ಸಾಂಸ್ಕೃತಿಕ ಮೆರಗು ಹೆಚ್ಚಿಸಿದ ಹುಬ್ಬಳ್ಳಿ ಜಗ್ಗಲಗಿ ಹಬ್ಬ

| Published : Mar 29 2024, 12:52 AM IST

ಸಾರಾಂಶ

ಹೋಳಿ ಹಬ್ಬದ ಪ್ರಯುಕ್ತ ಗುರುವಾರ ನಡೆದ ಜಗ್ಗಲಗಿ ಹಬ್ಬವು ನಗರದಲ್ಲಿ ಸಾಂಸ್ಕೃತಿಕ ಮೆರಗು ತಂದಿತು. ಜಗ್ಗಲಗಿಯೊಂದಿಗೆ ವಿವಿಧ ವಾದ್ಯಮೇಳಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಬಗೆಬಗೆಯ ನಾದ ಹೊರಹೊಮ್ಮಿಸುವ ಮೂಲಕ ಜಾನಪದ ಲೋಕವನ್ನೇ ಸೃಷ್ಟಿಸಿತು.

ಹುಬ್ಬಳ್ಳಿ:

ಹೋಳಿ ಹಬ್ಬದ ಪ್ರಯುಕ್ತ ಗುರುವಾರ ನಡೆದ ಜಗ್ಗಲಗಿ ಹಬ್ಬವು ನಗರದಲ್ಲಿ ಸಾಂಸ್ಕೃತಿಕ ಮೆರಗು ತಂದಿತು. ಜಗ್ಗಲಗಿಯೊಂದಿಗೆ ವಿವಿಧ ವಾದ್ಯಮೇಳಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಬಗೆಬಗೆಯ ನಾದ ಹೊರಹೊಮ್ಮಿಸುವ ಮೂಲಕ ಜಾನಪದ ಲೋಕವನ್ನೇ ಸೃಷ್ಟಿಸಿತು.

ಹುಬ್ಬಳ್ಳಿ ಜಗ್ಗಲಿಗೆ ಹಬ್ಬದಲ್ಲಿ ಜಗ್ಗಲಿಗಳಷ್ಟೇ ಅಲ್ಲದೇ ತಮಟೆ, ಹಲಿಗೆ, ಜಾಂಜ್ ಮೇಳ, ಡೊಳ್ಳು, ಕರಡಿ ಮಜಲು ಹೀಗೆ ತರಹೇವಾರಿ ನಾದಗಳಿಗೆ ಕೂಡಿದ್ದ ಸಾವಿರಾರು ಜನರು ಕುಣಿದು ಕುಪ್ಪಳಿಸಿದರು. ಹುಬ್ಬಳ್ಳಿ ಜಗ್ಗಲಗಿ ಹಬ್ಬಕ್ಕೆ ಮೂರುಸಾವಿರ ಮಠದ ಡಾ. ಗುರುಸಿದ್ಧರಾಜಯೋಗೇಂದ್ರ ಶ್ರೀ ಚಾಲನೆ ನೀಡಿದರು. ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ 47 ಜಗ್ಗಲಗಿ ಮೇಳಗಳು, 350ಕ್ಕೂ ಅಧಿಕ ಜಗ್ಗಲಗಿಗಳು, 40ಕ್ಕೂ ಅಧಿಕ ವಿವಿಧ ವಾದ್ಯಮೇಳಗಳು ಪಾಲ್ಗೊಂಡಿದ್ದವು.

ಸುಳ್ಳದ ಸಿದ್ಧಾರೂಢ ಜಗ್ಗಲಗಿ ಮೇಳ, ಜೈ ಹನುಮಾನ ಜಗ್ಗಲಗಿ ಮೇಳ, ಹಂಚಿನಾಳದ ಗ್ರಾಮದೇವತಿ ಜಗ್ಗಲಗಿ ಮೇಳ, ಸುರೇಬಾನದ ಹನುಮಾನ ಜಗ್ಗಲಗಿ ಮೇಳ, ಸುರಶೆಟ್ಟಿಕೊಪ್ಪದ ಶ್ರೀ ಗುಡ್ಡದ ಬಸವೇಶ್ವರ ಜಗ್ಗಲಗಿ ಮೇಳ, ಛಬ್ಬಿಯ ಶ್ರೀ ಶಾಂತಿನಾಥ ಜಗ್ಗಲಗಿ ಮೇಳ, ಜೈ ಹನುಮಾನ ಜಗ್ಗಲಗಿ ಮೇಳ, ಸುರಶೆಟ್ಟಿಕೊಪ್ಪದ ಬ್ರಹ್ಮಲಿಂಗೇಶ್ವರ ಜಗ್ಗಲಗಿ ಮೇಳಗಳು ಪಾಲ್ಗೊಂಡಿದ್ದವು.

ಮೆರಗು ತಂದ ಕಲಾತಂಡಗಳು:ಹಾನಗಲ್ಲದ ಕುಮಾರೇಶ್ವರ ಯುವಕ ಮಂಡಳದ ಬೇಡರ ವೇಷದ ತಂಡ, ಸ್ವರ್ಣ ಮಯೂರಿ ತಂಡದಿಂದ ಕಾಂತಾರ ಚಿತ್ರದ ಸನ್ನಿವೇಶ ಪ್ರದರ್ಶನದ ಕಲಾ ತಂಡ, ಬೆಳಗಾವಿಯ ಮೋತಿಭಾಗ್ ಗಲ್ಲಿಯ ಘೋಲ ತಾಷಾ ಪಟಾಕ ತಂಡ, ಬೆಂಗಳೂರಿನ ಶ್ರೀ ಅಣ್ಣಮ್ಮದೇವಿ ತಮಟೆ ವಾದ್ಯ ವೃಂದ, ಗಂಗಾವತಿಯ ತಾಷಾ ತಂಡ, ಹುಬ್ಬಳ್ಳಿಯ ಗಂಗಾಧರ ನಗರದ ಸೂಪರ್ ಕಿಂಗ್ ನಾಸಿಕ ಡೋಲ್ ತಂಡ, ಉಡುಪಿಯ ಕಾಡುಬೆಟ್ಟು ಪ್ರದೇಶದಿಂದ ಹುಲಿ ಕುಣಿತದ ತಂಡ, ಪ್ರಭು ಶ್ರೀ ರಾಮನ ವೇಷಧಾರಿ, ವಾನರರೊಂದಿಗೆ ಹನುಮಾನ ವೇಷಧಾರಿ ಹಾಗೂ ನಂದಿ ಮತ್ತು ನಾಗಾಸಾಧುಗಳೊಂದಿಗೆ ಪರಮೇಶ್ವರ ವೇಷಧಾರಿಯ 40ಕ್ಕೂ ಅಧಿಕ ಕಲಾವಿದರು ಪಾಲ್ಗೊಂಡು ಜಗ್ಗಲಗಿ ಹಬ್ಬದ ಶೋಭೆ ಹೆಚ್ಚಿಸಿದರು.

ಮೂರುಸಾವಿರ ಮಠದ ಮೈದಾನದಿಂದ ಆರಂಭಗೊಂಡ ಮೆರವಣಿಗೆಯು ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಮರಳಿ ಮೂರುಸಾವಿರ ಮಠಕ್ಕೆ ಆಗಮಿಸಿತು.

ಇತಿಹಾಸ ನಿರ್ಮಿಸಲಿದೆ:

ಇದಕ್ಕೂ ಮೊದಲು ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಡಾ. ಗುರುಸಿದ್ಧ ರಾಜಯೋಗೇಂದ್ರ ಶ್ರೀ ಮಾತನಾಡಿ, ಸಾಂಸ್ಕೃತಿಕ ಉತ್ಸವದ ರೂಪ ಪಡೆಯುತ್ತಿರುವ ಹುಬ್ಬಳ್ಳಿ ಜಗ್ಗಲಿಗೆ ಹಬ್ಬ ಮುಂದೊಂದು ದಿನ ಇತಿಹಾಸ ಬರೆಯಲಿದೆ. ಹಬ್ಬ ವರ್ಷದಿಂದ ವರ್ಷಕ್ಕೆ ರಂಗೇರುತ್ತಿರುವುದು ಸಂತಸದ ಸಂಗತಿ. ಸಂಸ್ಕೃತಿ ಹಾಗೂ ಪೌರಾಣಿಕತೆ ನೆನಪಿಸುವಂತಹ ಕೆಲಸ ಈ ಹಬ್ಬದಿಂದ ಆಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಹೋಳಿ ಹಬ್ಬಕ್ಕೆ ಅದರದ್ದೇ ಇತಿಹಾಸ, ಪರಂಪರೆಯಿದ್ದು, ಪ್ರತಿಯೊಬ್ಬ ಮನುಷ್ಯನ ವಿಕೃತ ಗುಣಗಳನ್ನು ಹೊರ ಹಾಕುವುದೇ ಹೋಳಿ ಹಬ್ಬ ಎಂದರು.ಶಾಸಕ, ಹಲಗೆ ಹಬ್ಬದ ಆಯೋಜಕ ಮಹೇಶ ಟೆಂಗಿನಕಾಯಿ ಮಾತನಾಡಿದರು. ಈ ವೇಳೆ ವಾಲಿ ಮಹಾರಾಜರು, ಹಾವೇರಿ ಹುಕ್ಕೇರಿ ಮಠದ ಸದಾಶಿವ ಶ್ರೀ, ರುದ್ರಾಕ್ಷಿ ಮಠದ ಬಸವಲಿಂಗ ಶ್ರೀ, ಆಂಧ್ರಪ್ರದೇಶದ ವಿರೂಪಾಕ್ಷ ದೇವರು ಸೇರಿದಂತೆ 20ಕ್ಕೂ ಅಧಿಕ ಮಠಾಧೀಶರು, ವಿಪ ಸದಸ್ಯ ಎಸ್‌.ವಿ. ಸಂಕನೂರ, ಪಾಲಿಕೆ ಮೇಯರ್‌ ವೀಣಾ ಬರದ್ವಾಡ ಸೇರಿದಂತೆ ಹಲವರಿದ್ದರು.