ನಿರಂತರ ನೀರು: ಮೀಟರ್‌ ಬದಲಿಕೆಗೆ ಸದ್ದಿಲ್ಲದೇ ತಯಾರಿ!

| Published : Mar 06 2024, 02:18 AM IST

ಸಾರಾಂಶ

9200 ರೂ. ಬೆಲೆ ಮೀಟರ್‌ ಅಳವಡಿಕೆಗೆ ಎಲ್‌ ಆ್ಯಂಡ್‌ ಟಿ ಕಂಪನಿ ಸದ್ದಿಲ್ಲದೆ ತಯಾರಿ ನಡೆಸಿದ್ದು, ಇದಕ್ಕೆ ಪಾಲಿಕೆ ಸದಸ್ಯರಿಂದಲೇ ಆಕ್ಷೇಪ ವ್ಯಕ್ತವಾಗಿದೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಿರಂತರ ನೀರು ಸರಬರಾಜು ಮಾಡುವ ಕಾಮಗಾರಿ ನಡೆದಿದೆ. ಇದರೊಂದಿಗೆ ಪ್ರತಿಮನೆಗೂ ಹೊಸ ಮೀಟರ್‌ ಅಳವಡಿಸಲು ಸದ್ದಿಲ್ಲದೇ ತಯಾರಿಯೂ ನಡೆದಿದೆ.

₹ 9200ಗಳ ಈ ಮೀಟರ್‌ನ್ನು ಅಳವಡಿಸಲು ಮಹಾನಗರ ಪಾಲಿಕೆ ಸದಸ್ಯರು ಆಕ್ಷೇಪಿಸಿದ್ದು, ಮೊದಲು ಯಾವ ಮೀಟರ್‌? ಹಳೇ ಮೀಟರ್‌ಗಳಿಂದ ಸಮಸ್ಯೆಯೇನು ಎಂಬುದನ್ನು ತಿಳಿಸಲಿ ಎಂಬ ಬೇಡಿಕೆ ಸದಸ್ಯರದ್ದು.

ಮಹಾನಗರದಲ್ಲಿ ಎಲ್‌ ಆ್ಯಂಡ್‌ ಟಿ ಕಂಪನಿ ನೀರು ಸರಬರಾಜು ಮಾಡುವ ಜವಾಬ್ದಾರಿ ಹೊತ್ತಿದೆ. ಮುಂದಿನ ವರ್ಷ ಅಂದರೆ 2025ರ ಸೆಪ್ಟೆಂಬರ್‌ನೊಳಗೆ 24/7 ನಿರಂತರ ನೀರು ಸರಬರಾಜು ಮಾಡಲು ಕಾಮಗಾರಿ ಆರಂಭಿಸಿದೆ. ಇದಕ್ಕೆ ಸಂಬಂಧಪಟ್ಟಂತೆ ಕೆಲಸವೂ ಭರದಿಂದ ಸಾಗಿದೆ.

ಸದ್ಯ ಏನಿದೆ ಪರಿಸ್ಥಿತಿ?

ಒಟ್ಟು 82 ವಾರ್ಡ್‌ಗಳ ಪೈಕಿ 11 ವಾರ್ಡ್‌ಗಳಲ್ಲಿ ನಿರಂತರ ನೀರು ಸರಬರಾಜು ಆಗುತ್ತಿದೆ. ಇನ್ನು 25 ವಾರ್ಡ್‌ಗಳಲ್ಲಿ ಪ್ರತಿದಿನ 4-5 ಗಂಟೆ ನೀರು ಸರಬರಾಜು ಆಗುತ್ತದೆ. ಇನ್ನುಳಿದ 46 ವಾರ್ಡ್‌ಗಳಲ್ಲಿ 6 ದಿನಕ್ಕೊಮ್ಮೆ ನೀರು ಸರಬರಾಜು ಆಗುತ್ತದೆ ಎಂದು ಎಲ್‌ಆ್ಯಂಡ್‌ಟಿ ಕಂಪನಿ ಹಾಗೂ ಪಾಲಿಕೆ ಹೇಳುತ್ತದೆ. ಆದರೆ 8-10 ದಿನಕ್ಕೊಮ್ಮೆ ನೀರು ಸರಬರಾಜು ಆಗುತ್ತದೆ. ಇದು ಮಹಾನಗರದಲ್ಲಿನ ನೀರು ಸರಬರಾಜಿಗೆ ಸಂಬಂಧಪಟ್ಟಂತೆ ಸದ್ಯದ ಪರಿಸ್ಥಿತಿ.

