ಸಾರಾಂಶ
ದೈಹಿಕ, ಮಾನಸಿಕವಾಗಿ ಬರುವ ಕಾಯಿಲೆಗಳನ್ನು ಯೋಗದಿಂದ ನಿವಾರಣೆ ಮಾಡಬಹುದು ಎಂದು ಡಿ.ನಾಗರಾಜ್ ಗುರೂಜಿ ಪ್ರತಿಪಾದಿಸಿದರು.
ನರಸಿಂಹರಾಜಪುರ: ಯೋಗದಿಂದ ಸರ್ವರೋಗಗಳು ನಿವಾರಣೆಯಾಗಲಿದ್ದು, ಪ್ರಪಂಚದ 192 ರಾಷ್ಟಗಳಲ್ಲಿ ಯೋಗ ಪ್ರಸಿದ್ದಿ ಪಡೆದಿದೆ ಎಂದು ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟ್ ನ ಭದ್ರಾವತಿಯ ಡಿ.ನಾಗರಾಜ್ ಗುರೂಜಿ ಹೇಳಿದರು.
ಇಲ್ಲಿನ ಗುರುಭವನದಲ್ಲಿ ಮಂಗಳವಾರ ಹಿರಿಯ ನಾಗರಿಕರ ಸಮಿತಿ, ರೋಟರಿಕ್ಲಬ್, ಲಯನ್ಸ್ ಕ್ಲಬ್ ,ಗೆಳೆಯರ ಬಳಗ ಮತ್ತು ಸೀನಿಯರ್ ಛೇಂಬರ್ ಇಂಟರ್ ನ್ಯಾಶನಲ್ ವತಿಯಿಂದ ನಡೆದ ಯೋಗ,ಧ್ಯಾನ, ಪ್ರಾಣಾಯಾಮ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ದೈಹಿಕವಾಗಿ, ಮಾನಸಿಕವಾಗಿ ಬರುವ ಕಾಯಿಲೆಗಳನ್ನು ಯೋಗದಿಂದ ನಿವಾರಣೆ ಮಾಡಬಹುದು. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಧ್ಯಾನ, ಯೋಗ ಅವಶ್ಯಕ. ಯೋಗದಿಂದ ನರಗಳಿಗೆ ಹೊಸ ಶಕ್ತಿ ಬರುತ್ತದೆ. ಗ್ಯಾಸ್ಟಿಕ್ ಸಮಸ್ಯೆ, ಕಣ್ಣಿನ ದೃಷ್ಟಿದೋಷ, ರಕ್ತದೊತ್ತಡ, ಮಧುಮೇಹ ನಿವಾರಣೆಯಾಗುತ್ತದೆ. ಶವಾಸನದಿಂದ ದೇಹ ಹಗುರವಾಗುತ್ತದೆ. ಆಸನಗಳಿಂದ ಮಂಡಿ ನೋವು,ಹಿಮ್ಮಡಿ ನೋವು ನಿವಾರಣೆಯಾಗುತ್ತದೆ. ಬೊಜ್ಜು ಸಹ ಕರಗಲಿದೆ. ಪ್ರತಿ ನಿತ್ಯ ಧ್ಯಾನ ಮಾಡುವುದರಿಂದ ಸಾಕಷ್ಟು ಲಾಭಗಳಿದ್ದು ಲವಲವಿಕೆಯಿಂದ ಇರಬಹುದು. ಮಾನಸಿಕ ನೆಮ್ಮದಿ ಸಹ ಸಿಗುತ್ತದೆ. ಹೃದಯದ ಕಾಯಿಲೆಗಳು ದೂರವಾಗುತ್ತವೆ. ಯಾವ ಕಾಯಿಲೆಗಳಿವೆಯೋ ಅವುಗಳ ನಿವಾರಣೆಗೆ ಬೇಕಾದಂತಹ ಯೋಗ,ಧ್ಯಾನ, ಪ್ರಾಣಾಯಾಮಗಳನ್ನು ಮಾಡಿಸಲಾಗುವುದು. ಪ್ರತಿನಿತ್ಯ ನಡಿಗೆ,ಯೋಗ,ಧ್ಯಾನದಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಈ ಕುರಿತು 15 ದಿನಗಳ ಕಾಲ ನಡೆಯುವ ಶಿಬಿರದಲ್ಲಿ ಹೇಳಿಕೊಡಲಾಗುವುದು ಎಂದರು. ತಾಲೂಕು ಹಿರಿಯ ನಾಗರಿಕರ ಸಮಿತಿಯ ಅಧ್ಯಕ್ಷ ಎಚ್.ಆರ್.ದಿನೇಶ್ ಉದ್ಘಾಟಿಸಿ ಮಾತನಾಡಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಶಿಬಿರವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದರು. ರೋಟರಿ ಸಂಸ್ಥೆಯ ಝೋನಲ್ ಲೆಪ್ಟಿನೆಂಟ್ ಜಿ.ದಿವಾಕರ್ ಮಾತನಾಡಿ, ಎಲ್ಲಾ ಸಂಪತ್ತಿಗಿಂತಲೂ ಆರೋಗ್ಯವೇ ದೊಡ್ಡ ಸಂಪತ್ತಾಗಿದೆ. ಒತ್ತಡದ ಬದುಕಿನಲ್ಲಿ ಹಲವು ಕಾಯಿಲೆಗಳು ಬರುತ್ತಿದ್ದು ಮಾನಸಿಕ ನೆಮ್ಮದಿ, ರೋಗ ಮುಕ್ತ ದೇಹಕ್ಕೆ ಯೋಗ ಸಹಕಾರಿಯಾಗಲಿದೆ ಎಂದರು.ಗೆಳೆಯರ ಬಳಗದ ಅಧ್ಯಕ್ಷ ಎಚ್.ಬಿ.ರಘುವೀರ್ ಮಾತನಾಡಿ, ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ತಾಲ್ಲೂಕು ಕೇಂದ್ರದಲ್ಲಿ ಆಯೋಜಿಸುತ್ತಿರುವ ಈ ಯೋಗ ಶಿಬಿರ 7 ನೇ ಶಿಬಿರವಾಗಿದೆ. ಹಿಂದೆ ಸಿದ್ಧ ಸಮಾದಿ ಯೋಗ ಶಿಬಿರ ಆಯೋಜಿಸಲಾಗಿತ್ತು. ಪ್ರಸ್ತುತ ನಾಗರಾಜ್ ಗುರೂಜಿಯವರ 3ನೇ ಯೋಗ ಶಿಬಿರವಾಗಿದೆ ಎಂದರು.ರೋಟರಿ ಸಂಸ್ಥೆ ಅಧ್ಯಕ್ಷ ಎನ್.ಕೆ.ಕಿರಣ್, ಮಾಜಿ ಅಧ್ಯಕ್ಷ ಡಿ.ಸಿ.ದಿವಾಕರ್, ಲಯನ್ಸ್ ಕ್ಲಬ್ ಅಧ್ಯಕ್ಷ ರವಿಚಂದ್ರ, ರೋಟರಿ ಕಾರ್ಯದರ್ಶಿ ವಿದ್ಯಾನಂದಕುಮಾರ್, ಕೆ.ಎಸ್.ರಾಜಕುಮಾರ್, ವಿಜಯ ಹಾಜರಿದ್ದರು.