ಕನ್ನಡಪ್ರಭ ವಾರ್ತೆ ನಾಗಮಂಗಲ

ಕೃತಕ ಬುದ್ಧಿಮತ್ತೆ (ಎಐ)ಯ ರೋಬೋಟ್‌ಗಳು ಇದೇ ರೀತಿ ಸಾಗಿದರೆ ಮುಂದೆ ಮಾನವ ಶಕ್ತಿಗೆ ಭಾರೀ ಹೊಡೆತ ಬೀಳುತ್ತದೆ. ಆದ್ದರಿಂದ ಮೂಲ ಜ್ಞಾನಕ್ಕೆ ಪ್ರಾಧಾನ್ಯತೆ ನೀಡಿ ಮಾನವ ಶಕ್ತಿಯನ್ನು ಹೆಚ್ಚಿಸಬೇಕಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಬಿಜಿಎಸ್ ಸಭಾಂಗಣದಲ್ಲಿ ಡಾ.ನಿರ್ಮಲಾನಂದನಾಥ ಶ್ರೀಗಳ 13ನೇ ರ್ವಾಕ ಪಟ್ಟಾಭಿಷೇಕ ಮಹೋತ್ಸವದ ಪ್ರಯುಕ್ತ ಗುರುವಾರ ಆಯೋಜಿಸಿದ್ದ ವಿಜ್ಞಾತಂ ಉತ್ಸವ, ವಸ್ತು ಪ್ರದರ್ಶನ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮ ಸಾನಿಧ್ಯ ವಹಿಸಿ, ಆರ್ಶೀಚನ ನೀಡಿದ ಶ್ರೀಗಳು, ಅಂತರಂಗದ ಅರಿವು ಮತ್ತು ಬಾಹ್ಯದ ಬೆಳಕು ಒಂದಾದ ಘಳಿಗೆಯು ವಿದ್ಯಾರ್ಥಿಗಳ ಬದುಕನ್ನು ಹಸನ ಮಾಡುತ್ತದೆ ಎಂದರು.

ಝೆನ್ ಝೀ, ಝೆನ್ ಅಲ್ಫಾ, ಝೆನ್ ಬೀಟಾ ಹಾಗೂ ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನಗಳೇ ಇಲ್ಲದ ದಿನಮಾನಗಳಲ್ಲಿ ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳು ಜಾನಪದ ಉತ್ಸವ ಆಯೋಜಿಸಿದ್ದರು. ಆದರೆ, ಈಗ ಬದಲಾದ ಕಾಲಘಟ್ಟದಲ್ಲಿ ಜ್ಞಾನದ ಜೊತೆಗೆ ವಿಜ್ಞಾನ-ತಂತ್ರಜ್ಞಾನಗಳು ಜಗತ್ತನ್ನಾಳುತ್ತಿವೆ. ಭೈರವೈಕ್ಯ ಶ್ರೀಗಳ ಆಶಯದಂತೆ ಈಗ ಅದು ವಿಜ್ಞಾತಂ ಉತ್ಸವವಾಗಿ ರೂಪುಗೊಂಡಿದೆ ಎಂದರು.

ಬೇರನ್ನು ಮರೆತರೆ ಕಂಡಕ್ಕೆ ಅಸ್ತಿತ್ವವಿಲ್ಲ. ಕಂಡವಿರದ ಕೊಂಬೆಗೆ ಉಳಿವಿಲ್ಲ. ಇವೆರಡೂ ಇರದ ಮರಕ್ಕೆ ಎಲೆ,ಹೂವು-ಹಣ್ಣು ಸಾಧ್ಯವಿಲ್ಲ. ಹಾಗೆಯೇ ಜ್ಞಾನ-ತಂತ್ರಜ್ಞಾನ ಧರ್ಮ ಆಧ್ಯಾತ್ಮ ಇವುಗಳಿಗೆ ಅವಿನಾಭಾವ ಸಂಬಂಧವಿದೆ. ಈ ಜ್ಞಾನ-ವಿಜ್ಞಾನ ತಂತ್ರಜ್ಞಾನ ಉತ್ಸವದಲ್ಲಿ ಪಾಲ್ಗೊಂಡಿರುವ 200ಕ್ಕೂ ಹೆಚ್ಚು ವಸ್ತು ಪ್ರದರ್ಶನದಲ್ಲಿ ಕನಿಷ್ಠ 20 ಆದರೂ ಸ್ಟಾರ್ಟ್ ಅಪ್ ಆಗಿ ಬೆಳವಣಿಗೆ ಹೊಂದಿದರೆ ಮುಂದೆ ನೂತನ ಆವಿಷ್ಕಾರಕ್ಕೆ ಮೊದಲಾಗುತ್ತದೆ ಎಂದರು.


ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ಆದಿಚುಂಚನಗಿರಿ ಕ್ಷೇತ್ರವು ಧಾರ್ಮಿಕ ನಾಯಕತ್ವದೊಂದಿಗೆ ವಿಶಿಷ್ಟ ಸಂಕಲ್ಪ ಶಕ್ತಿಯಾಗಿ ನಾಡಿಗೆ ಹೊಸ ಆಲೋಚನೆ ಬಿತ್ತಿ ಲಕ್ಷಾಂತರ ಜನರ ಮನಸ್ಸಿನಲ್ಲಿ ಆಧ್ಯಾತ್ಮ ಶಕ್ತಿಯೊಂದಿಗೆ ಜ್ಞಾನ ದಾಸೋಹ ನೀಡುತ್ತಿದೆ ಎಂದರು.

ಭೈರವೈಕ್ಯ ಶ್ರೀಗಳು ರೈತ ಸಮುದಾಯಕ್ಕೆ ಬಹುದೊಡ್ಡ ಶಕ್ತಿಯಾಗಿ ನಿಂತಿದ್ದರು. ದೀರ್ಘ ಹಸಿವಿನ ಕಾಲದಲ್ಲಿ ಅನ್ನ ಹಾಕಿ ಶಿಕ್ಷಣ ಸಂಸ್ಥೆಗಳು ಮತ್ತು ಹಾಸ್ಟೆಲ್‌ಗಳನ್ನು ಸ್ಥಾಪಿಸಿ ಸುವರ್ಣ ಮಾರ್ಗವನ್ನು ತೋರಿದ ಮಹಾನ್ ಜ್ಞಾನಿ. ಭಕ್ತಿ ಮಾರ್ಗದಲ್ಲಿ ವಿಜ್ಞಾನದ ಹಾದಿಯನ್ನು ತೋರಿದ ಯತಿವರ್ಯರಾಗಿ ಅಂತರ್ಟ್ರೋಯ ಮಟ್ಟದಲ್ಲಿ ರಾಜಮಾನರಾಗಿದ್ದಾರೆ ಎಂದರು.

ಮೂಲ ಜ್ಞಾನವನ್ನು ಮರೆತವರು ವಿಜ್ಞಾನಿಗಳಾಗಿ ಸಂಶೋಧನೆ ಮಾಡಲು ಸಾಧ್ಯವಿಲ್ಲ ಎಂದು ಪರಿಭಾವಿಸಿ ಮೂಲ ವಿಜ್ಞಾನಕ್ಕೆ ಹೆಚ್ಚು ಮಹತ್ವ ಕೊಟ್ಟು ಇಂದು ಇಂತಹ ಮಹಾನ್ ವಿಜ್ಞಾನೋತ್ಸವಕ್ಕೆ ಸಂಕಲ್ಪ ಶಕ್ತಿಯಾಗಿದ್ದಾರೆ. ಧರ್ಮ ಮತ್ತು ಜ್ಞಾನ ಕಟ್ಟುವ ಕೆಲಸವಾಗಬೇಕು. ಯುವಕರು ಜಗತ್ತನ್ನು ಉತ್ತಮತೆಗೆ ಕೊಂಡೊಯ್ಯಲು ಬೇಕಾದ ವೈಜ್ಞಾನಿಕ ಸಂಶೋಧನೆಗಳಲ್ಲಿ ಪ್ರಯತ್ನಿಸಿ ಸಫಲರಾಗಬೇಕು ಎಂದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಆದಿಚುಂಚನಗಿರಿ ಕ್ಷೇತ್ರವು ಸನಾತನ ಧರ್ಮ ಪೀಠ, ಆಸ್ತಿಕರ ಪವಿತ್ರ ನೆಲ. ಜ್ಞಾನ ಕಾಶಿ, ಶಿಕ್ಷಣಧಾಮ, ಸಾಂತ್ವನ ಕೇಂದ್ರ, ನಿತ್ಯ ಸಮಾಜಮುಖಿ ಕಾರ್ಯಗಳನ್ನು ಆಯೋಜಿಸುತ್ತಾ ನಾಡಿನ ಜನತೆಗೆ ಹಿತ ಬಯಸುತ್ತಿರುವ ಶಕ್ತಿ ಕೇಂದ್ರವಾಗಿದೆ ಎಂದರು.