ಹೊಸ ಮೀಟರ್‌

ಈಗ ಎಲ್‌ಆ್ಯಂಡ್‌ ಟಿ ಕಂಪನಿ ಮೊದಲ ಹಂತದಲ್ಲಿ ನಿರಂತರ ನೀರು ಸರಬರಾಜು ಮಾಡುವ ವಾರ್ಡ್‌ ಸೇರಿದಂತೆ ಪ್ರತಿದಿನ ನೀರು ಪೂರೈಕೆಯ ವಾರ್ಡ್‌ಗಳಲ್ಲಿ ಮೀಟರ್‌ ಬದಲಿಸಬೇಕು ಎಂದು ಹೇಳಿಕೊಂಡಿದೆ. ಈ ಮೀಟರ್‌ನ ಬೆಲೆಯೇ ₹9200 ಇದೆ. ಇದಕ್ಕೆ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದೆ. ಇದು ಸೆನ್ಸರ್‌ ಅಳವಡಿಕೆಯ ಮೀಟರ್‌ ಅಂತೆ. ಅಂದರೆ ಎಷ್ಟು ನೀರು ಬಳಕೆ ಮಾಡಲಾಗುತ್ತದೆಯೋ ಅಷ್ಟೇ ಚಾರ್ಜ್‌ ಆಗುತ್ತದೆ. ಜನರು ತಾವು ಎಷ್ಟು ನಳದಿಂದ ಪಡೆದುಕೊಳ್ಳುತ್ತಾರೋ ಅಷ್ಟೇ ಬಿಲ್‌ ಕಟ್ಟಬಹುದು. ಇದು ಅಡ್ವಾನ್ಸಡ್‌ ಮೀಟರ್‌ ಎಂಬುದು ಎಲ್‌ಆ್ಯಂಡ್‌ಟಿ ವಾದ.

ಈ ಹೊಸ ಮೀಟರ್‌ನ ಬೆಲೆ ₹9200. ಅದರಲ್ಲಿನ ಶೇ. 50ರಷ್ಟು (₹4600) ಬೆಲೆಯನ್ನು ಏಕಕಾಲಕ್ಕೆ ಅಳವಡಿಕೆಯಾದ ಬಳಿಕ ಪಾವತಿಸಬೇಕು. ಇನ್ನುಳಿದ ₹4600 ಅನ್ನು ಪ್ರತಿ ತಿಂಗಳ ಬಿಲ್‌ನಲ್ಲಿ ₹50ಯಂತೆ ಪಾವತಿಸುತ್ತಾ ಹೋಗಬೇಕು ಎಂದು ಹೇಳಲಾಗಿದೆ.

