ಹುಬ್ಬಳ್ಳಿ:

ನಾಡಿನಾದ್ಯಂತ ಭಾನುವಾರ ಶಿವರಾತ್ರಿ ಸಂಭ್ರಮ. ಹುಬ್ಬಳ್ಳಿಯಲ್ಲೂ ಶಿವನಾಮ ಸ್ಮರಣೆಗೆ ಜನತೆ ಸಜ್ಜಾಗಿದ್ದು, ಶನಿವಾರ ಸಂಜೆಯಿಂದಲೇ ಎಲ್ಲ ದೇವಸ್ಥಾನಗಳಲ್ಲಿ ಸಿದ್ಧತೆ ಮಾಡಿಕೊಂಡಿರುವುದು ಕಂಡುಬಂದಿತು.

ಹಳೆಯ ಕೋರ್ಟ್ ವೃತ್ತದ ಶ್ರೀಸಾಯಿ ಮಂದಿರ, ವಿಶ್ವೇಶ್ವರ ನಗರದ ಈಶ್ವರ ದೇವಸ್ಥಾನ ಹಾಗೂ ಸ್ಟೇಷನ್ ರಸ್ತೆಯ ಈಶ್ವರ ದೇವಸ್ಥಾನದಲ್ಲಿ ಈಶ್ವರಲಿಂಗ, ಕೇಶ್ವಾಪುರದ ಪಾರಸ್ವಾಡಿ ಕಾಶಿ ವಿಶ್ವನಾಥ ದೇವಸ್ಥಾನ, ಉಣಕಲ್ಲಿನ ರಾಮಲಿಂಗೇಶ್ವರ ದೇವಸ್ಥಾನ, ಚಂದ್ರಮೌಳೇಶ್ವರ ದೇವಸ್ಥಾನ, ಗೋಕುಲ ರಸ್ತೆಯ ರಾಜಧಾನಿ ಕಾಲನಿಯ ಗಣೇಶ ಮತ್ತು ಈಶ್ವರ ದೇವಸ್ಥಾನ ಸೇರಿ ಹಲವು ದೇವಸ್ಥಾನಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿವೆ. ನಗರದ ಗೋಕುಲ ರಸ್ತೆಯ ಶಿವಪುರ ಕಾಲನಿಯ ಬೃಹದಾಕಾರದ ಶಿವನ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿದೆ.

ಮಾರುಕಟ್ಟೆಯಲ್ಲಿ ಖರೀದಿ ಭರಾಟೆ:

ಒಂದೆಡೆ ಭಕ್ತಿ ಭಾವದಿಂದ ಮಹಾಶಿವರಾತ್ರಿ ಆಚರಿಸಲು ವಾಣಿಜ್ಯನಗರಿಯಲ್ಲಿ ಸಿದ್ಧತೆ ನಡೆದಿದ್ದರೆ, ಮಾರುಕಟ್ಟೆಯಲ್ಲಿ ಶಿವರಾತ್ರಿ ಪೂಜಾ ಸಾಮಗ್ರಿ ಹಾಗೂ ಅಗತ್ಯ ವಸ್ತುಗಳ ಖರೀದಿ ಭರಾಟೆ ಶನಿವಾರ ಸಂಜೆ ಜೋರಾಗಿತ್ತು. ಇಲ್ಲಿಯ ದುರ್ಗದಬೈಲ್, ಗಾಂಧಿ ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿ, ಹೂ-ಹಣ್ಣು ಹಂಪಲು ಖರೀದಿಗೆ ಜನರು ಮುಗಿ ಬಿದ್ದಿದ್ದರು. ಹೀಗಾಗಿ, ಮಾರ್ಕೆಟ್‌ನಲ್ಲಿ ಎಂದಿಗಿಂತ ಜನಸಂದಣಿ ಹೆಚ್ಚಿತ್ತು. ಶಿವರಾತ್ರಿ ಜಾಗರಣೆ ಹಿನ್ನೆಲೆಯಲ್ಲಿ ಖರ್ಜೂರ, ದ್ರಾಕ್ಷಿ, ಸೇಬು, ದಾಳಿಂಬೆ ಸೇರಿದಂತೆ ವಿವಿಧ ಬಗೆಯ ಹಣ್ಣು- ಹಂಪಲು ಖರೀದಿ ಜೋರಾಗಿತ್ತು. ಹೀಗಾಗಿ ದಿನ ಮಾರುಕಟ್ಟೆ ಬೆಲೆಗಿಂತ ಕೊಂಚ ಬೆಲೆಯೂ ಹೆಚ್ಚಳವಾಗಿರುವುದು ಕಂಡು ಬಂದಿತು.


