ಸಾರಾಂಶ
ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಅವರು ಕಾಂಗ್ರೆಸ್‌ಗೆ ಹೋಗಲಿದ್ದಾರೆ ಎಂಬ ಸುದ್ದಿಯ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಸ್ವಾಗತ ಕೋರುವ ಫ್ಲೆಕ್ಸ್, ಬ್ಯಾನರ್‌ನಲ್ಲಿ ಹೆಬ್ಬಾರ್ ಅವರ ಫೋಟೋ ಕೂಡ ರಾರಾಜಿಸುತ್ತಿರುವುದು ಕುತೂಹಲ ಮೂಡಿಸಿದೆ.
ಕನ್ನಡಪ್ರಭ ವಾರ್ತೆ ಕಾರವಾರ/ಬನವಾಸಿ
ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಅವರು ಕಾಂಗ್ರೆಸ್‌ಗೆ ಹೋಗಲಿದ್ದಾರೆ ಎಂಬ ಸುದ್ದಿಯ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಸ್ವಾಗತ ಕೋರುವ ಫ್ಲೆಕ್ಸ್, ಬ್ಯಾನರ್‌ನಲ್ಲಿ ಹೆಬ್ಬಾರ್ ಅವರ ಫೋಟೋ ಕೂಡ ರಾರಾಜಿಸುತ್ತಿರುವುದು ಕುತೂಹಲ ಮೂಡಿಸಿದೆ.ಬನವಾಸಿ, ಹೆಬ್ಬಾರ್ ಅವರು ಪ್ರತಿನಿಧಿಸುವ ಕ್ಷೇತ್ರವಾಗಿದ್ದು, ಬನವಾಸಿಯ ಕದಂಬೋತ್ಸವದ ಹಿನ್ನೆಲೆಯಲ್ಲಿ ಹೆಬ್ಬಾರ್ ಅವರು ಸಿಎಂ, ಡಿಸಿಎಂಗೆ ಸ್ವಾಗತ ಕೋರಿ ಫ್ಲೆಕ್ಸ್ ಹಾಕಿಸಿದ್ದಾರೆ. ಬನವಾಸಿಯ ತುಂಬ ಇಂತಹ ಫ್ಲೆಕ್ಸ್, ಬ್ಯಾನರ್‌ಗಳು ರಾರಾಜಿಸುತ್ತಿವೆ. ಈ ಮಧ್ಯೆ, ಬನವಾಸಿಗೆ ಬಂದ ಸಿಎಂ ಅವರು ಹೆಬ್ಬಾರ್ ಜೊತೆ ರಹಸ್ಯ ಮಾತುಕತೆ ನಡೆಸಿರುವುದು, ಭಾಷಣದಲ್ಲೂ ಹೆಬ್ಬಾರ್ ತಮ್ಮ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಮುಖ್ಯಮಂತ್ರಿಯವರು ಪ್ರಶಂಸಿಸಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಆದರೆ, ಇದರಲ್ಲಿ ವಿಶೇಷ ಏನಿಲ್ಲ, ಕ್ಷೇತ್ರದ ಶಾಸಕರಾಗಿ ಅವರು ಸಿಎಂಗೆ ಸ್ವಾಗತ ಕೋರಿದ್ದಾರೆ ಎಂದು ಹೆಬ್ಬಾರ್ ಬೆಂಬಲಿಗರು ಹೇಳಿಕೊಳ್ಳುತ್ತಿದ್ದಾರೆ.ಸಿಎಂ, ಹೆಬ್ಬಾರ್ ರಹಸ್ಯ ಮಾತುಕತೆ:ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಗಳವಾರ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಜೊತೆ ರಹಸ್ಯ ಮಾತುಕತೆ ನಡೆಸಿದ್ದು, ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆಯ ಸಾಧ್ಯತೆಗೆ ರೆಕ್ಕೆಪುಕ್ಕ ಬಂದಿದೆ.
ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಈ ಸಭೆ ನಡೆದಿದೆ. ಸಚಿವ ಮಂಕಾಳ ವೈದ್ಯ, ಶಾಸಕರಾದ ಆರ್.ವಿ.ದೇಶಪಾಂಡೆ, ಭೀಮಣ್ಣ ನಾಯ್ಕ, ಸತೀಶ ಸೈಲ್, ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್, ನಿವೇದಿತ ಆಳ್ವ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು. ಈ ಮಹತ್ವದ ಮಾತುಕತೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರು ಕದಂಬೋತ್ಸವ ಉದ್ಘಾಟನೆಗೆ ಸುಮಾರು ಒಂದು ಗಂಟೆ ವಿಳಂಬವಾಗಿ ಆಗಮಿಸಿದರು.