ಜುಬಿನ್‌ ನೌಟಿಯಾಲ್‌ ಹಾಡಿಗೆ ಮನಃಸೋತ ಹುಬ್ಬಳ್ಳಿಗರು

| Published : Jan 29 2024, 01:30 AM IST

ಸಾರಾಂಶ

ಹುಬ್ಬಳ್ಳಿಯ ಬಾಲ ಪ್ರತಿಭೆ ಮಹನ್ಯಾ ಪಾಟೀಲ ಪ್ರಸ್ತುತ ಪಡಿಸಿದ ಗಾಯನಕ್ಕೆ ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆಯ ಸುರಿಮಳೆ ಗೈದರು. ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಗಾಯಕರು ಹಾಡಿದ ವಿವಿಧ ಹಾಡುಗಳಿಗೆ ಶ್ರೋತೃಗಳು ತಲೆ ದೂಗಿದರು. ಕಾರ್ಯಕ್ರಮದ ಕೊನೆಯಲ್ಲಿ ಈ ಇಬ್ಬರು ಕಲಾವಿದರ ತಂಡದ ಜೊತೆ ಪ್ರೇಕ್ಷಕರು ಹಾಗೂ ಯುವಕ-ಯುವತಿಯರು ಸೇಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದರು

ಹುಬ್ಬಳ್ಳಿ: ಇಲ್ಲಿನ ಕುಸುಗಲ್ಲ ರಸ್ತೆಯ ಆಕ್ಸಪರ್ಡ್ ಕಾಲೇಜು ಹತ್ತಿರ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೇತೃತ್ವದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಮತ್ತು ಸಾಂಸ್ಕೃತಿಕ ಮಹೋತ್ಸವದ ಅಂಗವಾಗಿ ಭಾನುವಾರ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಯಾಗುವ ಮೂಲಕ ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿ ಯಶಸ್ವಿಯಾಯಿತು.

ಭಾರತದ ಸುಪ್ರಸಿದ್ಧ ಗಾಯಕ ಜುಬಿನ್ ನೌಟಿಯಾಲ್ ಹಾಗೂ ತಂಡದವರು ಪ್ರಸ್ತುತಪಡಿಸಿದ ಗಾಯನಕ್ಕೆ ಪ್ರೇಕ್ಷಕರು ಚಪ್ಪಾಳೆ ತಟ್ಟಿ, ನೃತ್ಯ ಮಾಡಿ ಸಂಭ್ರಮಿಸಿದರು. ಯುವಕ-ಯುವತಿಯರು ನೌಟಿಯಾಲ್‌ರ ಪ್ರತಿಯೊಂದು ಹಾಡಿಗೂ ಕುಣಿದು ಕುಪ್ಪಳಿಸಿದರು. ಭರ್ಜರಿ ಮ್ಯೂಸಿಕ್ ಹಾಗೂ ಲೇಸರ್ ಲೈಟಿಂಗ್ ಸಮಾರಂಭಕ್ಕೆ ವಿಶೇಷ ಮೆರಗು ನೀಡಿತು. ಜುಬಿನ್ ನೌಟಿಯಾಲ್ ವೇದಿಕೆಗೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಹಾಗೂ ಪ್ರೇಕ್ಷಕರು ಚಪ್ಪಾಳೆಯ ಜತೆಗೆ ಶಿಳ್ಳೆ, ಕೇಕೆ ಹಾಕುವ ಮೂಲಕ ಪ್ರೋತ್ಸಾಹಿಸಿದರು.

ಇದಕ್ಕೂ ಮುನ್ನ ಹುಬ್ಬಳ್ಳಿಯ ಬಾಲ ಪ್ರತಿಭೆ ಮಹನ್ಯಾ ಪಾಟೀಲ ಪ್ರಸ್ತುತ ಪಡಿಸಿದ ಗಾಯನಕ್ಕೆ ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆಯ ಸುರಿಮಳೆ ಗೈದರು. ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಗಾಯಕರು ಹಾಡಿದ ವಿವಿಧ ಹಾಡುಗಳಿಗೆ ಶ್ರೋತೃಗಳು ತಲೆ ದೂಗಿದರು. ಕಾರ್ಯಕ್ರಮದ ಕೊನೆಯಲ್ಲಿ ಈ ಇಬ್ಬರು ಕಲಾವಿದರ ತಂಡದ ಜೊತೆ ಪ್ರೇಕ್ಷಕರು ಹಾಗೂ ಯುವಕ-ಯುವತಿಯರು ಸೇಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದರು.

ಬೆಳಗ್ಗೆ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದ ಅಂಗವಾಗಿ ವಿಶಿಷ್ಟ ಗಾಳಿಪಟ ಹಾರಾಟದ ಪ್ರದರ್ಶನ, ಮಕ್ಕಳು ಮತ್ತು ಮಹಿಳೆಯರಿಗೆ ವಿವಿಧ ದೇಶಿ ಕ್ರೀಡೆಗಳು ನಡೆದವು. ನಂತರ ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ಕುಸ್ತಿ ಸ್ಪರ್ಧೆ ನಡೆಯಿತು. ಕಳೆದ 2 ದಿನಗಳಿಂದ ನಡೆದ ಗಾಳಿಪಟ ಉತ್ಸವ ಹಾಗೂ ಸಾಂಸ್ಕೃತಿಕ ಮಹೋತ್ಸವದಲ್ಲಿ ಸಾವಿರಾರು ಜನರು ಭಾಗವಹಿಸಿದ್ದು ವಿಶೇಷವಾಗಿತ್ತು.