ಕಳೆದ ನಾಲ್ಕು ದಶಕದಿಂದ ಮಹಾನಗರದಲ್ಲಿ ಮನೆ, ಖಾಲಿ ಜಾಗ ಇಲ್ಲದೇ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನಿವೇಶನ ಒದಗಿಸುವ ನಗರಾಭಿವೃದ್ಧಿ ಪ್ರಾಧಿಕಾರವು ಇದೀಗ ಜನರ ಹಿತ ಮರೆತಿದೆ.

ಹುಬ್ಬಳ್ಳಿ:

ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ಹಿಂದುಳಿದವರಿಗೆ ಸೂರು ಕಲ್ಪಿಸುವ ತನ್ನ ಮೂಲ ಉದ್ದೇಶ ಕೈಬಿಟ್ಟು ಬೇರೆಲ್ಲ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ ನಿವೇಶನ ರಹಿತರ ಆಂದೋಲನ ಸಂಘಟನೆ, ವಸತಿ ರಹಿತರಿಗೆ ನಿವೇಶನ ಒದಗಿಸಬೇಕೆಂದು ಮಂಗಳವಾರ ಹುಡಾ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ಕಳೆದ ನಾಲ್ಕು ದಶಕದಿಂದ ಮಹಾನಗರದಲ್ಲಿ ಮನೆ, ಖಾಲಿ ಜಾಗ ಇಲ್ಲದೇ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನಿವೇಶನ ಒದಗಿಸುವ ನಗರಾಭಿವೃದ್ಧಿ ಪ್ರಾಧಿಕಾರವು ಇದೀಗ ಜನರ ಹಿತ ಮರೆತಿದೆ. ಸತತ ಹೋರಾಟ ನಡೆಸುತ್ತ ಬಂದಿದ್ದರೂ ಅವಳಿನಗರದ ಸರ್ಕಾರಿ ಜಾಗ ಗುರುತಿಸಿ ಬಡವರಿಗೆ ನಿವೇಶನ ನೀಡುತ್ತಿಲ್ಲವೆಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಆಂದೋಲನ ಸಂಚಾಲಕ ನಾಗರಾಜ ಗುರಿಕಾರ ಆರೋಪಿಸಿದರು.

ಬಡವರು, ಆರ್ಥಿಕ ಹಿಂದುಳಿದವರಿಗೆ ಮನೆ, ನಿವೇಶನ ಕೊಡಲು ಆಗದಿದ್ದರೆ ಪ್ರಾಧಿಕಾರ ಯಾತಕ್ಕಾಗಿ ಇದೆ? ಸರ್ಕಾರಿ ಕಚೇರಿಯ ಉದ್ದೇಶವಾದರೂ ಏನು? ಎಂದು ಪ್ರಶ್ನಿಸಿದರು. ಪ್ರಾಧಿಕಾರವು ಇತ್ತೀಚೆಗೆ ಅವಳಿನಗರ ಸುತ್ತಲಿನ 46 ಹಳ್ಳಿಗಳನ್ನು ಹುಡಾ ವ್ಯಾಪ್ತಿಗೆ ಸೇರಿಸಿಕೊಂಡಿದೆ. ಈ ಹಳ್ಳಿಗಳಲ್ಲಿ ಸರ್ಕಾರಿ ಭೂಮಿಗಳಿವೆ. ಅವುಗಳನ್ನು ಗುರುತಿಸಿ, ಆರ್ಥಿಕ ಹಿಂದುಳಿದವರಿಗಾಗಿ ಜಾಗ ಮೀಸಲಿಡಬೇಕು. ಅದರಲ್ಲಿ ಲೇಔಟ್​ ನಿರ್ಮಿಸಿ ಹಂಚಿಕೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಹುಡಾ ಅಧ್ಯಕ್ಷ ಶಾಕೀರ್​ ಸನದಿ ಬಡವರ ಬಗ್ಗೆ ಕಾಳಜಿ ಉಳ್ಳವರು. ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಹಿಂದುಳಿದವರಿಗಾಗಿ ವಸತಿ ಯೋಜನೆ ಜಾರಿ ಮಾಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಈಗ ವಸತಿ ರಹಿತರು ಮನವಿ ಮಾಡುತ್ತಿದ್ದು, ಕೂಡಲೇ ಯೋಜನೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆ ಬಳಿಕ ಶಾಕೀರ್​ ಸನದಿ ಅವರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಬಸವರಾಜ ಕಿತ್ತೂರ, ರಾಜು ಹಿರೇವಡಿಯರ, ನಾಗರಾಜ ನಾಡಕರ್ಣಿ, ಕಿರಣಸಿಂಗ್​ ರಜಪೂತ, ಮಹಾದೇವಿ ಉಮಚಗಿ, ಬಿಬಿಜಾನ್​ ಮುಲ್ಲಾ ಸೇರಿದಂತೆ ಹಲವರಿದ್ದರು.