಿಪ್ರಾಯಪಟ್ಟರು.ಅವರು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ನಡೆದ ಸಿದ್ಧಗಂಗಾ ಮಠ ಜಾತ್ರಾ ನಾಟಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಹಿರಿಯ ಗುರುಗಳ ಮಾರ್ಗದರ್ಶನದಲ್ಲಿ ಸಿದ್ಧಲಿಂಗ ಸ್ವಾಮೀಜಿ ಅವರು ಕೂಡ ಅದೇ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದರು.ಲಿಂಗೈಕ್ಯ ಶ್ರೀಗಳು ಬಸವೇಶ್ವರ ನಾಟಕ ನಾಡಿನಲ್ಲೇ ಎಲ್ಲೇ ಪ್ರದರ್ಶನಗೊಳ್ಳಲಿ, ಸ್ವತಃ ಅಲ್ಲಿಗೆ ಹೋಗಿ ನಾಟಕ ನೋಡಿ ಜನರನ್ನು ಆಶೀರ್ವದಿಸುತ್ತಾ ಬಂದಿದ್ದರು. ಅದೇ ಪದ್ಧತಿಯನ್ನು ಸಿದ್ಧಲಿಂಗ ಸ್ವಾಮೀಜಿ ಮುಂದುವರಿಸುತ್ತಿದ್ದಾರೆ ಎಂದರು.ಸಿದ್ಧಗಂಗಾ ಮಠದ ಲಿಂಗೈಕ್ಯ ಶ್ರೀಗಳು ಇಡೀ ಜಗತ್ತೇ ಸಿದ್ಧಗಂಗಾ ಮಠದತ್ತ ನೋಡುವಂತಹ ಕೆಲಸವನ್ನು ಮಾಡಿದ್ದಾರೆ. ಕಳೆದ ನೂರಾರು ವರ್ಷದಿಂದ ಸಿದ್ಧಗಂಗೆಯ ಒಲೆ ಇನ್ನು ಉರಿಯುತ್ತಲೇ ಇದ್ದು ನಾಡಿನಾದ್ಯಂತ ಬರುವ ಭಕ್ತರಿಗೆ ದಾಸೋಹ ನಡೆಸಿಕೊಂಡು ಬರುತ್ತಿದೆ ಎಂದರು. ಸಾವಿರಾರು ವಿದ್ಯಾರ್ಥಿಗಳಿಗೆ ತ್ರಿವಿಧ ದಾಸೋಹ ನೀಡುವ ಮೂಲಕ ಗಿನ್ನಿಸ್ ದಾಖಲೆಗೆ ಸೇರುವಂತಹ ಕೆಲಸವನ್ನು ಶ್ರೀಮಠ ಮಾಡುತ್ತಿದೆ ಎಂದು ಪ್ರಶಂಸಿಸಿದರು.ಇಂತಹ ಶ್ರೀ ಕ್ಷೇತ್ರದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಮಾದಾರ ಚೆನ್ನಯ್ಯನವರನ್ನು ಕುರಿತ ನುಡಿ ಚೆನ್ನ, ನಡೆ ಚೆನ್ನ ಮತ್ತು ಅಂಬಿಗರ ಚೌಡಯ್ಯ ನಾಟಕವನ್ನು ಪ್ರದರ್ಶಿಸುತ್ತಿದೆ.12 ನೇ ಶತಮಾನದಲ್ಲಿ ಬಸವೇಶ್ವರರು ಸಮ ಸಮಾಜದ ಕನಸು ಕಂಡವರು. ಜಾತಿ, ಧರ್ಮವನ್ನು ಮೀರಿ ಸಮಾನತೆಯ ಆಶಯವನ್ನು ಬಿತ್ತಿದ್ದವರು ಬಸವೇಶ್ವರರು. ಅಂತದ್ದೇ ಆಶಯವನ್ನು ಸಿದ್ಧಗಂಗಾ ಮಠ ಕೂಡ ಮಾಡುತ್ತಾ ಬರುತ್ತಿದೆ ಎಂದರು.ತನ್ನ ದಿಟ್ಟ ನಿಲವು ಮತ್ತು ಸಾತ್ವಿಕ ಕೋಪದಿಂದ ಸಮಾಜದ ಒಳಿತಿಗಾಗಿ ಶ್ರಮಿಸಿದ ಅಂಬಿಗರ ಜೌಡಯ್ಯ ಕೂಡ ಸಮ ಸಮಾಜದ ಕನಸನ್ನು ಕಂಡವರು. ಇಂತಹ ಮಹಾನ್ ಸಾಧಕರ ನಾಟಕಗಳು ಪ್ರದರ್ಶನಗೊಳ್ಳುತ್ತಿರುವುದು ಖುಷಿಯ ಸಂಗತಿ ಎಂದರು. ಹಾಗೆಯೇ ಸಿದ್ಧಗಂಗಾ ಮಠ ಕೂಡ ಸರ್ವ ಧರ್ಮದ ಏಳಿಗೆಗೆ ಶ್ರಮಿಸುತ್ತಾ ಸಮಾನತೆಯ ಬೀಜವನ್ನು ಬಿತ್ತುತ್ತಿದೆ ಎಂದರು.ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ ಕರ್ನಾಟಕ ನಾಟಕ ಅಕಾಡೆಮಿ ವಿಶೇಷ ಕಾರ್ಯಕ್ರಮ ನೀಡುವ ಮೂಲಕ ಹೊಸ ಮೆರಗು ನೀಡುತ್ತಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಲೆಗಳನ್ನು ಬೆಳೆಸುವಂತಹ ಕೆಲಸ ಮಾಡಿದ್ದಾರೆ ಎಂದರು.ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ನಾಗರಾಜಮೂರ್ತಿಗಳು ಅತ್ಯುತ್ತಮ ಸಂಘಟಕರು ಹಾಗೂ ಉತ್ಸಾಹಿಗಳು. ಅವರ ನೇತೃತ್ವದಲ್ಲಿ ಅಕಾಡೆಮಿ ನಾಡಿನುದ್ದಕ್ಕೂ ನಾಟಕಗಳನ್ನು ಪ್ರದರ್ಶಿಸುತ್ತಾ ಜಾಗೃತಿ ಮೂಡಿಸುವಂತಹ ಕೆಲಸ ಮಾಡುತ್ತಿದೆ ಎಂದರು.12ನೇ ಶತಮಾನದಲ್ಲಿ ಅನೇಕ ಶರಣ, ಶರಣೆಯರು ಆಗಿ ಹೋಗಿದ್ದಾರೆ. ಅವರಲ್ಲಿ ಮಾದಾರ ಚೆನ್ನಯ್ಯ ಪ್ರಮುಖರು. ಬಸವಣ್ಣನವರು ಮಾದಾರ ಚೆನ್ನಯ್ಯನ ಸ್ಮರಣೆ ಮಾಡದೇ ಇರುವ ಸಂದರ್ಭವೇ ಇರುತ್ತಿರಲಿಲ್ಲ ಎಂದರು. ಶ್ರೀ ಮಠದಲ್ಲಿ ನಾಟಕ ಆಯೋಜನೆಯಾಗುತ್ತಿದೆ. ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಹಿನ್ನೆಲೆಯಲ್ಲಿ ನಾಡಿನಾದ್ಯಂತ ರೈತರು ಆಗಮಿಸಿದ್ದಾರೆ. ಅಂತಹ ರೈತಾಪಿ ಬಂಧುಗಳು, ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡಿದ ಮಹನೀಯರ ನಾಟಕಗಳನ್ನು ವೀಕ್ಷಿಸುತ್ತಿದ್ದಾರೆ ಎಂದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ ಮಾತನಾಡಿ ಮೊದಲಿನಿಂದಲೂ ನಾಟಕ ಕ್ಷೇತ್ರಕ್ಕೆ ತುಮಕೂರು ವಿಶೇಷ ಮೆರಗನ್ನು ನೀಡುತ್ತಾ ಬಂದಿದೆ. ಗುಬ್ಬಿ ವೀರಣ್ಣನವರಿಂದ ಆರಂಭವಾದ ಈ ನಾಟಕ ಪರಂಪರೆ ಈಗಲೂ ಮುಂದುವರೆದುಕೊಂಡು ಹೋಗಿದೆ. ನಾಟಕ ಅಕಾಡೆಮಿ ಹಾಗೂ ಸಿದ್ಧಗಂಗಾ ಮಠ ಆಯೋಜಿಸಿರುವ ಈ ಜಾತ್ರಾ ನಾಟಕೋತ್ಸವದಲ್ಲಿ ಶರಣರ ಕುರಿತ ನಾಟಕಗಳು ಪ್ರದರ್ಶನಗೊಳ್ಳುತ್ತಿರುವುದು ಸಂತಸದ ಸಂಗತಿ. ಈ ನಾಟಕ ಪರಂಪರೆ ಮತ್ತಷ್ಟು ಪ್ರಜ್ವಲಿಸಿ ಆ ಮೂಲಕ ಇಡೀ ನಾಟಕ ಬೆಳಕು ಚೆಲ್ಲಲಿ ಎಂದರು.ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿ.ಎಸ್. ರೇಣುಕಪ್ಪ ಉಪಸ್ಥಿತರಿದ್ದರು. ಸೌಮ್ಯ ನಿರೂಪಿಸಿ ವಂದಿಸಿದರು. ಬಳಿಕ ಮಾದಾರ ಚೆನ್ನಯ್ಯರ ಕುರಿತ ನುಡಿ ಚೆನ್ನ, ನಡೆ ಚೆನ್ನ ನಾಟಕ ಪ್ರದರ್ಶನಗೊಂಡಿತು.ಫೋಟೋ: ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ನಡೆದ ಸಿದ್ಧಗಂಗಾ ಮಠ ಜಾತ್ರಾ ನಾಟಕೋತ್ಸವ ಉದ್ಘಾಟಿಸಲಾಯಿತು.