ಸಿದ್ಧಾರೂಢರ ಮಠದಲ್ಲೂ ಶಿವರಾತ್ರಿ ಸಂಭ್ರಮ

ಲಕ್ಷಾಂತರ ಭಕ್ತರ ಪ್ರಮುಖ ಶ್ರದ್ಧಾ ಕೇಂದ್ರವಾಗಿರುವ ಸದ್ಗುರು ಸಿದ್ಧಾರೂಢರ ಮಠದಲ್ಲೂ ಶಿವರಾತ್ರಿ ಸಂಭ್ರಮ ಮನೆ ಮಾಡಿದೆ. ಭಾನುವಾರ ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಶ್ರೀಮಠದ ಟ್ರಸ್ಟ್ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಆವರಣದಲ್ಲಿ ಭಾನುವಾರ ರಾತ್ರಿಯಿಡೀ ಜಾಗರಣೆ ನಡೆಯಲಿದ್ದು, ಸಾವಿರಾರು ಭಕ್ತರು ಶಿವನಾಮ ಸ್ಮರಣೆ, ಭಜನೆಯಲ್ಲಿ ಪಾಲ್ಗೊಳ್ಳುವರು.

ಇಂದು ಸಂಗೀತ ಕಾರ್ಯಕ್ರಮ

ಶಿವರಾತ್ರಿ ಜಾಗರಣೆ ದಿನವಾದ ಫೆ. 15ರಂದು ಸದ್ಗುರು ಸಿದ್ಧಾರೂಢ ಮಠದಲ್ಲಿ ರಾತ್ರಿ 8 ಗಂಟೆಗೆ ಪ್ರಸಿದ್ಧ ಗಾಯಕಿ ಜಯದೇವಿ ಜಂಗಮಶೆಟ್ಟಿ ಅವರ ಗಾಯನ, ಉಸ್ತಾದ ಮಹ್ಮದ್ ಶಫಿ ಖಾನ್ ಅವರ ಸಿತಾರ ವಾದನ, ಉಮೇಶ ಪಾಚಂಗೆ ಅವರ ಗೋಂಧಳಿ ಕಾರ್ಯಕ್ರಮ ಅಲ್ಲದೇ ಅನಗೋಳದ ಶ್ರೀರಾಮಲಿಂಗೇಶ್ವರ ನಾಟ್ಯ ಸಂಘದವರ ಶ್ರೀಮನ್ನಿಜಗುಣ ಶಿವಯೋಗಿಗಳ ನಾಟಕ ಪ್ರಮುಖ ಆಕರ್ಷಣೆಯಾಗಿವೆ. ಗುರುದೇವ ಮಾದನ್ನವರ (ಸಂಗೀತ) ವಿದುಷಿ ನೇತ್ರಾವತಿ ಹಿರೇಮಠ (ಭರತನಾಟ್ಯ) ಹಾಗೂ ಹರ್ಲಾಪುರ ಜಾನಪದ ತಂಡದಿಂದ ಹಾಡಿನ ಕಾರ್ಯಕ್ರಮಗಳು ಜರುಗಲಿವೆ.