ಸರ್ಕಾರಿ ಶಾಲಾ ಕಟ್ಟಡಗಳ ಸುಧಾರಣೆಗೆ ಇದೀಗ ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರವೂ (ಹುಡಾ) ಮುಂದಾಗಿದೆ.

ಹುಬ್ಬಳ್ಳಿ:

ಸರ್ಕಾರಿ ಶಾಲಾ ಕಟ್ಟಡಗಳ ಸುಧಾರಣೆಗೆ ಇದೀಗ ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರವೂ (ಹುಡಾ) ಮುಂದಾಗಿದೆ.

ಈ ಮೂಲಕ ನಗರಾಭಿವೃದ್ಧಿ ಮೂಲಕ ಶಾಲಾಭಿವೃದ್ಧಿ ಯೋಜನೆಯನ್ನು ಪರಿಚಯಿಸುತ್ತಿದೆ. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದು ಹಸಿರು ನಿಶಾನೆ ಸಿಕ್ಕರೆ ಯೊಜನೆ ಅನುಷ್ಠಾನಗೊಳ್ಳಲಿದೆ. ದುರಸ್ತಿ ಕಾಣದ ಶಾಲಾ ಕಟ್ಟಡ, ಮಾಸಿರುವ ಗೋಡೆಗಳು, ಕಾಂಪೌಂಡ್‌ ಇಲ್ಲದೆ ಪುಂಡ ಪೋಕರ ಹಾವಳಿ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿರುವ ಸರ್ಕಾರಿ ಶಾಲೆಗಳ ಪಟ್ಟಿ ಸಿದ್ಧಪಡಿಸಿ ಅಭಿವೃದ್ಧಿ ಪಡಿಸಬೇಕೆಂಬುದು ಹುಡಾ ಅಭಿಲಾಷೆ.

ಇದಕ್ಕಾಗಿ ನಗರಾಭಿವೃದ್ಧಿ ಪ್ರಾಧಿಕಾರವು ಹೊಸ ಯೋಜನೆಯೊಂದನ್ನು ರೂಪಿಸಿದೆ. ಶಾಲೆಗಳನ್ನು ದುರಸ್ತಿ ಮಾಡಿ ಮಕ್ಕಳು ಸುಂದರ ವಾತಾವರಣದಲ್ಲಿ ಸುರಕ್ಷಿತವಾಗಿ ಪಾಠ ಕಲಿಯಬೇಕೆಂಬ ಆಶಯದೊಂದಿಗೆ ಒಂದಿಷ್ಟು ಹಣ ಖರ್ಚು ಮಾಡಲು ತಯಾರಿ ಮಾಡಿಕೊಂಡಿದೆ. ನಗರಾಭಿವೃದ್ಧಿ ಪ್ರಾಧಿಕಾರವೂ ಇತ್ತೀಚಿಗೆ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಶಾಕೀರ್ ಸನದಿ ಅವರು ವಿಷಯ ಪ್ರಸ್ತಾಪಿಸಿ ಸದಸ್ಯರಿಂದ ಒಪ್ಪಿಗೆ ಪಡೆದುಕೊಂಡಿದ್ದಾರೆ.

ಪ್ರಾಧಿಕಾರದ ಸಹಾಯ ಹಸ್ತ ಏಕೆ?:

ಹಾಗಂತ ಸರ್ಕಾರಿ ಶಾಲೆಗಳಿಗೆ ಅನುದಾನವನ್ನೂ ನೀಡುತ್ತದೆ. ಆದರೂ ಎಲ್ಲ ಶಾಲೆಗಳ ಅಭಿವೃದ್ಧಿಗೆ ಅನುದಾನ ಸಾಕಾಗುವುದಿಲ್ಲ. ಕಟ್ಟಡಗಳಿಗೆ ಅನುದಾನ ಕೊರತೆಯಾಗುತ್ತದೆ ಎಂದು ಅನೇಕ ಶಾಲೆಗಳು ದಾನಿಗಳು, ಶಾಸಕರ ನಿಧಿ ಬಳಕೆ ಮಾಡುತ್ತಾರೆ. ಕೆಲವು ಕಂಪನಿಗಳು ಸಿಎಸ್ಆರ್ ನಿಧಿ ಬಳಸಿ ಕೆಲವು ಶಾಲೆಗಳಿಗೆ ಸುಣ್ಣ-ಬಣ್ಣ ಬಳಿದಿವೆ. ಇದರ ಮಧ್ಯೆ ಹುಡಾ ವತಿಯಿಂದ ಸರ್ಕಾರಿ ಶಾಲೆಗಳ ಕಟ್ಟಡ ಅಭಿವೃದ್ಧಿ ಶುಲ್ಕವು ಬಹಳಷ್ಟು ಅನುಕೂಲವಾಗಲಿದೆ ಎಂಬ ನಿರೀಕ್ಷೆ ಇದೆ.

