ಸಾರಾಂಶ
ಶಿವಾನಂದ ಗೊಂಬಿ ಹುಬ್ಬಳ್ಳಿ
ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದಿಂದ ಪರಿಸರವಾದಿಗಳು ವಾದಿಸುವಂತೆ ಅರಣ್ಯನಾಶವಾಗುತ್ತದೆಯೇ? ವನ್ಯಜೀವಿಗಳಿಗೆ ಧಕ್ಕೆಯುಂಟಾಗುತ್ತದೆಯೇ? ಕಾಳಿ ಹುಲಿ ಸಂರಕ್ಷಿತ ಪ್ರದೇಶದೊಳಗೆ ಈ ಮಾರ್ಗ ಹಾಯ್ದು ಹೋಗುತ್ತದೆಯೇ?ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗದ ಬಗ್ಗೆ ಪ್ರಜ್ಞಾವಂತರಲ್ಲಿ ಎದ್ದಿರುವ ಪ್ರಶ್ನೆಯಿದು.
ಬರೋಬ್ಬರಿ ಎರಡೂವರೆ ದಶಕದ ಹಿಂದೆಯೇ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ನಿರ್ಮಾಣ ಮಾಡಬೇಕು ಎಂಬ ಉದ್ದೇಶದಿಂದ 1999ರಲ್ಲೇ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ.ಹಾಗೆ ನೋಡಿದರೆ ಈ ಮಾರ್ಗ ಈಗಾಗಲೇ ನಿರ್ಮಾಣವಾಗಿ ರೈಲುಗಳ ಓಡಾಟವೂ ಶುರುವಾಗಬೇಕಿತ್ತು. ಆದರೆ ಉತ್ತರ ಕನ್ನಡ ಜಿಲ್ಲೆಯ ದಟ್ಟ ಅರಣ್ಯದಲ್ಲೇ ಈ ಮಾರ್ಗ ಹಾಯ್ದು ಹೋಗುತ್ತದೆ. ಇದರಿಂದ ಪರಿಸರಕ್ಕೆ ಸಾಕಷ್ಟು ಹಾನಿಯಾಗುತ್ತದೆ. ವನ್ಯಜೀವಿಗಳಿಗೆ ತೊಂದರೆಯಾಗುತ್ತದೆ. ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲೇ ಇರುವುದರಿಂದ ಇದಕ್ಕೆ ಅನುಮತಿ ಕೊಡಬಾರದು ಎಂದು ಪರಿಸರವಾದಿಗಳು ಆಗ್ರಹಿಸುತ್ತಲೇ ಬಂದಿದ್ದರು. ಇತ್ತ ರೈಲು ಮಾರ್ಗ ಬೇಕು ಎಂಬ ಹೋರಾಟ ಎಷ್ಟು ತೀವ್ರವಾಗಿತ್ತೋ ಅಷ್ಟೇ ತೀವ್ರತೆ ಇದಕ್ಕೆ ವಿರೋಧವೂ ಆಗಿತ್ತು. ಹೀಗಾಗಿಯೇ ಈ ಯೋಜನೆಗೆ ಅಡಚಣೆಗಳು ಉಂಟಾಗಿದ್ದವು.
ಇದೀಗ ಎಲ್ಲವೂ ನಿವಾರಣೆ:ಪರಿಸರ ವಾದಿಗಳದ್ದು ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇದು ಹಾಯ್ದು ಹೋಗುತ್ತದೆ ಎಂಬುದಿತ್ತು. ಆದರೆ ಇದಕ್ಕೆ ಹೋರಾಟಗಾರರು ಇದು ಹುಲಿ ಸಂರಕ್ಷಿತ ಪ್ರದೇಶದೊಳಗೆ ಬರಲ್ಲ ಎಂದು ವಾದಿಸಿದರು. ಹುಲಿ ಸಂರಕ್ಷಿತ ಪ್ರದೇಶದಿಂದ 35 ಕಿಲೋ ಮೀಟರ್ ಅಂತರದಲ್ಲಿದೆ ಎಂಬುದನ್ನು ಸ್ಪಷ್ಟಪಡಿಸಿದರು. ಕೋರ್ಟ್‌ನಲ್ಲಿ ಇದನ್ನು ಸಾಬೀತುಪಡಿಸಿದ್ದುಂಟು.
