ಸಾರಾಂಶ
ಹುಬ್ಬಳ್ಳಿ:
ಮಂಗಳವಾರ ರಾತ್ರಿ ಹಾಗೂ ಬುಧವಾರ ಸಂಜೆ ಸುರಿದ ರಭಸದ ಮಳೆಯಿಂದಾಗಿ ನಗರದ ಜನತೆ ತತ್ತರಿಸುವಂತಾಯಿತು. ಧಾರಾಕಾರದ ಮಳೆಗೆ ಹಲವು ಕಡೆಗಳಲ್ಲಿ ಚರಂಡಿ ಬಂದಾದವು. ನವನಗರದ 14ನೇ ಕ್ರಾಸ್‌ನಲ್ಲಿ ಮರವೊಂದು ಧರೆಗುರುಳಿ ಸಂಚಾರಕ್ಕೆ ತೊಂದರೆಯನ್ನುಂಟು ಮಾಡಿತು.ಕೆಲವು ದಿನ ಬಿಡುವು ನೀಡಿದ್ದ ವರುಣ ಮಂಗಳವಾರ ರಾತ್ರಿಯಿಡೀ ಧಾರಾಕಾರ ಮಳೆ ಸುರಿದು ಹಲವೆಡೆ ಅವಾಂತರ ಸೃಷ್ಟಿಸಿತು. ಇಲ್ಲಿನ ಸರ್ವೋದಯ ವೃತ್ತ, ಕೇಶ್ವಾಪುರ ಭಾಗ, ಗೋಪನಕೊಪ್ಪ, ಕೊಪ್ಪಿಕರ ರಸ್ತೆ, ಶಹಾ ಬಜಾರ, ಜನತಾ ಬಜಾರ, ಹಳೇ ಹುಬ್ಬಳ್ಳಿ, ವಿದ್ಯಾನಗರ, ಕಮರಿಪೇಟೆ, ಹಿರೇಪೇಟೆ, ಭೂಸಪೇಟೆ ಸೇರಿದಂತೆ ಮಾರುಕಟ್ಟೆ ಪ್ರದೇಶಗಳಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಯಿಂದಾಗಿ ರಸ್ತೆಗಳೆಲ್ಲ ಕೆಸರುಗದ್ದೆಯಾಗಿ ಮಾರ್ಪಟ್ಟಿದ್ದವು. ಬುಧವಾರ ಬೆಳಗ್ಗೆ ವ್ಯಾಪಾರಸ್ಥರು ತಮ್ಮ ಅಂಗಡಿ, ಮುಂಗಟ್ಟುಗಳ ಮುಂದೆ ಸಂಗ್ರಹಗೊಂಡಿದ್ದ ತ್ಯಾಜ್ಯ ಸಾಗಿಸಲು ಹರಸಾಹಸ ಪಟ್ಟರು. ಇನ್ನೇನು ರಸ್ತೆಯ ಮೇಲಿನ ಎಲ್ಲ ತ್ಯಾಜ್ಯ ಹೊರಹಾಕಿ ವ್ಯಾಪಾರ ಅರಂಭಿಸಬೇಕು ಎನ್ನುವಷ್ಟರಲ್ಲಿ ಮತ್ತೆ ಆರಂಭವಾದ ರಭಸದ ಮಳೆಗೆ ಜನಜೀವನವೇ ತತ್ತರಿಸಿತು. ಮಳೆಯಿಂದಾಗಿ ತೊಂದರೆಗೀಡಾದ ಪ್ರದೇಶಗಳಿಗೆ ಹು-ಧಾ ಮಹಾನಗರ ಪಾಲಿಕೆಯ ಮಳೆ ವಿಪತ್ತು ನಿರ್ವಹಣಾ ತಂಡವು ತೆರಳಿ ಮಳೆಯಲ್ಲಿಯೇ ಕಾರ್ಯಾಚರಣೆ ನಡೆಸಿ ಬಂದಾಗಿರುವ ಚರಂಡಿ ತೆರವುಗೊಳಿಸಿ ಮಳೆಯ ನೀರು ಸರಾಗವಾಗಿ ಹರಿಯುವಂತೆ ಮಾಡಿದರು. ಅಲ್ಲದೇ ನವನಗರದ 14ನೇ ಕ್ರಾಸ್‌ನಲ್ಲಿ ಮಳೆಯಿಂದಾಗಿ ಧರೆಗುರುಳಿದ್ದ ಮರವನ್ನು ಮಳೆಯಲ್ಲಿಯೇ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಕೈಕೊಟ್ಟ ಬಿಆರ್‌ಟಿಎಸ್:ಧಾರಾಕಾರ ಮಳೆ ಸುರಿಯುತ್ತಿರುವ ವೇಳೆಗೆ ಸಂಚರಿಸುತ್ತಿದ್ದ ಬಿಆರ್‌ಟಿಎಸ್ ಬಸ್ ನಡುರಸ್ತೆಯಲ್ಲಿಯೇ ಬಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು. ಹುಬ್ಬಳ್ಳಿಯಿಂದ ಧಾರವಾಡದ ಕಡೆಗೆ ತೆರಳುತ್ತಿದ್ದ ಚಿಗರಿ ಬಸ್ ಉಣಕಲ್ಲ ಹತ್ತಿರ ಬಂದಾಯಿತು. ಬೇರೆ ದಾರಿಯಿಲ್ಲದೇ ಪ್ರಯಾಣಿಕರು ಸುರಿಯುತ್ತಿದ್ದ ಮಳೆಯಲ್ಲಿಯೇ ನಿಂತು ಮತ್ತೊಂದು ಚಿಗರಿ ವಾಹನ ಹತ್ತಿ ಪ್ರಯಾಣ ಮುಂದುವರಿಸಿದರು. ಅಲ್ಲದೇ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ಸೇರಿದಂತೆ ಹಲವೆಡೆ ಬಿಆರ್‌ಟಿಎಸ್ ಬಸ್ ನಿಲ್ದಾಣದಲ್ಲಿಯೇ ಮಳೆನೀರು ನಿಂತು ಸವಾರರು ತೊಂದರೆ ಅನುಭವಿಸಿದರು.