ಹೇಗೆ ಶಾಲಾಭಿವೃದ್ಧಿ:

ನಗರಾಭಿವೃದ್ಧಿ ಪ್ರಾಧಿಕಾರವು ಹೊಸ ಲೇಔಟ್ ಸೇರಿದಂತೆ ಅಭಿವೃದ್ಧಿ ಕೆಲಸಗಳಿಗೆ ವಿವಿಧ ರೀತಿಯ ಸೆಸ್ ಸಂಗ್ರಹಿಸುತ್ತದೆ. ಕೆರೆ, ಗಾರ್ಡನ್ ಅಭಿವೃದ್ಧಿ ಹೀಗೆ ತರಹೇವಾರಿ ಸೆಸ್‌ ನಿಗದಿಪಡಿಸಿದೆ. ಇದೇ ಮಾದರಿಯಲ್ಲಿ ಸರ್ಕಾರಿ ಶಾಲೆ ಅಭಿವೃದ್ಧಿ ಸೆಸ್ ಎಂದು ಹೊಸದಾಗಿ ಸೇರಿಸಿ ಅದರಿಂದ ಸಂಗ್ರಹವಾಗುವ ಹಣದಿಂದ ಪ್ರತಿ ವರ್ಷ ಶಾಲೆಗಳ ಅಭಿವೃದ್ಧಿಪಡಿಸುವುದು ಇದರ ಉದ್ದೇಶವಾಗಿದೆ. ಈ ಬಗ್ಗೆ ಸಭೆಯಲ್ಲಿ ಗಂಭೀರವಾಗಿ ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ. ಸರ್ಕಾರದಿಂದ ಅನುಮೋದನೆ ಸಿಕ್ಕರೆ ಪ್ರಾಧಿಕಾರದಿಂದ ಹೊಸ ಯೋಜನೆ ಜಾರಿಯಾಗಲಿದೆ.

ಒಟ್ಟಿನಲ್ಲಿ ನಗರಾಭಿವೃದ್ಧಿಯಿಂದ ಶಾಲಾಭಿವೃದ್ಧಿ ಮಾಡಲು ಹೊರಟಿರುವುದಕ್ಕೆ ಶಾಸಕರು ಸೇರಿದಂತೆ ಹುಡಾ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಒಪ್ಪಿಗೆ ಸೂಚಿಸಿದ್ದಾರೆ. ಇದು ಸಾರ್ವಜನಿಕ ವಲಯದಲ್ಲೂ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ, ಅನುಷ್ಠಾನ ಶೀಘ್ರವಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಜತೆಗೆ ಈ ಅನುದಾನವೂ ಸೋರಿಕೆಯಾಗದೇ ಶಾಲಾಭಿವೃದ್ಧಿಗೆ ಒತ್ತು ನೀಡಬೇಕು ಎಂಬುದು ಸಾರ್ವಜನಿಕರ ಆಗ್ರಹ.ನಗರಾಭಿವೃದ್ಧಿ ಜತೆ-ಜತೆಗೆ ಶಾಲಾಭಿವೃದ್ಧಿ ಮಾಡಬೇಕೆನ್ನುವುದು ಹುಡಾದ ಉದ್ದೇಶ. ಈ ನಿಟ್ಟಿನಲ್ಲಿ ಇತ್ತೀಚಿಗೆ ನಡೆದ ಸಭೆಯಲ್ಲಿ ಸದಸ್ಯರೆಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ. ಇದೀಗ ಸರ್ಕಾರಕ್ಕೆ ಅನುಮೋದನೆಗೆ ಕಳುಹಿಸಲಾಗುತ್ತದೆ. ಅಲ್ಲಿಂದ ಒಪ್ಪಿಗೆ ಸಿಕ್ಕರೆ ಶಾಲೆಗಳಿಗೆ ಹೊಸ ರೂಪ ಕೊಟ್ಟಂತಾಗುತ್ತದೆ.

ಶಾಕೀರ ಸನದಿ, ಹುಡಾ ಅಧ್ಯಕ್ಷ