ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ತೆರಳುವ ಭಕ್ತಾದಿಗಳನ್ನು ಇಂಡಿಗನತ್ತ ಗ್ರಾಮದವರೆಗೆ ಕರೆದೊಯ್ಯಲು ಅವಕಾಶ ಮಾಡಿಸಿ ಕೊಡುವಂತೆ ಜೀಪ್ ಚಾಲಕರು ಮಾಜಿ ಶಾಸಕ ಆರ್. ನರೇಂದ್ರ ಅವರಿಗೆ ಮನವಿ ಮಾಡಿದರು.ಇತ್ತೀಚೆಗೆ ಅರಣ್ಯ ವ್ಯಾಪ್ತಿಯ ಗಿರಿಶಿಖರಗಳಲ್ಲಿ ಚಾರಣ ಮಾಡುವ ಹವ್ಯಾಸ ಅಧಿಕವಾಗಿದ್ದು ವಾರಾಂತ್ಯದಲ್ಲಿ ಜನ ದಟ್ಟಣೆಗೆ ಕಾರಣವಾಗಿದೆ. ಹೀಗೆ ಬರುವವರು ಅರಣ್ಯದಂಚಿನ ಗ್ರಾಮಗಳಲ್ಲಿ ಮತ್ತು ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಬಾಟಲಿ, ತಟ್ಟೆ ಉಳಿದ ಆಹಾರ ಪದಾರ್ಥ ಇತ್ಯಾದಿಗಳನ್ನು ಎಸೆಯುತ್ತಿದ್ದು ಇದು ವನ್ಯಜೀವಿಗಳಿಗೆ ಅಪಾಯ ತರುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದ ಹಿನ್ನೆಲೆ ಮಲೆ ಮಹದೇಶ್ವರ ವನ್ಯಜೀವಿಧಾಮದ ನಾಗಮಲೆ ದರ್ಶನಕ್ಕೆ ಆನ್‌ಲೈನ್‌ನಲ್ಲಿ ಬುಕ್ ಮಾಡಿ ಅನುಮತಿ ಪಡೆದ ನಂತರ ಭಕ್ತರು ನಾಗಮಲೆಗೆ ಹೋಗಬಹುದಾಗಿತ್ತು. ಇದಲ್ಲದೆ ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಹೋಗುವವರನ್ನು ಜೀಪ್‌ಗಳಲ್ಲಿ ಕರೆದೊಯ್ಯುತ್ತಿದ್ದರು ಇದಕ್ಕೂ ಸಹ ನಿರ್ಬಂಧ ಹೇರಲಾಗಿತ್ತು.ಈ ನಿಟ್ಟಿನಲ್ಲಿ ಮಾಜಿ ಶಾಸಕ ಆರ್ ನರೇಂದ್ರ ಅವರು ಧಾರ್ಮಿಕ ಭಾವನೆಗೆ ಧಕ್ಕೆ ತರಲು ಅವಕಾಶ ಮಾಡಿಕೊಡದೆ ನಾಗಮಲೆಗೆ ಭಕ್ತಾದಿಗಳು ತೆರಳಲು ಅವಕಾಶ ಮಾಡಿಕೊಡಬೇಕೆಂದು ಪತ್ರಿಕಾಗೋಷ್ಠಿ ಸಹಮೂಲಕ ಒತ್ತಾಯಿಸಿದ್ದರು.ಈ ಹಿನ್ನೆಲೆ ಮಲೆ ಮಹದೇಶ್ವರ ಬೆಟ್ಟದಲ್ಲಿನ ಜೀಪ್ ಚಾಲಕರು ಹಾಗೂ ಮಾಲೀಕರು ಮಾಜಿ ಶಾಸಕ ಆರ್ ನರೇಂದ್ರ ಅವರ ಕೊಳ್ಳೇಗಾಲ ನಿವಾಸದಲ್ಲಿ ಭೇಟಿಯಾಗಿ ನಾವು ಭಕ್ತಾದಿಗಳನ್ನು ನಂಬಿಯೇ ಜೀವನ ನಡೆಸುತಿದ್ದೇವೆ. ಸಾಲ ಮಾಡಿ ವಾಹನಗಳನ್ನು ತೆಗೆದುಕೊಂಡಿದ್ದೇವೆ, ಇದೀಗ ನಮ್ಮ ಮಕ್ಕಳ ಪರೀಕ್ಷಾ ಸಮಯವಾಗಿರುವುದರಿಂದ ಜೀವನಕ್ಕೆ ತೊಂದರೆಯಾಗಿದೆ. ಇನ್ನೆರಡು ತಿಂಗಳಲ್ಲಿ ಶಾಲೆಗಳು ಪ್ರಾರಂಭವಾಗಲಿದೆ ವಿದ್ಯಾರ್ಥಿಗಳ ಪ್ರವೇಶಾತಿ ಶುಲ್ಕವನ್ನು ಸಹ ಕಟ್ಟಲು ನಮ್ಮಲ್ಲಿ ಹಣವಿಲ್ಲ, ನಮಗೆ ಈ ಚಾಲಕ ವೃತ್ತಿ ಬಿಟ್ಟರೆ ಯಾವುದೇ ವೃತ್ತಿ ಗೊತ್ತಿಲ್ಲ, ಕಳೆದ 15 ದಿನಗಳಿಂದ ಅರಣ್ಯ ಇಲಾಖೆಯವರು ಜೀಪ್ ಹೋಗುವುದಕ್ಕೆ ನಿರ್ಬಂಧ ಹೇರಿರುವುದರಿಂದ ನಮ್ಮ ಜೀವನಕ್ಕೆ ತೊಂದರೆಯಾಗಿದೆ ಆದ್ದರಿಂದ ತಾವುಗಳು ಸರ್ಕಾರದ ಜೊತೆ ಮಾತನಾಡಿ ನಮ್ಮ ಜೀವನ ನಡೆಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಸ್ಥಳದಲ್ಲಿಯೇ ಮಾಜಿ ಶಾಸಕ ಆರ್ ನರೇಂದ್ರ ಡಿಸಿಎಫ್ ಸಂತೋಷ್ ಕುಮಾರ್ ಅವರ ಜೊತೆ ದೂರವಾಣಿ ಮುಖಾಂತರ ಮಾತನಾಡಿ, ವಾಹನಗಳ ಇನ್ಸೂರೆನ್ಸ್, ಚಾಲನಾ ಪರವಾನಿಗೆ, ನವೀಕರಣ, ಸೇರಿದಂತೆ ಇನ್ನಿತರ ದಾಖಲಾತಿ ಸರಿ ಇರುವವರಿಗೆ ಅವಕಾಶ ಮಾಡಿಕೊಡಬೇಕು, ಸರ್ಕಾರದ ನಿಯಮದಂತೆ ಅವರ ವಾಹನಗಳಲ್ಲಿ ಎಷ್ಟು ಜನರನ್ನು ಕರೆದೊಯ್ಯಬೇಕು ಅದರ ನಿಯಮವನ್ನು ಪಾಲಿಸಲು ಅವರಿಗೆ ಸೂಚನೆ ನೀಡಿ ಅವಕಾಶ ಕಲ್ಪಿಸಿಕೊಡಲು ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಮಲೆ ಮಾದೇಶ್ವರ ಬೆಟ್ಟದ ಮುಖಂಡರು ಸರ್ಕಾರದ ನಿಯಮದಂತೆ ನಮ್ಮ ವಾಹನಗಳಲ್ಲಿ ಎಷ್ಟು ಜನರನ್ನು ಕರೆದೊಯ್ಯಬೇಕು ಅಷ್ಟೇ ಜನರನ್ನು ಕರೆದುಕೊಂಡು ಹೋಗುತ್ತೇವೆ. ಭಕ್ತಾದಿಗಳಿಗೆ ಯಾವುದೇ ತೊಂದರೆ ಕೊಡುವುದಿಲ್ಲ ನಮ್ಮ ಜೀವನಕ್ಕೆ ನೀವೇ ದಾರಿದೀಪವಾಗಬೇಕು ಎಂದು ಮನವಿ ಮಾಡಿದರು.ಭೇಟಿಯ ವೇಳೆ ಕಾಂಗ್ರೆಸ್ ಮುಖಂಡರಾದ ತಲಕಾಡು ಶಿವಕುಮಾರ್, ಇಂಡಿಗನತ್ತ ವೀರಣ್ಣ, ಹುಚ್ಚಪ್ಪ, ಪಡಸಲನತ್ತ ರವಿ, ಮಲೆ ಮಹದೇಶ್ವರ ಬೆಟ್ಟದ ವೀರಸ್ವಾಮಿ, ಶಿವಣ್ಣ ಹಾಗೂ 50ಕ್ಕೂ ಹೆಚ್ಚು ಚಾಲಕರು ಹಾಜರಿದ್ದರು.