ಹುಬ್ಬಳ್ಳಿ ಗಲಭೆ: ಸರ್ಕಾರದ ನಿರ್ಧಾರ ಸರಿಯಾಗಿಯೇ ಇದೆ

| Published : Oct 16 2024, 12:33 AM IST / Updated: Oct 16 2024, 12:34 AM IST

ಹುಬ್ಬಳ್ಳಿ ಗಲಭೆ: ಸರ್ಕಾರದ ನಿರ್ಧಾರ ಸರಿಯಾಗಿಯೇ ಇದೆ
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿ ಗಲಭೆ ಇರಲಿ, ಮುಡಾ ಇರಲಿ, ಯಾವುದೇ ಪ್ರಕರಣವಿರಲಿ ಅಥವಾ ಯಾವುದೇ ಪಕ್ಷ ಎನ್ನುವುದು ಬೇರೆ. ಮೊದಲು ದೇಶದಲ್ಲಿ ಕಾನೂನು ಗೆಲ್ಲಬೇಕು. ಅದಕ್ಕೆ ಅವಕಾಶ ಕೊಡಬೇಕು ಹಾಗೂ ಅವಕಾಶ ತೆಗೆದುಕೊಳ್ಳಬೇಕು.

ಧಾರವಾಡ:

ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆಯುತ್ತಿರುವ ಸರ್ಕಾರದ ನಿರ್ಧಾರ ಸರಿಯಾಗಿಯೇ ಇದೆ. ಬಿಜೆಪಿಯವರು ಬೇಕಾದರೆ ಪ್ರತಿಭಟನೆ ಮಾಡಿಕೊಳ್ಳಲಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರವಾಗಿ ಬಿಜೆಪಿಯವರು ಪ್ರತಿಭಟನೆ ಮಾಡಲಿ. ಬೇಡ ಎಂದವರಾರು? ದೇಶದಲ್ಲಿ ಕಾನೂನು, ಸಂವಿಧಾನವಿದೆ. ಕಾನೂನು ರಕ್ಷಣೆ ಪಡೆಯುವ ಅಧಿಕಾರ ಎಲ್ಲರಿಗೂ ಇದೆ. ಹುಬ್ಬಳ್ಳಿ ಗಲಭೆ ಇರಲಿ, ಮುಡಾ ಇರಲಿ, ಯಾವುದೇ ಪ್ರಕರಣವಿರಲಿ ಅಥವಾ ಯಾವುದೇ ಪಕ್ಷ ಎನ್ನುವುದು ಬೇರೆ. ಮೊದಲು ದೇಶದಲ್ಲಿ ಕಾನೂನು ಗೆಲ್ಲಬೇಕು. ಅದಕ್ಕೆ ಅವಕಾಶ ಕೊಡಬೇಕು ಹಾಗೂ ಅವಕಾಶ ತೆಗೆದುಕೊಳ್ಳಬೇಕು. ಎಷ್ಟೋ ಕೇಸ್‌ಗಳಲ್ಲಿ ಅಮಾಯಕರನ್ನು ಒಳಗೆ ಹಾಕಲಾಗಿತ್ತು. ಮನೆ ಹುಡುಕಿಕೊಂಡು ಬಂದು ಕೇಸ್ ಹಾಕಿರುವ ಉದಾಹರಣೆ ಕೂಡ ಇದೆ ಎಂದರು.

ಮುಡಾ ವಿಚಾರವಾಗಿ ಬಿಜೆಪಿಯವರು ಪಾದಯಾತ್ರೆ ಮಾಡಿದರು. ಇದೇ ಬಿಜೆಪಿಯವರ ಮೇಲೆ ಎಷ್ಟು ಪ್ರಕರಣಗಳು ಇವೇ ನೋಡಿಕೊಳ್ಳಲಿ. ಕೇಂದ್ರ ಸಚಿವರ ಮೇಲೆ ಶೇ. 39ರಷ್ಟು ಕೇಸ್‌ಗಳಿವೆ. ಅವರನ್ನು ಬಂಧಿಸಬೇಕಿತ್ತು. ಅವರಿಂದ ರಾಜೀನಾಮೆ ಕೇಳಬೇಕಿತ್ತು? ಯಾರು ಮುಡಾ ವಿಚಾರವಾಗಿ ಪಾದಯಾತ್ರೆ ಮಾಡಿದರೊ ಅವರು ತಮ್ಮ ಚುನಾವಣಾ ಅಫಿಡವಿಟ್ ತೆರೆದು ನೋಡಿಕೊಳ್ಳಲಿ ಎಂದು ಬಿಜೆಪಿ ಮುಖಂಡರಿಗೆ ಟಾಂಗ್‌ ನೀಡಿದರು.

ಬಿಜೆಪಿಯವರು ಖುಷಿ ಪಡಬೇಕಿತ್ತು..

ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಟ್ರಸ್ಟ್‌ ಅವರು ನಿವೇಶನ ವಾಪಸ್ ಕೊಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸೈಟ್ ವಾಪಸ್ ಕೊಟ್ಟಿದ್ದಾರೆ ಎಂದರೆ ಅದು ಅವರ ದೊಡ್ಡ ಗುಣ. ಅದಕ್ಕೆ ಬಿಜೆಪಿಯವರು ಖುಷಿಯಾಗಬೇಕು. ಅದಕ್ಯಾಕೆ ರಾಜೀನಾಮೆ ಕೇಳಬೇಕು? ಎಂದು ಪ್ರಶ್ನಿಸಿದರು.

ಅತಿಥಿ ಶಿಕ್ಷಕರು ಹಾಗೂ ಅಡುಗೆ ಸಹಾಯಕರ ವೇತನ ಹೆಚ್ಚಳ ಮಾಡಬೇಕಿದೆ. ಈ ಕುರಿತು ಮುಖ್ಯಮಂತ್ರಿಗಳ ಜತೆ ಮಾತನಾಡಿದ್ದೇನೆ. ಶಿಕ್ಷಕರು ಶ್ರಮಪಟ್ಟು ಕೆಲಸ ಮಾಡುತ್ತಾರೆ. ಅವರ ವೇತನ ಹೆಚ್ಚಳ ಮಾಡಲು ಕ್ರಮಕೈಗೊಳ್ಳುತ್ತೇವೆ ಎಂದ ಅವರು, ಮುಂಬರುವ ಉಪಚುನಾವಣೆಯಲ್ಲಿ ಹೈಕಮಾಂಡ್ ಒಳ್ಳೆಯ ತೀರ್ಮಾನ ತೆಗೆದುಕೊಳ್ಳುತ್ತದೆ. ನಾವು ಹೋಗಿ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇವೆ ಎಂದರು.