ಪಾಲಿಕೆ ಸದಸ್ಯರ ಆಕ್ಷೇಪ

ಇದಕ್ಕೆ ಪಾಲಿಕೆ ಆಕ್ಷೇಪವಿದೆ. ಎಲ್‌ಆ್ಯಂಡ್‌ ಟಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳುವಾಗ ಮೀಟರ್‌ ಬದಲಿಸುವ ಕುರಿತು ಉಲ್ಲೇಖವಾಗಿದೆಯೇ? ಆಗ ಆಗಿದ್ದರೆ ಹೊಸ ಮೀಟರ್‌ನಲ್ಲಿ ಅಂತಹ ವಿಶೇಷತೆ ಏನಿದೆ? ಅಷ್ಟೊಂದು ದುಡ್ಡು ಏಕೆ? ಎಂಬುದು ಪಾಲಿಕೆ ಸದಸ್ಯರ ಪ್ರಶ್ನೆ. ಆದರೆ ಇದಕ್ಕೆ ಸದ್ಯ ಮಟ್ಟಿಗೆ ಪಾಲಿಕೆಯಾಗಲಿ, ಎಲ್‌ಆ್ಯಂಡ್‌ಟಿ ಬಳಿಯಾಗಲಿ ಉತ್ತರ ದೊರೆತಿಲ್ಲ. ಅದಕ್ಕಾಗಿ ಮೊದಲು ಮೀಟರ್‌ನ ಬಗ್ಗೆಯೇ ಪಾಲಿಕೆ ಸದಸ್ಯರಿಗೆ ಪ್ರಾತ್ಯಕ್ಷಿಕೆಯ ಸಭೆ ನಡೆಸಬೇಕು. ಅದಾದ ಬಳಿಕ ಒಪ್ಪಂದದಲ್ಲಿ ಏನಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ತದನಂತರವಷ್ಟೇ ಮೀಟರ್‌ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು. ಅಲ್ಲಿ ವರೆಗೂ ಮೀಟರ್‌ ಅಳವಡಿಸಲು ಮುಂದಾದರೆ ನಾವೇ ಹೋರಾಟ ಮಾಡಬೇಕಾಗುತ್ತದೆ ಎಂಬುದು ಪಾಲಿಕೆ ಸದಸ್ಯರು ಪಕ್ಷಾತೀತವಾಗಿ ಎಚ್ಚರಿಕೆ ನೀಡುತ್ತಾರೆ.

ಇದಕ್ಕೆ ಪಾಲಿಕೆಯೂ ಒಪ್ಪಿಕೊಂಡಿದ್ದು, ಶೀಘ್ರದಲ್ಲೇ ಸಭೆ ಕರೆಯುವುದಾಗಿ ತಿಳಿಸಿದೆ. ಈ ಮಧ್ಯೆ ಎಲ್‌ಆ್ಯಂಡ್‌ಟಿ ಕಂಪನಿ ಹೊಸ ಮೀಟರ್‌ ಅಳವಡಿಸುವ ವಿಷಯ ಚರ್ಚೆಗೆ ಗ್ರಾಸವನ್ನುಂಟು ಮಾಡಿದ್ದಂತೂ ಸತ್ಯ.

ಸಭೆ ನಡೆಸಿ ತೀರ್ಮಾನ

ಎಲ್‌ಆ್ಯಂಡ್‌ಟಿ ಕಂಪನಿ ಹೊಸ ಮೀಟರ್‌ ಅಳವಡಿಸುವ ಕುರಿತು ಪ್ರಸ್ತಾಪಿಸಿದೆ. ಆದರೆ ಇದಕ್ಕೆ ಸದಸ್ಯರು ಆಕ್ಷೇಪಿಸಿದ್ದಾರೆ. ಮೀಟರ್‌ ಬಗ್ಗೆ ಸಭೆ ನಡೆಸಿ ಮುಂದೆ ತೀರ್ಮಾನಿಸಲಾಗುವುದು.

ಡಾ. ಈಶ್ವರ ಉಳ್ಳಾಗಡ್ಡಿ, ಆಯುಕ್ತರು, ಮಹಾನಗರ ಪಾಲಿಕೆಅಷ್ಟೊಂದು ದುಡ್ಡು ಏಕೆ?₹9200 ಬೆಲೆಯ ಮೀಟರ್ ಅಳವಡಿಸಲು ಎಲ್‌ಆ್ಯಂಡ್‌ ಟಿ ಮುಂದಾಗಿದೆ. ಆದರೆ ಅದ್ಯಾವ ಮೀಟರ್‌? ಹಳೇ ಮೀಟರ್‌ ಏಕೆ ನಡೆಯಲ್ಲ? ಒಪ್ಪಂದದಲ್ಲಿ ಇದು ಉಲ್ಲೇಖವಾಗಿದೆಯೇ? ಅಷ್ಟೊಂದು ದುಡ್ಡು ಏಕೆ ಎಂಬ ಬಗ್ಗೆ ಸರಿಯಾದ ಉತ್ತರವಿಲ್ಲ. ಹೀಗಾಗಿ ಸಭೆ ಕರೆದು ಸ್ಪಷ್ಟಪಡಿಸುವಂತೆ ಕೇಳಿದ್ದೇವೆ.

ವೀರಣ್ಣ ಸವಡಿ, ಮಾಜಿ ಮೇಯರ್‌