ಹುಬ್ಬಳ್ಳಿ ಗ್ರಾಮೀಣ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಡಿ. 16ರಂದು ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ನಡೆಯಲಿದೆ. ಬೆಳಗ್ಗೆ 7.15ಕ್ಕೆ ರಾಷ್ಟ್ರಧ್ವಜವನ್ನು ಶಾಸಕ ಎಂ.ಆರ್. ಪಾಟೀಲ್, ನಾಡಧ್ವಜವನ್ನು ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಹಾಗೂ ಪರಿಷತ್ ಧ್ವಜಾರೋಹಣವನ್ನು ರಮೇಶಗೌಡ ಭರಮಗೌಡ್ರ ನೆರವೇರಿಸುವರು.

ಹುಬ್ಬಳ್ಳಿ:

ಹುಬ್ಬಳ್ಳಿ ಗ್ರಾಮೀಣ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಡಿ. 16ರಂದು ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ರಮೇಶಗೌಡ ಭರಮಗೌಡ್ರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 7.15ಕ್ಕೆ ರಾಷ್ಟ್ರಧ್ವಜವನ್ನು ಶಾಸಕ ಎಂ.ಆರ್. ಪಾಟೀಲ್, ನಾಡಧ್ವಜವನ್ನು ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಹಾಗೂ ಪರಿಷತ್ ಧ್ವಜಾರೋಹಣವನ್ನು ರಮೇಶಗೌಡ ಭರಮಗೌಡ್ರ ನೆರವೇರಿಸುವರು. ಶಿವರುದ್ರಯ್ಯ ಹಿರೇಮಠ ಸಾನ್ನಿಧ್ಯ ವಹಿಸುವರು ಎಂದರು.

ಬೆಳಗ್ಗೆ 8.30ಕ್ಕೆ ಅದರಗುಂಚಿ ಗ್ರಾಮದ ಚನ್ನಬಸವ ಕಲ್ಯಾಣ ಮಂಟಪದಿಂದ ತಾಯಿ ಭುವನೇಶ್ವರಿ, ಅದರಗುಂಚಿ ಶಂಕರಗೌಡ್ರ ಭಾವಚಿತ್ರ ಹಾಗೂ ಸಮ್ಮೇಳನದ ಸರ್ವಾಧ್ಯಕ್ಷ ಮೋಹನ ಮಿಸ್ಕಿನ್‌ ಅವರ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಗ್ರಾಪಂ ಸದಸ್ಯರ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕಳ್ಳಿಮನಿ ಮೆರವಣಿಗೆಗೆ ಚಾಲನೆ ನೀಡುವರು. ಆತ್ಮಾನಂದ ಆಶ್ರಮದ ಸದ್ಗುರು ಕೃಷ್ಣಾನಂದ ಶ್ರೀ ಸಾನ್ನಿಧ್ಯ ವಹಿಸುವರು ಎಂದು ಹೇಳಿದರು.

ಮಧ್ಯಾಹ್ನ 12 ಗಂಟೆಗೆ ಗ್ರಾಮದ ಚನ್ನಬಸವ ಕಲ್ಯಾಣ ಮಂಟಪದಲ್ಲಿ ಸಮ್ಮೇಳನದ ಉದ್ಘಾಟನಾ ಸಮಾರಂಭ ನೆರವೇರಲಿದ್ದು, ಮಣಕವಾಡದ ಅಭಿನವ ಮೃತ್ಯುಂಜಯ ಶ್ರೀ ಸಾನ್ನಿಧ್ಯ ವಹಿಸುವರು. ಹಿರಿಯ ಪ್ರಾಧ್ಯಾಪಕ ಡಾ. ಶಂಭುಲಿಂಗ ಹೆಗಡಾಳ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಕಿಚ್ಚು ಹಚ್ಚುವ ಕವಿತೆಗಳು ಹಾಗೂ ಕ್ರಾಂತಿ ಕಿಡಿ ನುಡಿಗಳು ಎಂಬ ಪುಸ್ತಕ ಬಿಡುಗಡೆಗೊಳಿಸುವರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಭಾಪತಿ ಬಸವರಾಜ ಹೊರಟ್ಟಿ ಪಾಲ್ಗೊಳ್ಳುವರು. ಮಾಜಿ ಶಾಸಕ ಎಸ್‌.ಐ. ಚಿಕ್ಕನಗೌಡ್ರ ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭದಲ್ಲಿ 150 ಸಾಧಕರನ್ನು ಸನ್ಮಾನಿಸಲಾಗುತ್ತಿದೆ. ಸಮ್ಮೇಳನದ ಅಂಗವಾಗಿ ವಿವಿಧ ಸಾಹಿತ್ಯ ಗೋಷ್ಠಿಗಳು ನಡೆಯಲಿದ್ದು, ಅನೇಕ ಸಾಹಿತಿಗಳು, ಕವಿಗಳು, ಭಾಷಾಭಿಮಾನಿಗಳು ಪಾಲ್ಗೊಳ್ಳುವರು ಎಂದರು.

ಸಂಜೆ 5ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕುಂದಗೋಳ ಕಲ್ಯಾಣಪುರಮಠದ ಬಸವಣ್ಣಜ್ಜನವರು ಸಾನ್ನಿಧ್ಯ ವಹಿಸುವರು. ಸಂಜೆ 6.30ಕ್ಕೆ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ನಿಕಟಪೂರ್ವ ಅಧ್ಯಕ್ಷ ಡಾ. ರಾಮು ಮೂಲಗಿ, ಪವನ್ ಮಿಸ್ಕಿನ್, ಮಲ್ಲಿಕಾರ್ಜುನ ಕಳ್ಳಿಮನಿ, ಸುಭಾಷ ಅಂಚಿ, ಚಂದ್ರಗೌಡ, ಶಂಕರಗೌಡ್ರ ಸೇರಿದಂತೆ ಹಲವರಿದ್ದರು.