ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭದ ಸಹಯೋಗದಲ್ಲಿ ಬಸವನಗುಡಿಯ ವಿದ್ಯಾಪೀಠ ಸರ್ಕಲ್‌ನಲ್ಲಿರುವ ಡೊಂಕಲ ಮೈದಾನದಲ್ಲಿ ನಡೆಯುತ್ತಿರುವ ‘ಬಸವನಗುಡಿ ಸಂಭ್ರಮ’ದ ಎರಡನೇ ದಿನವಾದ ಶನಿವಾರವೂ ನಿರೀಕ್ಷೆಗೂ ಮೀರಿ ಜನಸಾಗರವೇ ಹರಿದು ಬಂದಿತ್ತು.
ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಐಟಿ-ಬಿಟಿ ಕಂಪನಿಗಳ ಟೆಕ್ಕಿಗಳು, ಶಾಲಾ-ಕಾಲೇಜುಗಳ ಮಕ್ಕಳು, ಯುವಜನರು, ಗೃಹಿಣಿಯರು ಸೇರಿದಂತೆ ಎಲ್ಲ ವಯೋಮಾನದ ಸಾವಿರಾರು ಸಂಖ್ಯೆಯಲ್ಲಿ ಜನರು ಬೆಳಗ್ಗಿನಿಂದಲೇ ಜನರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸವಕ್ಕೆ ಆಗಮಿಸಿ ತಮಗೆ ಇಷ್ಟವಾದ ಉಡುಪುಗಳು, ಅಲಂಕಾರಿಕ ವಸ್ತುಗಳು, ಗೃಹೋಪಯೋಗಿ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು.
ಖಾದ್ಯಪ್ರಿಯರು ಆಹಾರದ ಮಳಿಗೆಗಳಿಗೆ ಲಗ್ಗೆ ಹಾಕಿ ಇಷ್ಟವಾದ ಅವರೇಕಾಳು ದೋಸೆ, ಸಾಂಪ್ರದಾಯಿಕ ಶೈಲಿಯ ಪುಳಿಯೊಗರೆ, ಐಯ್ಯಂಗಾರ್ ಪುಳಿಯೊಗರೆ, ಸಿಮ್ಲಾ ಮಿರ್ಚಿ ಬಜ್ಜಿ, ಬೆಳಗಾವಿ ಕರದಂಟು, ಹಲ್ವಾ, ರಾಗಿ ಪಾಪಡ್, ದಾವಣಗೆರೆ ಬೆಣ್ಣೆದೋಸೆ, ಚಿತ್ರಾನ್ನ, ಗಿರ್‌ಮಿಟ್, ದೋಸೆ, ಇಡ್ಲಿ, ನೂಡಲ್ಸ್, ಮಂಚೂರಿ ಇತ್ಯಾದಿ ಖಾದ್ಯಗಳನ್ನು ಚಪ್ಪರಿಸಿ ಹರ್ಷ ವ್ಯಕ್ತಪಡಿಸಿದರು. ಇದರೊಂದಿಗೆ ವಿವಿಧ ಬಗೆಯ ಆಟಿಕೆಗಳು ಮಕ್ಕಳನ್ನು ಸೆಳೆಯುವಲ್ಲಿ ಯಶಸ್ವಿಯಾದವು.
ಬಿಗ್‌ಬಾಸ್ ಖ್ಯಾತಿಯ ರಕ್ಷಕ್ ಬುಲೆಟ್ ಅವರು ಕಾರ್ಯಕ್ರಮಕ್ಕೆ ಬಂದು ತಿಂಡಿ ತಿನಿಸುಗಳನ್ನು ಸವಿದರು. ಅವರೊಂದಿಗೆ ಸೆಲ್ಫಿ ಪಡೆಯಲು ಹಲವರು ನಾ ಮುಂದು ತಾ ಮುಂದು ಎನ್ನುವಂತೆ ಮುಗಿಬಿದ್ದರು.
ಬೆಳಗ್ಗಿನಿಂದಲೇ ಮಕ್ಕಳಿಗೆ, ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು ನಡೆದವು. ಮಕ್ಕಳಿಗೆ ವೇಷಭೂಷಣ, ಮಹಿಳೆಯರಿಗೆ ಅಡುಗೆ ಕಾರ್ಯಕ್ರಮ, ಮುಕ್ತ ವೇದಿಕೆ ಗಾಯನ, ಮಿನಿಟ್ ಟು ವಿನ್ ಇಟ್ (1 ನಿಮಿಷದ ವಿನೋದ ಕ್ರೀಡೆ), ಬೊಂಬಾಟ್ ಜೋಡಿ ಮತ್ತು ಸಾಂಪ್ರದಾಯಿಕ ಫ್ಯಾಷನ್ ಶೋ ಸ್ಪರ್ಧೆಗಳು ನಡೆದವು. ಹತ್ತಾರು ಸಂಖ್ಯೆಯಲ್ಲಿ ಮಹಿಳೆಯರು, ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿ ಸಂತಸಪಟ್ಟರು.
ರಾತ್ರಿ ನಡೆದ ಮಿಮಿಕ್ರಿ ಗೋಪಿ ಅವರಿಂದ ಹಾಸ್ಯ ಸಂಭ್ರಮದಲ್ಲಿ ಬಸವನಗುಡಿಯ ಜನರು ನಕ್ಕು ನಲಿದರು. ಬಳಿಕ ನಡೆದ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರ ಗಮನ ಸೆಳೆದವು. ಈ ನಡುವೆಯೇ ಬಸವನಗುಡಿಯ ಸಾಧಕರಿಗೆ ಸನ್ಮಾನವೂ ಕೂಡ ನಡೆಯಿತು.ಇಂದಿನ ಕಾರ್ಯಕ್ರಮ:
ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ‘ಬಸವನಗುಡಿ ಸಂಭ್ರಮ’ಕ್ಕೆ ಭಾನುವಾರ ರಾತ್ರಿ ತೆರೆ ಬೀಳಲಿದೆ. ಬೆಳಗ್ಗೆ 11ಕ್ಕೆ ಮಕ್ಕಳಿಗಾಗಿ ಫ್ಯಾನ್ಸಿ ಡ್ರೆಸ್ ಕಾರ್ಯಕ್ರಮ.
ಮಧ್ಯಾಹ್ನ 12ಕ್ಕೆ ಬೆಂಕಿ ರಹಿತ ಅಡುಗೆ ಸ್ಪರ್ಧೆ (ಮಕ್ಕಳಿಗಾಗಿ), 1.30ಕ್ಕೆ ಮಹಿಳೆಯರಿಗೆ ಅಡುಗೆ ಸ್ಪರ್ಧೆ, ಸಂಜೆ 4ಕ್ಕೆ ಪ್ರಕೃತಿ ರಕ್ಷಿಸಿ- ವಿಶ್ವ ರಕ್ಷಿಸಿ ವಿಷಯಾಧಾರಿತ ಚಿತ್ರಕಲಾ ಸ್ಪರ್ಧೆ, ಸಂಜೆ 7ಕ್ಕೆ ಬಸವನಗುಡಿ ಸಾಧಕರಿಗೆ ಸನ್ಮಾನ ಮತ್ತು ಬಹುಮಾನ ವಿತರಣೆ.
ರಾತ್ರಿ 8ಕ್ಕೆ ಬಾಲು ಮತ್ತು ತಂಡದಿಂದ ಭಾರತೀಯ ಜನಪದ ಸಂಗೀತ ಬ್ಯಾಂಡ್ ಮತ್ತು ರಾತ್ರಿ 9ಕ್ಕೆ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.