ಭೈರವೈಕ್ಯಶ್ರೀಗಳಿಂದ ಆಧ್ಯಾತ್ಮಿಕ ಸೇವಾ ದೀಕ್ಷೆಯನ್ನು ಪಡೆದು 13 ವರ್ಷಗಳ ಸಾರ್ಥಕ ಹಾದಿಯಲ್ಲಿ ಸಾಗುತ್ತಿರುವ ನಿರ್ಮಲಾನಂದನಾಥ ಶ್ರೀಗಳು ಸಮಾಜದ ಆಸ್ತಿಯಾಗಿದ್ದಾರೆ. ಶ್ರೀಮಠದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಜೊತೆಗೆ ವಿವಿಧ ಕ್ಷೇತ್ರಗಳ ಕಾಳಜಿಯೊಂದಿಗೆ ಮುನ್ನಡೆಯುತ್ತಿದ್ದಾರೆ ಎಂದು ಶ್ಲಾಘಿಸಿದರು.

180ಕ್ಕೂ ಹೆಚ್ಚು ವಿಜ್ಞಾನ ವಸ್ತು ಪ್ರದರ್ಶನಗಳನ್ನು ಆಯೋಜಿಸಲು ಅಪಾರಜ್ಞಾನ ಹಾಗೂ ಪರಿಣತಿಯೇ ಬಹುದೊಡ್ಡ ಸಂಪತ್ತು. ಈ ಮಠದ ಸಂಪರ್ಕದಲ್ಲಿರುವ ನಾವೆಲ್ಲ ಧನ್ಯರು. ಸನಾತನ ಸಂಸ್ಕೃತಿಯನ್ನು ಮುಂದುವರಿದ ಭಾಗವಾಗಿ ಮಾನವ ಜೀವನಕ್ಕೆವಿಜ್ಞಾನವೂ ಅವಿಭಾಜ್ಯ ಅಂಗವಾಗಿದೆ ಎಂದರು.

ಆದಿಚುಂಚನಗಿರಿ ಉನ್ನತ ಶಿಕ್ಷಣ ಟ್ರಸ್ಟ್‌ನ ಸಿಇಒ ಡಾ.ಎನ್.ಎಸ್.ರಾಮೇಗೌಡ ಪ್ರಾಸ್ತಾವಿಕ ನುಡಿಗಳಾಡಿದರು. ವಿಜ್ಞಾತಂ ವಸ್ತು ಪ್ರದರ್ಶನ ಉದ್ಘಾಟಿಸಿದ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ವಿಜ್ಞಾನಿ ಡಾ.ಕೆ.ಮುನಿಯಪ್ಪ, ಮಾಜಿ ಶಾಸಕ ಸುರೇಶ್‌ಗೌಡ, ರಕ್ಷಣೆ ಮತ್ತು ಏರೋ ಸ್ಪೇಸ್ ವಿಶ್ಲೇಷಕ ಗಿರೀಶ್ ಲಿಂಗಣ್ಣ ಮಾತನಾಡಿದರು.

ವಿಜ್ಞಾತಂ ಉತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಲು ಆಗಮಿಸಿದ್ದ ಸಂಪನ್ಮೂಲ ವ್ಯಕ್ತಿಗಳಾದ ಡಾ.ಸುದರ್ಶನ್, ಡಾ.ಜಯರಾಮ್, ಡಾ.ಟಿ.ಎನ್.ಬಾಲಕೃಷ್ಣೇಗೌಡ ಅವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.

ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಬೆಂಗಳೂರು ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ, ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ಎನ್.ಶ್ರೀಧರ, ವೈದ್ಯಕೀಯ ಭಾಗದ ಡೀನ್ ಡಾ.ಎಂ.ಜಿ.ಶಿವರಾಮ್, ಶಿಕ್ಷಣ ಟ್ರಸ್ಟ್ ನ ಆಡಳಿತಾಧಿಕಾರಿ ಡಾ.ಎ.ಟಿ. ಶಿವರಾಮು ಸೇರಿದಂತೆ ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಅಧಿಕಾರಿಗಳು ಹಾಗೂ ಸಹಸ್ರಾರು ಮಂದಿ ವಿದ್ಯಾರ್ಥಿಗಳು ಇದ್ದರು.