ಮಾಯಕೊಂಡ ಬಳಿ ಹುಬ್ಬಳ್ಳಿ ಅಂಜಲಿ ಹಂತಕ ವಿಶ್ವ ಸೆರೆ

| Published : May 18 2024, 12:39 AM IST

ಸಾರಾಂಶ

ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಕೊಲೆ ಪ್ರಕರಣದ ಆರೋಪಿ ವಿಶ್ವ ಅಲಿಯಾಸ್ ಗಿರೀಶನನ್ನು ದಾವಣಗೆರೆಯಲ್ಲಿ ಪೊಲೀಸರು ಬಂಧಿಸಿದ ಶುಕ್ರವಾರ ಘಟನೆ ನಡೆದಿದೆ. ಆರೋಪಿಯನ್ನು ಹುಬ್ಬಳ್ಳಿಯ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.

- ತುಮಕೂರಿನಿಂದ ವಿಶ್ವಮಾನವ ಎಕ್ಸ್‌ಪ್ರೆಸ್‌ ರೈಲಿನಲ್ಲಿ ದಾವಣಗೆರೆ ಕಡೆಗೆ ಪ್ರಯಾಣಿಸುತ್ತಿದ್ದ ಹಂತಕ - ರೈಲಿನಲ್ಲಿ ಗದಗ ಜಿಲ್ಲೆ ಮೂಲದ ಮಹಿಳೆಗೆ ರೈಲಿನಲ್ಲೇ ಚಾಕು ಇರಿದು, ತಪ್ಪಿಸಿಕೊಳ್ಳುವ ವೇಳೆ ಬಿದ್ದು ಗಾಯ

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಕೊಲೆ ಪ್ರಕರಣದ ಆರೋಪಿ ವಿಶ್ವ ಅಲಿಯಾಸ್ ಗಿರೀಶನನ್ನು ದಾವಣಗೆರೆಯಲ್ಲಿ ಪೊಲೀಸರು ಬಂಧಿಸಿದ ಶುಕ್ರವಾರ ಘಟನೆ ನಡೆದಿದೆ. ಆರೋಪಿಯನ್ನು ಹುಬ್ಬಳ್ಳಿಯ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.

ಆರೋಪಿ ವಿಶ್ವ ಅಲಿಯಾಸ್ ಗಿರೀಶ ಅಂಜಲಿ ಅವರನ್ನು ಕೊಲೆ ಮಾಡಿ, ಬೆಂಗಳೂರಿನಿಂದ ದಾವಣಗೆರೆ ಕಡೆಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದನು. ತಾಲೂಕಿನ ಮಾಯಕೊಂಡ ಸಮೀಪ ಆರೋಪಿ ರೈಲಿನಲ್ಲಿ ಶೌಚಾಲಯಕ್ಕೆ ಹೋಗಿದ್ದ ಸಹ ಪ್ರಯಾಣಿಕ ಮಹಿಳೆಯ ಜೊತೆಗೆ ಕಿರಿಕ್ ಮಾಡಿಕೊಂಡಿದ್ದಾನೆ. ಅಲ್ಲದೇ, ಆ ಪ್ರಯಾಣಿಕ ಮಹಿಳೆಯ ಮೇಲೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ. ತಕ್ಷಣವೇ ಮಹಿಳೆ ಕೂಗಿಕೊಂಡಿದ್ದರಿಂದ ಗಾಯಾಳು ಮಹಿಳೆ ಪತಿ ಹಾಗೂ ಸಾರ್ವಜನಿಕರು ಸ್ಥಳಕ್ಕೆ ದೌಡಾಯಿಸಿ, ರೈಲಿನಲ್ಲೇ ವಿಶ್ವ ಅಲಿಯಾಸ್ ಗಿರೀಶನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಉದ್ರಿಕ್ತ ಜನರಿಂದ ತಪ್ಪಿಸಿಕೊಳ್ಳಲು ಹಂತಕ ವಿಶ್ವ ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಜಿಗಿದಿದ್ದಾನೆ. ಪರಿಣಾಮ ಹಂತಕ ವಿಶ್ವ ಅಲಿಯಾಸ್ ಗಿರೀಶನ ಮುಖ, ತಲೆ, ಕೈ-ಕಾಲುಗಳಿಗೆ ತೀವ್ರ ರಕ್ತಗಾಯಗಳಾಗಿವೆ.

