ಏಸುವಿನ ಆರಾಧನೆಗೆ ಹುಬ್ಬಳ್ಳಿ ಸನ್ನದ್ಧ

| Published : Dec 23 2023, 01:46 AM IST

ಸಾರಾಂಶ

ಡಿ. 25ರಂದು ಕ್ರಿಸ್ಮಸ್‌ ಹಬ್ಬ. ನಗರದ ಎಲ್ಲ ಚರ್ಚ್‌ಗಳಲ್ಲೂ ಈಗ ಹಬ್ಬದ ಸಂಭ್ರಮ ಮನೆಮಾಡಿದ್ದು, ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಕ್ರೈಸ್ತ್‌ ಸಮಾಜ ಬಾಂಧವರು ಚರ್ಚ್‌ಗಳಲ್ಲಿ ಸೇರಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಹಬ್ಬಕ್ಕೆ ಬೇಕಾದ ತಯಾರಿಯಲ್ಲಿ ತೊಡಗಿದ್ದು, ಕಳೆದ ಒಂದು ವಾರದಿಂದ ಚರ್ಚ್‌, ತಮ್ಮ ಮನೆಗಳನ್ನು ವಿದ್ಯುದ್ದೀಪದಿಂದ ಅಲಂಕರಿಸುವುದು, ಬಟ್ಟೆ, ಉಡುಗೊರೆಗಳ ಖರೀದಿ ಜೋರಾಗಿದೆ.

- ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡ ಚರ್ಚ್‌ಗಳು

- ರಂಗೇರುತ್ತಿರುವ ಕ್ರಿಸ್‌ಮಸ್‌ ಹಬ್ಬದ ಸಂಭ್ರಮ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಕ್ರಿಸ್ಮಸ್‌ ಹಬ್ಬ ಬಂತೆಂದರೆ ಸಾಕು ಚರ್ಚ್‌ಗಳಲ್ಲಿ ಎಲ್ಲಿಲ್ಲದ ಸಡಗರ, ಸಂಭ್ರಮ. ಕ್ರೈಸ್ತ ಸಮಾಜ ಬಾಂಧವರು ತಿಂಗಳು ಕಾಲ ವಿಶೇಷ ಪ್ರಾರ್ಥನೆ ಆಚರಿಸುವ ಮೂಲಕ ಹಬ್ಬಕ್ಕೆ ಮೆರಗು ತರುತ್ತಾರೆ.

ಡಿ. 25ರಂದು ಕ್ರಿಸ್ಮಸ್‌ ಹಬ್ಬ. ನಗರದ ಎಲ್ಲ ಚರ್ಚ್‌ಗಳಲ್ಲೂ ಈಗ ಹಬ್ಬದ ಸಂಭ್ರಮ ಮನೆಮಾಡಿದ್ದು, ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಕ್ರೈಸ್ತ್‌ ಸಮಾಜ ಬಾಂಧವರು ಚರ್ಚ್‌ಗಳಲ್ಲಿ ಸೇರಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಹಬ್ಬಕ್ಕೆ ಬೇಕಾದ ತಯಾರಿಯಲ್ಲಿ ತೊಡಗಿದ್ದು, ಕಳೆದ ಒಂದು ವಾರದಿಂದ ಚರ್ಚ್‌, ತಮ್ಮ ಮನೆಗಳನ್ನು ವಿದ್ಯುದ್ದೀಪದಿಂದ ಅಲಂಕರಿಸುವುದು, ಬಟ್ಟೆ, ಉಡುಗೊರೆಗಳ ಖರೀದಿ ಜೋರಾಗಿದೆ.

ಯುವಕ-ಯುವತಿಯರು ಹಬ್ಬವನ್ನು ವಿಶಿಷ್ಟ, ವೈಭವಪೂರಿತವಾಗಿ ಆಚರಿಸುವುದಕ್ಕಾಗಿ ಬೇಕರಿಗಳಲ್ಲಿ ವಿವಿಧ ತರಹದ ಕೇಕ್ ಖರೀದಿಯಲ್ಲಿ ನಿರತರಾಗಿರುವುದು ಶುಕ್ರವಾರ ಕಂಡು ಬಂದಿತು. ಮಕ್ಕಳಿಂದ ಹಿಡಿದು ವೃದ್ಧರಾದಿಯಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಸಡಗರ, ಸಂಭ್ರಮದಿಂದ ಕ್ರಿಸ್ಮಸ್‌ ಆಚರಿಸುವುದು ವಿಶೇಷ.

