ರಾಜ್ಯದ ನಾಲ್ಕು ವಿಮಾನ ನಿಲ್ದಾಣಕ್ಕೆ ರಾಜ್ಯ ಸರ್ಕಾರ ನಾಲ್ವರು ಮಹನೀಯರ ಹೆಸರು ಶಿಫಾರಸು ಮಾಡಿದೆ. ಈ ಭಾಗದ ಸಂಸದರು, ಶಾಸಕರು ಕೂಡ ಪತ್ರ ಬರೆದು ಮನವಿ ಮಾಡಿದ್ದಾರೆ. 2 ವರ್ಷದಿಂದ ತೀವ್ರ ಪ್ರಯತ್ನ ಮಾಡುತ್ತಿದ್ದರೂ ಕೇಂದ್ರ ಸರ್ಕಾರ ಹೆಸರು ನಾಮಕರಣಕ್ಕೆ ಮುಂದಾಗುತ್ತಿಲ್ಲ.
ಹುಬ್ಬಳ್ಳಿ:
ರಾಜ್ಯದ ನಾಲ್ಕು ವಿಮಾನ ನಿಲ್ದಾಣಗಳಿಗೆ ಕನ್ನಡಿಗರ ಹೆಸರು ನಾಮಕರಣ ಮಾಡಲು ಆಗ್ರಹಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ, ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ಜಿಲ್ಲಾ ಘಟಕದಿಂದ ನಗರದಲ್ಲಿ ಡಿ. 27ರಂದು ಹುಬ್ಬಳ್ಳಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಶಿವಾನಂದ ಮುತ್ತಣ್ಣವರ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯ ಸರ್ಕಾರ ನಾಲ್ವರು ಮಹನೀಯರ ಹೆಸರು ಶಿಫಾರಸು ಮಾಡಿದೆ. ಈ ಭಾಗದ ಸಂಸದರು, ಶಾಸಕರು ಕೂಡ ಪತ್ರ ಬರೆದು ಮನವಿ ಮಾಡಿದ್ದಾರೆ. 2 ವರ್ಷದಿಂದ ತೀವ್ರ ಪ್ರಯತ್ನ ಮಾಡುತ್ತಿದ್ದರೂ ಕೇಂದ್ರ ಸರ್ಕಾರ ಹೆಸರು ನಾಮಕರಣಕ್ಕೆ ಮುಂದಾಗುತ್ತಿಲ್ಲ. ಹಾಗಾಗಿ ಇಲ್ಲಿಯ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಕಚೇರಿಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಮನವಿ ಸಲ್ಲಿಸಲಾಗುವುದು. ಬಳಿಕ ಚಿಟಗುಪ್ಪಿ ಪಾರ್ಕ್ನಲ್ಲಿ ಪ್ರತಿಭಟನಾ ಸಭೆ ನಡೆಸಲಾಗುವುದು ಎಂದರು.
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ, ಬೆಳಗಾವಿ ನಿಲ್ದಾಣಕ್ಕೆ ರಾಣಿ ಚೆನ್ನಮ್ಮ, ವಿಜಯಪುರ ನಿಲ್ದಾಣಕ್ಕೆ ಜಗಜ್ಯೋತಿ ಬಸವೇಶ್ವರ ಹಾಗೂ ಶಿವಮೊಗ್ಗ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹೆಸರಿಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ಹೇಳಿದರು.ಡಿ. 27ರಂದು ಬೆಳಗ್ಗೆ 10ಕ್ಕೆ ಧಾರವಾಡ ಜಿಲ್ಲೆ ಹಾಗೂ ವಿವಿಧೆಡೆಯಿಂದ 10 ಸಾವಿರಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಭಾಗಿಯಾಗಿ ಹುಬ್ಬಳ್ಳಿ ಚೆನ್ನಮ್ಮ ವೃತ್ತಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ರ‍್ಯಾಲಿ ಮೂಲಕ ಚಿಟಗುಪ್ಪಿ ಪಾರ್ಕ್ಗೆ ಆಗಮಿಸಿ ಸಭೆ ನಡೆಸಲಾಗುವುದು. ಈ ಪ್ರತಿಭಟನೆಯಲ್ಲಿ ನಟಿ ಪೂಜಾ ಗಾಂಧಿ, ಶಾಸಕ ವಿಜಯಾನಂದ ಕಾಶಪ್ಪನವರ ಭಾಗಿಯಾಗಲಿದ್ದಾರೆ. ಈ ಕುರಿತು ಜಿಲ್ಲೆಯ ಎಲ್ಲ ಶಾಸಕರಿಗೂ ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿದೆ ಎಂದರು.
ಮನಸೂರಿನ ರೇವಣಸಿದ್ದೇಶ್ವರ ಮಠದ ಬಸವರಾಜ ದೇವರು ಮಾತನಾಡಿ, ವಿಮಾನ ನಿಲ್ದಾಣಗಳಿಗೆ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಮಹನೀಯರ ಹೆಸರಿಡಲು ಕೇಳಿದ್ದೇವೆ. ಇದರ ಅರಿವು ನಮ್ಮ ರಾಜಕಾರಣಿಗಳಿಗೆ ಇಲ್ಲದೇ ಇರುವುದರಿಂದ ಬೇಡಿಕೆ ಈಡೇರುವುದು ಇಷ್ಟು ವಿಳಂಬವಾಗುತ್ತಿದೆ. ಇನ್ನಾದರೂ ಜನಪ್ರತಿನಿಧಿಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ರೈತ ಹೋರಾಟಗಾರರಾದ ಅಡಿವೆಪ್ಪ ಶಿವಳ್ಳಿ, ಗುರು ರಾಯನಗೌಡ್ರ, ಮಲ್ಲಿಕಾರ್ಜುನ ತಾಲೂರ, ಯಲ್ಲಪ್ಪ, ಶಂಕ್ರಣ್ಣ ಸೇರಿದಂತೆ ವಿವಿಧ ತಾಲೂಕುಗಳ ಮುಖಂಡರು ಪಾಲ್ಗೊಂಡಿದ್ದರು.