ಜತೆಗೆ ಪರಿಸರ ಸೂಕ್ಷ್ಮ ವಲಯವೂ (MOEF- CC- ECO) ಈ ಮಾರ್ಗದ ವ್ಯಾಪ್ತಿಯಲ್ಲೇ ಬರುತ್ತದೆ ಎಂದು ವಾದಿಸಿದ್ದರು. ಆದರೆ ರೈಲು ಮಾರ್ಗವೂ ಪರಿಸರ ಸೂಕ್ಷ್ಮ ವಲಯದಿಂದ 14 ಕಿಮೀ ಅಂತರದಲ್ಲಿದೆ ಎಂಬುದನ್ನು ಅಲ್ಲಿನ ಅರಣ್ಯ ಇಲಾಖೆಯೇ ಸ್ಪಷ್ಟಪಡಿಸಿದ್ದುಂಟು ಎಂದು ಹೋರಾಟಗಾರ ಆರ್.ಜಿ. ಕೊಲ್ಲೆ ತಿಳಿಸುತ್ತಾರೆ.ಯೋಜನೆಗೆ ಒಟ್ಟು 995 ಹೆಕ್ಟೇರ್ ಭೂಮಿ ಬೇಕಾಗುತ್ತದೆ. ಇದರಲ್ಲಿ 586 ಹೆಕ್ಟೇರ್ ಅರಣ್ಯ, 184 ಹೆಕ್ಟೇರ್ ನೀರಾವರಿ ಭೂಮಿ ಹಾಗೂ 185 ಹೆಕ್ಟೇರ್ ಒಣಭೂಮಿ, 1.40 ಹೆಕ್ಟೇರ್ ನಗರ ಪ್ರದೇಶದಲ್ಲೇ ಇದೆ. ಮೊದಲು 595 ಹೆಕ್ಟೇರ್ ಪ್ರದೇಶ ಅರಣ್ಯ ಭೂಮಿಯಾಗಿತ್ತು. ಅದನ್ನು ಕಡಿತಗೊಳಿಸಿರುವುದು ವಿಶೇಷ. ಇಲ್ಲಿ ಸ್ವಾಧೀನಪಡಿಸಿಕೊಂಡ ಅರಣ್ಯ ಪ್ರದೇಶದ ಬದಲಿಗೆ ಬೇರೆಡೆ ಅರಣ್ಯ ಬೆಳೆಸಲು ಅವಕಾಶವಿದೆ. ಅಲ್ಪಸ್ವಲ್ಪ ಅರಣ್ಯನಾಶವಾದರೂ ಬೇರೆಡೆ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಿ ಉಳಿಸಬಹುದು. ಮುಂದಿನ ಪೀಳಿಗೆಗಾಗಿ ಆದರೂ ಇಂಥ ಅಭಿವೃದ್ಧಿಗೆ ಪೂರಕವಾದ ಯೋಜನೆಗಳು ಬೇಕಲ್ಲವೇ? ಎಂಬುದು ಹೋರಾಟಗಾರರ ಪ್ರಶ್ನೆ.
ಇನ್ನು ರಾಷ್ಟ್ರೀಯ ಹೆದ್ದಾರಿ 263ರ ಪಕ್ಕದಲ್ಲೇ ಇದೀಗ ಜೋಡಿ ಮಾರ್ಗ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಯೋಜನೆ ಸಿದ್ಧಪಡಿಸಲಾಗಿದೆ. ಹೀಗಾಗಿ ವನ್ಯಜೀವಿಗಳ ಸಂಚಾರಕ್ಕಾಗಲಿ, ಜೀವನಕ್ಕಾಗಿ ಯಾವುದೇ ಬಗೆಯ ತೊಂದರೆಯಾಗುವುದಿಲ್ಲ ಎಂಬುದು ಹೋರಾಟಗಾರರ ಸ್ಪಷ್ಟನೆ.ಇದೀಗ ಎಲ್ಲವೂ ಸ್ಪಷ್ಟವಾಗಿದೆ. ಇರುವ ಅಡ್ಡಿ ಆತಂಕಗಳೆಲ್ಲ ನಿವಾರಣೆಯಾಗಿವೆ. ಹೀಗಾಗಿ ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗ ನಿರ್ಮಾಣಕ್ಕೆ ಯಾವುದೇ ಸಮಸ್ಯೆಯಿಲ್ಲ. ಇದರಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿಯಾಗುತ್ತದೆ. ರೈಲ್ವೆ ಖಾತೆ ಸಚಿವ ಅಶ್ವಿನ ವೈಷ್ಣವ ಅವರೇನೋ ರಾಜ್ಯಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಿ ಯೋಜನೆ ಕೈಗೆತ್ತಿಕೊಳ್ಳಲು ಕೇಂದ್ರ ಸಿದ್ಧವಿದೆ ಎಂಬುದನ್ನು ಸೂಚ್ಯವಾಗಿ ತಿಳಿಸಿರುವುದುಂಟು. ಆದರೆ ಆದಷ್ಟು ಬೇಗನೆ ಯೋಜನೆಗೆ ಅನುಮೋದನೆ ನೀಡಿ ಕಾಮಗಾರಿ ಶೀಘ್ರ ಪ್ರಾರಂಭಿಸಬೇಕು ಎಂದು ಹೋರಾಟಗಾರರು ಆಗ್ರಹಿಸುತ್ತಿರುವುದಂತೂ ಸತ್ಯ.