ವಿಷಯ ತಿಳಿದು ತಕ್ಷಣವೇ ರೈಲ್ವೆ ಪೊಲೀಸ್ ಇನ್‌ಸ್ಪೆಕ್ಟರ್‌ ಸಂತೋಷ ಎಂ. ಪಾಟೀಲ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ರೈಲ್ವೆ ಪೊಲೀಸರು ವಿಶ್ವ ಅಲಿಯಾಸ್ ಗಿರೀಶನನ್ನು ವಶಕ್ಕೆ ಪಡೆದು, ದಾವಣಗೆರೆ ಜಿಲ್ಲಾಸ್ಪತ್ರೆಗೆ ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.

ಅಂಜಲಿಯನ್ನು ಬರ್ಬರವಾಗಿ ಹತ್ಯೆಗೈದಿದ್ದ ಆರೋಪಿ ವಿಶ್ವನ ಸಿಡಿಆರ್‌ ಮಾಹಿತಿ ಆಧರಿಸಿ, ಹುಬ್ಬಳ್ಳಿ ಪೊಲೀಸರೂ ಆತನ ಬಂಧನಕ್ಕೆ ಬೆನ್ನುಹತ್ತಿದ್ದರು. ಗದಗ ಮಹಿಳೆ ಮೇಲೆ ಚಾಕುವಿನಿಂದ ಇರಿಯಲು ಯತ್ನಿಸಿದ ಆರೋಪಿಯು ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಹಂತಕನೆಂಬುದು ರೈಲ್ವೆ ಪೊಲೀಸರಿಗೆ ತಕ್ಷಣ ಗಮನಕ್ಕೆ ಬಂದಿದೆ. ಬಳಿಕ ಹುಬ್ಬಳ್ಳಿ ಪೊಲೀಸರಿಗೆ ವಿಷಯ ಮುಟ್ಟಿಸಿ, ಅವರಿಗೆ ಆರೋಪಿಯನ್ನು ಒಪ್ಪಿಸಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ದು, ಪೊಲೀಸರು ಚಿಕಿತ್ಸೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.

