ಹು- ಧಾ ಪಾಲಿಕೆಯ ಪಂಚಗುರಿಯ ಬಜೆಟ್‌

| Published : Mar 21 2025, 12:30 AM IST

ಸಾರಾಂಶ

ಜಿಐಎಸ್‌ ಸರ್ವೆ ಮೂಲಕ ಆಸ್ತಿ ತೆರಿಗೆ ಇತರೆ ಆಂತರಿಕ ಸಂಪನ್ಮೂಲಗಳನ್ನು ಹೆಚ್ಚಿಸುವುದು. ಪಿಪಿಪಿ ಮಾದರಿಯಲ್ಲಿ ಎಲ್‌ಇಡಿ ಬೀದಿ ದೀಪ ಅಳವಡಿಸುವುದು. ಶೇ. 100ರಷ್ಟು ಕಸ ಸಂಗ್ರಹಿಸಿ ಸಂಸ್ಕರಣೆ ಮಾಡುವ ಮೂಲಕ ಕಸಮುಕ್ತ ನಗರವನ್ನಾಗಿಸುವುದು

ಹುಬ್ಬಳ್ಳಿ: ಪ್ರತಿಪಕ್ಷದ ತೀವ್ರ ವಿರೋಧ, ಗಲಾಟೆಯ ನಡುವೆಯೇ ರಾಜ್ಯದ ಎರಡನೆಯ ದೊಡ್ಡ ಮಹಾನಗರವೆನಿಸಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಪ್ರಸಕ್ತ ಸಾಲಿನ ₹1512.67 ಕೋಟಿಗಳ ಬಜೆಟ್‌ನ್ನು ಮಂಡಿಸಿತು. ಕಳೆದ ಬಾರಿ ₹1491.75 ಕೋಟಿ ಗಾತ್ರ ಹೊಂದಿದ್ದ ಬಜೆಟ್‌ ಈ ಸಲ ಅದಕ್ಕಿಂತ ₹ 20.92 ಕೋಟಿಯಷ್ಟು ಗಾತ್ರ ಜಾಸ್ತಿಯಾಗಿದೆ. ಇನ್ನು ₹30.78ಲಕ್ಷಗಳ ಉಳಿತಾಯದ ಅಂದಾಜು ಮಾಡಲಾಗಿದೆ.

ತೆರಿಗೆ ನಿರ್ಧಾರಣೆ ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಶೇಖರ ಮನಗುಂಡಿ ಬರೋಬ್ಬರಿ 45 ನಿಮಿಷಗಳ ಕಾಲ ಆಯವ್ಯಯ ಮಂಡಿಸಿದರು. ಯಾವುದೇ ಹೊಸ ಯೋಜನೆಗಳನ್ನು ಘೋಷಿಸದೇ ಪಾಲಿಕೆ ಇಟ್ಟುಕೊಂಡಿರುವ ಪಂಚಗುರಿಗಳನ್ನೇ ಗುರಿಯನ್ನಾಗಿಸಿ ಬಜೆಟ್‌ ಮಂಡಿಸಿದ್ದು ವಿಶೇಷ. ಪಂಚಗುರಿಗಳು ಸಹ ಹಳೆಯವೇ ಆಗಿವೆ ಎನ್ನುವುದು ಮತ್ತೊಂದು ವಿಶೇಷ.

ಏನವು ಪಂಚಗುರಿ?: ಜಿಐಎಸ್‌ ಸರ್ವೆ ಮೂಲಕ ಆಸ್ತಿ ತೆರಿಗೆ ಇತರೆ ಆಂತರಿಕ ಸಂಪನ್ಮೂಲಗಳನ್ನು ಹೆಚ್ಚಿಸುವುದು. ಪಿಪಿಪಿ ಮಾದರಿಯಲ್ಲಿ ಎಲ್‌ಇಡಿ ಬೀದಿ ದೀಪ ಅಳವಡಿಸುವುದು. ಶೇ. 100ರಷ್ಟು ಕಸ ಸಂಗ್ರಹಿಸಿ ಸಂಸ್ಕರಣೆ ಮಾಡುವ ಮೂಲಕ ಕಸಮುಕ್ತ ನಗರವನ್ನಾಗಿಸುವುದು. ಮೂಲಸೌಲಭ್ಯಗಳನ್ನು ಒದಗಿಸುವುದು. ಪ್ರಸಕ್ತ ಸಾಲಿನಲ್ಲೇ ನಿರಂತರ ಕುಡಿಯುವ ನೀರು ಪೂರೈಸುವುದು. ಇವೇ ಪಂಚ ಗುರಿಗಳನ್ನು ಪಾಲಿಕೆ ಇಟ್ಟುಕೊಂಡಿದೆ.

ಕಳೆದ ವರ್ಷ ಹತ್ತಾರು ಹೊಸ ಯೋಜನೆಗಳನ್ನು ಘೋಷಿಸಿತ್ತು. ಆದರೆ ಅವುಗಳನ್ನು ಈಡೇರಿಸಲು ಮಾತ್ರ ಸಾಧ್ಯವಾಗಿರಲಿಲ್ಲ. ಆದರೆ ಈ ವರ್ಷ ಒಂದೇ ಒಂದು ಹೊಸ ಯೋಜನೆ ಹಾಕಿಕೊಳ್ಳುವ ಗೋಜಿಗೆ ಹೋಗಿಲ್ಲ. ಬದಲಿಗೆ ಇರುವ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ನಿರ್ಧರಿಸಿದೆ.