ಹುಬ್ಬಳ್ಳಿಯ ಕೇಶ್ವಾಪುರದಲ್ಲಿರುವ ಸಂತ ಜೋಸೆಫ್ ಕ್ಯಾಥೋಲಿಕ್‌ ಚರ್ಚ್‌, ಕಾರವಾರ ರಸ್ತೆಯಲ್ಲಿರುವ ಮೈಯರ್‌ ಸ್ಮಾರಕ ದೇವಾಲಯ(ಬಾಷಲ್‌ ಮಿಷನ್‌ ಚರ್ಚ್‌), ದೇಶಪಾಂಡೆ ನಗರದಲ್ಲಿರುವ ಸ್ವರ್ಗಾರೋಹಣ ದೇವಾಲಯ, ಉಣಕಲ್ಲ ಭಾಗದಲ್ಲಿರುವ ಮೈಯರ್‌ ಮಳ್ಳೂರ ದೇವಾಲಯ ಸೇರಿದಂತೆ ಹಲವು ಚರ್ಚ್‌ಗಳನ್ನು ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗಿದೆ.

ಏನೇನು ಕಾರ್ಯಕ್ರಮ:

ಡಿಸೆಂಬರ್‌ ತಿಂಗಳು ಕಾಲ ಕ್ರೈಸ್ತ್‌ ಬಾಂಧವರು ಕ್ರಿಸ್ಮಸ್‌ ಆಚರಣೆ ಮಾಡುವುದು ವಿಶೇಷ. ಆದರೆ, ಡಿ. 24, 25, 29, 31 ಹಾಗೂ ಜ.1ರಂದು ವೈಶಿಷ್ಠ್ಯ ಹಾಗೂ ವೈಭವದಿಂದ ಆಚರಣೆ ಮಾಡುತ್ತಾರೆ. ಡಿ. 24ರಂದು ಗೋಧುಳಿ(ಕೊಟ್ಟಿಗೆ) ನಿರ್ಮಾಣ, ಸಂಜೆ 6.45ಕ್ಕೆ ಮಕ್ಕಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಅಂದು ಚರ್ಚ್‌ಗಳಲ್ಲಿ ಮಕ್ಕಳಿಂದ ಹಲವು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಡಿ. 25ರಂದು ಬೆಳಗ್ಗೆ 6ಕ್ಕೆ ವಿಶೇಷ ಪ್ರಾರ್ಥನೆ, 11ರಿಂದ ರಾತ್ರಿ 9 ಗಂಟೆವರೆಗೂ ಚರ್ಚ್‌ ತೆರೆದಿರುತ್ತದೆ. ಅಂದು ಎಲ್ಲ ಸಮಾಜ ಬಾಂಧವರು ಚರ್ಚ್‌ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗುತ್ತದೆ. ರಾತ್ರಿ 9ಗಂಟೆಯ ನಂತರ ವಿಶೇಷ ಪ್ರಾರ್ಥನೆ ನಡೆಯಲಿದೆ. ಡಿ. 29ರಂದು ಕ್ಯಾಂಡಲ್‌ ಲೈಟ್‌ ಕಾರ್ಯಕ್ರಮ ನೆರವೇರಲಿದ್ದು, ಕೇಕ್‌, ಉಡುಗೊರೆಗಳ ವಿತರಣೆ, ಬಡವರಿಗೆ ಬಟ್ಟೆ ವಿತರಣೆ ನಡೆಯಲಿದೆ.

ಡಿ. 31ಕ್ಕೆ ಬೆಳಗ್ಗೆ 9ಕ್ಕೆ ಪ್ರಾರ್ಥನೆ, ಸಂಜೆ 6.45ರಿಂದ ರಾತ್ರಿ 11.30ರ ವರೆಗೆ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಹೊಸ ವರ್ಷದ ಆಗಮನ ಮಾಡಿಕೊಳ್ಳಲಾಗುತ್ತದೆ. ಹೊಸವರ್ಷದ ಮೊದಲ ದಿನವಾದ ಜ. 1ರಂದು ಬೆಳಗ್ಗೆ 6 ಹಾಗೂ 9ಗಂಟೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು. ಸಂಜೆ 6.45ಕ್ಕೆ ಚರ್ಚ್‌ಗಳಲ್ಲಿ ಸಂಗೀತ ಆರಾಧನೆ ನಡೆಸುವ ಮೂಲಕ ಕ್ರಿಸ್‌ಮಸ್‌ ಹಬ್ಬಕ್ಕೆ ತೆರೆ ಎಳೆಯಲಾಗುತ್ತದೆ.