- - - ಬಾಕ್ಸ್-1 ಗದಗ ಮಹಿಳೆಯಿಂದಾಗಿ ಸಿಕ್ಕಿಬಿದ್ದ ಹಂತಕ ಹುಬ್ಬಳ್ಳಿ ಅಂಜಲಿ ಅಂಬಿಗೇರಳನ್ನು ಹತ್ಯೆಗೈದ ಆರೋಪಿ ವಿಶ್ವ ಅಲಿಯಾಸ್‌ ಗಿರೀಶ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆಯೇ ರೋಚಕವಾಗಿದೆ. ತುಮಕೂರಿನಿಂದ ವಿಶ್ವಮಾನವ ಎಕ್ಸ್‌ಪ್ರೆಸ್ ಟ್ರೈನ್‌ನಲ್ಲಿ ಗದಗ ಜಿಲ್ಲೆಯ ಲಕ್ಷ್ಮೀ ಅವರು ಪತಿ ಮಹಾಂತೇಶ ಸವಟೂರು ಜೊತೆಗೆ ಪ್ರಯಾಣಿಸುತ್ತಿದ್ದರು. ಲಕ್ಷ್ಮೀ ಅವರ ಬಳಿಯೇ ಹತ್ಯೆ ಆರೋಪಿ ಕಿರಿಕ್ ಮಾಡಿಕೊಂಡಿದ್ದಾನೆ. ಅರಸೀಕೆರೆ ರೈಲ್ವೆ ನಿಲ್ದಾಣದಲ್ಲಿ ಸಾಮಾನ್ಯ ಬೋಗಿಯನ್ನು ಹತ್ತಿದ್ದ ಹಂತಕ ವಿಶ್ವ ಅಲಿಯಾಸ್‌ ಗಿರೀಶ ಸಹಪ್ರಯಾಣಿಕ ಮಹಿಳೆ ಲಕ್ಷ್ಮೀ ಅವರನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದ. ಚಿಕ್ಕಜಾಜೂರು ರೈಲ್ವೆ ನಿಲ್ದಾಣದಲ್ಲಿ ಲಕ್ಷ್ಮೀ ಅವರು ರೆಸ್ಟ್ ರೂಂಗೆ ಹೋಗಿದ್ದರು. ಆಗಲೂ ಆತ ಅವರನ್ನು ಹಿಂಬಾಲಿಸಿದ್ದಾನೆ. ರೆಸ್ಟ್ ರೂಂ ಕಿಂಡಿಯಿಂದ ಗಮನಿಸುತ್ತಿದ್ದ ಕೀಚಕ ವಿಶ್ವ (ಗಿರೀಶ)ನನ್ನು ಲಕ್ಷ್ಮೀ ಅವರು ಗಮನಿಸಿದ್ದಾರೆ. ಅವನ ಕಿಡಿಗೇಡಿತನದಿಂದ ಸಿಟ್ಟಿಗೆದ್ದ ಅವರು, "ನಿನಗೆ ಅಕ್ಕ, ತಂಗಿ ಇಲ್ಲವೇ?.. " ಎಂದು ದಬಾಯಿಸಿದ್ದಾರೆ.

ಈ ಸಂದರ್ಭದಲ್ಲಿ ರೈಲಿನಲ್ಲಿ ಶೌಚಾಲಯದ ಬಳಿಯೇ ಆರೋಪಿ ಗಿರೀಶ ಲಕ್ಷ್ಮೀ ಅವರನ್ನು ಚಾಕುವಿನಿಂದ ಇರಿಯಲು ಮುಂದಾಗಿದ್ದಾನೆ. ಅದೃಷ್ಟವಶಾತ್‌ ಚಾಕು ಲಕ್ಷ್ಮೀ ಅವರ ಕೈಗೆ ತಾಕಿ, ಹೆಚ್ಚಿನ ಅನಾಹುತ ತಪ್ಪಿದೆ. ರಕ್ತಗಾಯದಿಂದ ಗಾಬರಿಗೊಂಡ ಲಕ್ಷ್ಮೀ ಅವರು ನೆರವಿಗಾಗಿ ಪತಿ ಹಾಗೂ ಸಾರ್ವಜನಿಕರಿಗೆ ಕೇಳಿಸುವಂತೆ ಕೂಗಿಕೊಂಡಿದ್ದಾರೆ. ಆಗ ಅಂಜಲಿ ಹಂತಕನಿಗೆ ಎಲ್ಲರಿಂದ ಧರ್ಮದೇಟು ಬಿದ್ದಿದೆ. ಹಂತಕ ಕೊನೆಗೂ ಪೊಲೀಸರ ವಶವಾಗಿದ್ದಾನೆ. ಲಕ್ಷ್ಮೀ ಚಿಕಿತ್ಸೆ ಪಡೆದು ಪತಿ ಮಹಾಂತೇಶ ಅವರ ಜೊತೆ ತಮ್ಮ ಊರಿಗೆ ಹಿಂದಿರುಗಿದ್ದಾರೆ. ಆರೋಪಿ ವಿಶ್ವನ ವಿರುದ್ಧ ಸಂತ್ರಸ್ತೆ ಲಕ್ಷ್ಮಿ ಮಹಾಂತೇಶ ಸವಟೂರು ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- - -

-17ಕೆಡಿವಿಜಿ3:

--17ಕೆಡಿವಿಜಿ4:

-17ಕೆಡಿವಿಜಿ5:

-17ಕೆಡಿವಿಜಿ6: