ಹಿಂದುಗಳ ಪವಿತ್ರ ಹಬ್ಬವಾಗಿರುವ ‘ಯುಗಾದಿ‘ ಹಾಗೂ ಮುಸಲ್ಮಾನ್ ಬಾಂಧವರ ಪವಿತ್ರ ಹಬ್ಬವಾಗಿರುವ ‘ರಂಜಾನ್‘ ಈ ಬಾರಿಯೂ ಎರಡೂ ಸೇರಿ ಬಂದಿವೆ. ಹಾಗಾಗಿ ಕಳೆದೊಂದು ವಾರದಿಂದ ಮಾರುಕಟ್ಟೆ, ಅಂಗಡಿಗಳಲ್ಲಿ ಎಲ್ಲಿ ನೋಡಿದರಲ್ಲಿ ಜನವೋ ಜನ. ಬುಧವಾರ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಸಂದಣಿ ಕಂಡುಬಂತು.
ಹುಬ್ಬಳ್ಳಿ: ಹಿಂದುಗಳ ಪವಿತ್ರ ಹಬ್ಬವಾಗಿರುವ ‘ಯುಗಾದಿ‘ ಹಾಗೂ ಮುಸಲ್ಮಾನ್ ಬಾಂಧವರ ಪವಿತ್ರ ಹಬ್ಬವಾಗಿರುವ ‘ರಂಜಾನ್‘ ಈ ಬಾರಿಯೂ ಎರಡೂ ಸೇರಿ ಬಂದಿವೆ. ಹಾಗಾಗಿ ಕಳೆದೊಂದು ವಾರದಿಂದ ಮಾರುಕಟ್ಟೆ, ಅಂಗಡಿಗಳಲ್ಲಿ ಎಲ್ಲಿ ನೋಡಿದರಲ್ಲಿ ಜನವೋ ಜನ. ಬುಧವಾರ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಸಂದಣಿ ಕಂಡುಬಂತು. ಹಬ್ಬಕ್ಕೆ ಬೇಕಾದ ಬಟ್ಟೆ, ಹಣ್ಣು, ಹೂವು ಸೇರಿದಂತೆ ಅಗತ್ಯ ವಸ್ತುಗಳನ್ನು ಜನ ಖರೀದಿಸುತ್ತಿರುವುದು ಕಂಡುಬಂದಿತು.
ಇಲ್ಲಿನ ಜನತಾ ಬಜಾರ, ದುರ್ಗದ ಬೈಲ್, ಶಾಹ ಬಜಾರ್, ಗಣೇಶ ಪೇಟೆ, ಸರ್ವೋದಯ ವೃತ್ತ, ಹಳೇ ಹುಬ್ಬಳ್ಳಿ, ಅಕ್ಷಯ ಪಾರ್ಕ್, ಗೋಕುಲ ರಸ್ತೆ ಭಾಗದಲ್ಲಿರುವ ಅಂಗಡಿ, ವ್ಯಾಪಾರ ಮಳಿಗೆಗಳಲ್ಲಿ ಹೆಚ್ಚಿನ ಜನಸಂದಣಿ ಕಂಡುಬಂದಿತು. ಬಹುತೇಕರು ಹಬ್ಬಕ್ಕೆ ಬೇಕಾದ ಬಟ್ಟೆ, ಆಹಾರ ಸಾಮಗ್ರಿ, ಸಿಹಿ ತಿನಿಸುಗಳು, ಆಭರಣ ಖರೀದಿಸುತ್ತಿರುವುದು ಸಾಮಾನ್ಯವಾಗಿತ್ತು.ಪೂಜಾ ಸಾಮಗ್ರಿ ಖರೀದಿ ಜೋರು
ಸಾಮಾನ್ಯ ದಿನಗಳಲ್ಲಿ ಒಂದು ಮಾರು ಸೇವಂತಿಗೆ ಹೂವಿನ ಹಾರಕ್ಕೆ ₹25-35 ಇದ್ದರೆ ಹಬ್ಬದ ಈ ವೇಳೆ ₹50ರಿಂದ ₹70, ಮಲ್ಲಿಗೆ ₹90-120 ಹಾಗೂ ಗುಲಾಬಿ ಒಂದಕ್ಕೆ ₹10, ಜೋಡಿಗೆ ₹15 ಕಂಡುಬಂದಿತು. ಪೂಜೆಗೆ ಬೇಕಾದ 5 ಬಗೆಯ ಹಣ್ಣುಗಳ ಬುಟ್ಟಿಗೆ ₹150ರಿಂದ ₹500ರ ವರೆಗೆ ಮಾರಾಟವಾದವು. ಹಣ್ಣು-ತರಕಾರಿ ಬೆಲೆಯಲ್ಲಿಯೂ ಕೊಂಚ ಏರಿಕೆಯಾಗಿರುವುದು ಕಂಡುಬಂದಿತು. ಕೊಂಚ ಬೆಲೆ ಏರಿಕೆಯಾದರೂ ಸಹ ಗ್ರಾಹಕರು ಹಬ್ಬಕ್ಕೆ ಬೇಕಾದ ಹೂ, ಹಣ್ಣು ಖರೀದಿಸಿದರು.
