ವಾಲ್ವ್ ಉದ್ಯಮದ ದಿಗ್ಗಜ, ಬಿಡಿಕೆ ಗ್ರೂಪ್, ಕೆಎಫ್‌ಇಎಲ್ ಗ್ರೂಪ್‌ಗಳ ಸಂಸ್ಥಾಪಕ, ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್ ಸ್ಥಾಪಕ ಹಾಗೂ ಉದ್ಯೋಗರತ್ನ ಪ್ರಶಸ್ತಿ ಪುರಸ್ಕೃತ ಭರತ್ ಭಾಂಜಿ ಖಿಮ್ಜಿ ಅವರು ಗುರುವಾರ ನಿಧನರಾದರು.
ಹುಬ್ಬಳ್ಳಿ: ವಾಲ್ವ್ ಉದ್ಯಮದ ದಿಗ್ಗಜ, ಬಿಡಿಕೆ ಗ್ರೂಪ್, ಕೆಎಫ್‌ಇಎಲ್ ಗ್ರೂಪ್‌ಗಳ ಸಂಸ್ಥಾಪಕ, ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್ ಸ್ಥಾಪಕ ಹಾಗೂ ಉದ್ಯೋಗರತ್ನ ಪ್ರಶಸ್ತಿ ಪುರಸ್ಕೃತ ಭರತ್ ಭಾಂಜಿ ಖಿಮ್ಜಿ (84) ಅವರು ಗುರುವಾರ ನಿಧನರಾದರು.
ಮೃತರಿಗೆ ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವಿದೆ.ಹತ್ತಿ ಗಿರಣಿ ವ್ಯವಹಾರದಲ್ಲಿದ್ದ ಕುಟುಂಬವನ್ನು ವಾಲ್ವ್ ಹಾಗೂ ಪಂಪ್ ಉದ್ಯಮ ಸ್ಥಾಪನೆ ಮಾಡಿ ಅತ್ಯಾಧುನಿಕ ಎಂಜಿನಿಯರಿಂಗ್ ಕ್ಷೇತ್ರಕ್ಕೆ ಕೊಂಡೊಯ್ದ ಶ್ರೇಯಸ್ಸು ಭರತ್ ಖಿಮ್ಜಿ ಅವರಿಗೆ ಸಲ್ಲುತ್ತದೆ. ವಾಲ್ವ್ ಉದ್ಯಮದಿಂದ ಹುಬ್ಬಳ್ಳಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಿದ ಖ್ಯಾತ ಉದ್ಯಮಿ ಇವರು.
ಹುಬ್ಬಳ್ಳಿಯ ಕೈಗಾರಿಕಾ ವಲಯಕ್ಕೆ ಹೊಸಗೌರವ ಹಾಗೂ ತಾಂತ್ರಿಕ ನೈಪುಣ್ಯತೆ ತಂದು ಕೊಟ್ಟವರು. ಬಿಡಿಕೆ ಮೇಲೆ ಎಷ್ಟೋ ಜನ ಎಂಎಸ್‌ಎಂಇ ಉದ್ಯಮಿಗಳ ಅವಲಂಬಿತರಾಗಿದ್ದರು. ಅಂತಾರಾಷ್ಟ್ರೀಯ ಗುಣಮಟ್ಟದ ವಾಲ್ವ್, ಪಂಪ್‌ಗಳ ತಯಾರಿಸುವ ಮೂಲಕ ಇಡೀ ಜಗತ್ತೇ ಹುಬ್ಬಳ್ಳಿಯತ್ತ ತಿರುಗಿ ನೋಡುವಂತೆ ಮಾಡಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಈಗಲೂ ಹುಬ್ಬಳ್ಳಿಯನ್ನು ವಾಲ್ವ್‌ಗಳ ರಾಜಧಾನಿ ಎಂದು ಗುರುತಿಸುವಲ್ಲಿ ಖಿಮ್ಜಿ ಅವರ ಕೊಡುಗೆ ಅಪಾರ. ಕೇವಲ ಉದ್ಯಮ ಸ್ಥಾಪನೆಯಷ್ಟೇ ಅಲ್ಲದೇ ಸಾವಿರಾರು ಜನರಿಗೆ ಉದ್ಯೋಗ ನೀಡುವ ಮೂಲಕ ಸ್ಥಳೀಯ ಆರ್ಥಿಕತೆಗೆ ಬಲ ತುಂಬಿದವರಲ್ಲಿ ಖಿಮ್ಜಿ ಪ್ರಮುಖರು.ಕ್ರಿಕೆಟ್ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದ ಖಿಮ್ಜಿ ಅವರು. ಯುವ ಪ್ರತಿಭೆಗಳಿಗೆ ಕ್ರಿಕೆಟ್ ತರಬೇತಿ ನೀಡುವ ಸಲುವಾಗಿ ಬಿಡಿಕೆ ಸ್ಪೋರ್ಟ್ ಕ್ಲಬ್ ಸ್ಥಾಪನೆ ಮಾಡಿದ್ದರು. ತಮ್ಮ ಕ್ಲಬ್‌ನ ಆಟಗಾರರಿಗಾಗಿಯೇ ಪ್ರತ್ಯೇಕ ಕ್ರಿಕೆಟ್ ಮೈದಾನ ನಿರ್ಮಿಸಿದ್ದಾರೆ. ಧಾರ್ಮಿಕ ಮತ್ತು ಜನಪರ ಕಾರ್ಯಗಳಲ್ಲಿ ಆಸಕ್ತಿ ಹೊಂದಿ ಅವರು ಹತ್ತು ಹಲವು ಸಂಘಟನೆಗಳಲ್ಲಿ ಸಕ್ರೀಯರಾಗಿ ಅಪಾರ ಪ್ರಮಾಣದ ದಾನವನ್ನೂ ನೀಡಿದ್ದಾರೆ.
ಖಿಮ್ಜಿ ಅವರು ನಿಧನರಾಗಿರುವುದಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂಗಳಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ಕೆಎಲ್‌ಇ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಹಾಗೂ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ರಮೇಶ ಪಾಟೀಲ, ಗೌರವ ಕಾರ್ಯದರ್ಶಿ ಶ್ರೀಪತಿ ಭಟ್, ಕೆಸಿಸಿಐ ಮಾಜಿ ಅಧ್ಯಕ್ಷ ವಿನಯ ಜವಳಿ ಸೇರಿದಂತೆ ಅನೇಕ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.