ಸಂಪನ್ಮೂಲ ಕ್ರೋಡೀಕರಣ: 2024-25ನೇ ಸಾಲಿನಲ್ಲಿ ಸುಮಾರು ₹130 ಕೋಟಿಗಳಷ್ಟು ಆಸ್ತಿ ತೆರಿಗೆ ವಸೂಲಿ ಮಾಡಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಆಸ್ತಿ ತೆರಿಗೆ, ದಂಡ ಹಾಗೂ ಇತರೆ ತೆರಿಗೆಗಳಿಂದ ₹303 ಕೋಟಿ ಆದಾಯ ನಿರೀಕ್ಷಿಸಲಾಗಿದೆ.

₹1512.67 ಬಜೆಟ್‌ನಲ್ಲಿ ₹643.99 ಸರ್ಕಾರದಿಂದಲೇ ನಿರೀಕ್ಷೆಯನ್ನು ಹೊಂದಿದೆ. ಹಾಗೆ ನೋಡಿದರೆ ಕಳೆದ ಸಲ ರಾಜ್ಯ ಸರ್ಕಾರದಿಂದ ಬರಬೇಕಾಗಿರುವ ಅನುದಾನ ಬರುತ್ತಿಲ್ಲ ಎಂಬ ಆರೋಪದ ಮಧ್ಯೆಯೇ ಬಜೆಟ್‌ನ ಶೇ. 43ರಷ್ಟು ಪಾಲನ್ನು ಸರ್ಕಾರದಿಂದಲೇ ನಿರೀಕ್ಷಿಸುತ್ತಿದೆ ಪಾಲಿಕೆ. ಪಾಲಿಕೆಯ ಆಸ್ತಿಗಳ ಬಾಡಿಗೆಯಿಂದ ₹20.75 ಕೋಟಿ. ಇತರೆ ತೆರಿಗೆಯೇತರ ಆದಾಯಗಳಿಂದ ₹296.12 ಕೋಟಿ, ಸ್ವತ್ತುಗಳ ಮಾರಾಟದಿಂದ ₹ 180 ಕೋಟಿ, ಅಸಾಮಾನ್ಯ ಸ್ವೀಕೃತಿಗಳಿಂದ ₹ 68.81 ಕೋಟಿ ಆದಾಯ ನಿರೀಕ್ಷಿಸಲಾಗಿದೆ.

ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಾಣಗೊಂಡ 1545 ಸ್ಟಾಲ್‌ಗಳನ್ನು ಹರಾಜು ಮಾಡುವ ಮೂಲಕ ಸುಮಾರು ₹20.75 ಕೋಟಿ, ನಗರ ಯೋಜನೆ ವಿಭಾಗದಿಂದ ಕಟ್ಟಡ ಪರವಾನಿಗೆ ಹಾಗೂ ಮುಕ್ತಾಯ ಪ್ರಮಾಣ ಪತ್ರ ನೀಡುವ ಮೂಲಕ ವಿವಿಧ ಶುಲ್ಕಗಳಿಂದ ₹ 79.90 ಕೋಟಿ ಆದಾಯದ ಗುರಿ ಹೊಂದಲಾಗಿದೆ.

ವೆಚ್ಚ: ಮಾನವ ಸಂಪನ್ಮೂಲಕ್ಕಾಗಿ ₹184.04 ಕೋಟಿ, ಕಾರ್ಯನಿರ್ವಹಣಾ ವೆಚ್ಚವಾಗಿ ₹ 255.67 ಕೋಟಿ, ಎಸ್ಸಿಎಸ್ಟಿ ಮತ್ತು ಒಬಿಸಿ ಕಲ್ಯಾಣಕ್ಕಾಗಿ ₹13.93 ಕೋಟಿ, ಬಂಡವಾಳ ಆಸ್ತಿಗಳ ಸೃಜನಾ ವೆಚ್ಚಕ್ಕಾಗಿ ₹ 978 ಕೋಟಿ, ಇತರೆ ವೆಚ್ಚಕ್ಕಾಗಿ ₹ 60.98 ಕೋಟಿ ಹೀಗೆ ಖರ್ಚು ಮಾಡುವುದಾಗಿ ತಿಳಿಸಿದೆ.

ಆದರೆ ಯಾವೊಂದು ಹೊಸ ಯೋಜನೆಗಳನ್ನು ಘೋಷಿಸದೇ ಕಳೆದ ಬಾರಿ ಘೋಷಿಸಿರುವ ಯೋಜನೆಗಳೂ ಕಾರ್ಯರೂಪಕ್ಕೆ ಬಾರದಿರುವುದೇಕೆ? ಎಂಬ ಬಗ್ಗೆ ಸ್ಪಷ್ಟನೆ ನೀಡದೇ ಮಂಡಿಸಿದ ಬಜೆಟ್‌ ಒಂದು ಹಂತದಲ್ಲಿ ಸಪ್ಪೆಯಾಗಿತ್ತು ಎಂಬ ಟೀಕೆ ವ್ಯಕ್ತವಾಗುತ್ತಿರುವುದಂತೂ ಸತ್ಯ.