ಗ್ರಾಹಕರಿಗೆ ವಿಶೇಷ ಕೊಡುಗೆಯುಗಾದಿ ಹಬ್ಬದಲ್ಲಿ ಆಭರಣ ಖರೀದಿಸುವುದು ಸಾಮಾನ್ಯ. ಗ್ರಾಹಕರನ್ನು ತನ್ನತ್ತ ಸೆಳೆಯಲು ನಗರದ ಬಹುತೇಕ ಆಭರಣ ಮಳಿಗೆಗಳಲ್ಲಿ ಹಲವು ಬಗೆಯ ಆಕರ್ಷಕ ಕೊಡುಗೆ, ಗಿಫ್ಟ್ ಹ್ಯಾಂಪರ್ ಸೇರಿದಂತೆ ಹಲವು ರಿಯಾಯಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ 2-3 ದಿನಗಳಿಂದ ಆಭರಣದ ಅಂಗಡಿಗಳೆಲ್ಲ ಗ್ರಾಹಕರಿಂದ ತುಂಬಿಹೋಗಿದ್ದವು. ವಾಹನಗಳ ಶೋರೂಂಗಳಲ್ಲೂ ರಶ್ ಇದ್ದಿದ್ದು ಕಂಡು ಬಂತು ಮಹಿಳೆಯರಿಗೆ ಪ್ರಿಯವಾದ ವಸ್ತು ಬಂಗಾರದ ಆಭರಣ,
ರಂಜಾನ್ ಖರೀದಿಯೂ ಜೋರುತಿಂಗಳಿನಿಂದ ನಡೆಯುತ್ತಿರುವ ರಂಜಾನ್ ವ್ರತಾಚರಣೆ ಇನ್ನೇನು ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಶುಕ್ರವಾರ ಇಲ್ಲವೇ ಶನಿವಾರ ರಂಜಾನ್ ಹಬ್ಬ ಆಚರಿಸುವ ಸಂಭವವಿರುವ ಹಿನ್ನೆಲೆಯಲ್ಲಿ ಮುಸಲ್ಮಾನ್ ಬಾಂಧವರು ಇಲ್ಲಿನ ಶಾಹ ಬಜಾರ್, ದುರ್ಗದಬೈಲ್ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ಬಟ್ಟೆ, ಖಾದ್ಯಗಳಿಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸಿದರು. ರಂಜಾನ್ ಹಬ್ಬ ಅಂಗವಾಗಿ ಇಲ್ಲಿನ ಶಾಹ ಬಜಾರ್, ದುರ್ಗದಬೈಲ್ ಪ್ರದೇಶದಲ್ಲಿ ಜಗಮಗಿಸುವ ವಿದ್ಯುತ್ ದೀಪಾಲಂಕಾರ ಮಾಡಿರುವುದು ಕಂಡುಬಂದಿತು.