ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿದ್ದ ಕೈಗಳು ರೂಪಿಸಿದ ಉತ್ಪನ್ನಗಳು ಕೃಷಿಮೇಳದ ವಿಶಾಲ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆಯುತ್ತಿವೆ.
ಅಜೀಜಅಹ್ಮದ ಬಳಗಾನೂರ
ಧಾರವಾಡ:ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿದ್ದ ಕೈಗಳು ರೂಪಿಸಿದ ಉತ್ಪನ್ನಗಳು ಕೃಷಿಮೇಳದ ವಿಶಾಲ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆಯುತ್ತಿವೆ. ಅಪರಾಧದ ಹಾದಿಯಿಂದ ದೂರವಾಗಿ ಕೌಶಲ್ಯ ಕಲಿತು, ದುಡಿಮೆಯ ಮೂಲಕ ಸ್ವಾವಲಂಬನೆ ಸಾಧಿಸುವತ್ತ ಹೆಜ್ಜೆ ಇಡುತ್ತಿರುವ ಕೈದಿಗಳ ಪರಿಶ್ರಮಕ್ಕೆ ಧಾರವಾಡ ಕೃಷಿಮೇಳ ಹೊಸ ವೇದಿಕೆಯಾಗಿ ಮಾರ್ಪಟ್ಟಿತು.
ಧಾರವಾಡದ ಕೇಂದ್ರ ಕಾರಾಗೃಹದ ವತಿಯಿಂದ ಕೃಷಿಮೇಳದಲ್ಲಿ ಸ್ಥಾಪಿಸಿರುವ ಕಾರಾಗೃಹ ಉತ್ಪನ್ನಗಳ ಮಳಿಗೆ ಜನರ ಗಮನ ಸೆಳೆದಿದ್ದು, ಟವೆಲ್, ಕರ್ಚೀಫ್, ಜ್ಯೂಟ್ ಬ್ಯಾಗ್, ವಿವಿಧ ಬಟ್ಟೆ ಹಾಗೂ ಕೈಮಗ್ಗದ ಸಾಮಗ್ರಿಗಳ ಜತೆಗೆ ಬೇಕರಿ ಉತ್ಪನ್ನಗಳಿಗೂ ಉತ್ತಮ ಬೇಡಿಕೆ ವ್ಯಕ್ತವಾಗಿದೆ. 50ಕ್ಕೂ ಅಧಿಕ ಬಗೆಯ ವಸ್ತುಗಳನ್ನು ಮಳಿಗೆಯಲ್ಲಿ ಮಾರಾಟಕ್ಕಿಡಲಾಗಿದ್ದು, ನಾಲ್ಕು ದಿನಗಳಲ್ಲಿ ಪ್ರತಿದಿನ ಸರಾಸರಿ ₹40 ಸಾವಿರಕ್ಕೂ ಅಧಿಕ ವಹಿವಾಟು ನಡೆದಿದೆ. ಕೆಲ ಉತ್ಪನ್ನಗಳು ಸಾಮಾಜಿಕ ಜಾಲತಾಣಗಳಲ್ಲಿಯೂ ಗ್ರಾಹಕರ ಗಮನ ಸೆಳೆಯುತ್ತಿವೆ. ನಿರ್ದಿಷ್ಟ ಬಣ್ಣ, ವಿನ್ಯಾಸದ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಕೆಲವೊಮ್ಮೆ ಗ್ರಾಹಕರು ಕೇಳಿದ ಉತ್ಪನ್ನಗಳ ಸಂಗ್ರಹವೇ ಖಾಲಿಯಾಗುವ ಪರಿಸ್ಥಿತಿಯೂ ಎದುರಾಗಿದೆ.ಗುಣಮಟ್ಟಕ್ಕೆ ಮೊದಲ ಆದ್ಯತೆ:
ಕಾರಾಗೃಹದಲ್ಲಿ ತಯಾರಿಸುವ ವಸ್ತುಗಳ ದರ ನಿಗದಿಯಲ್ಲಿ ಕಚ್ಚಾ ವಸ್ತು, ಉತ್ಪಾದನಾ ವೆಚ್ಚ ಹಾಗೂ ಕೈದಿಗಳ ಶ್ರಮವನ್ನು ಪರಿಗಣಿಸಲಾಗುತ್ತದೆ. ₹150ಕ್ಕೆ ಮಾರಾಟವಾಗುವ ಟವೆಲ್ ತಯಾರಿಕೆಗೆ ಸುಮಾರು ₹100ರಿಂದ ₹110 ವೆಚ್ಚವಾಗುತ್ತದೆ. ಹೀಗಾಗಿ ದರವನ್ನು ಮತ್ತಷ್ಟು ಇಳಿಸುವುದು ಸಾಧ್ಯವಿಲ್ಲ. ಆದರೆ, ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದಿರುವುದು ಅಧಿಕಾರಿಗಳ ನಿಲುವು.ಮೈಸೂರು ದಸರಾ ಸೇರಿದಂತೆ ವಿವಿಧ ಉತ್ಸವ ಹಾಗೂ ಮೇಳಗಳಲ್ಲಿ ಇವುಗಳಿಗೆ ಉತ್ತಮ ಬೇಡಿಕೆ ಸಿಕ್ಕಿದೆ. ಕೃಷಿಮೇಳದಲ್ಲಿ ಖರೀದಿಸಿದವರು ಬಳಿಕವೂ ದೂರವಾಣಿ ಮೂಲಕ ಉತ್ಪನ್ನಗಳನ್ನು ಕೇಳುತ್ತಿದ್ದಾರೆ. ಕಾರ್ಪೊರೇಟ್ ಸಂಸ್ಥೆಗಳಿಂದಲೂ ದೊಡ್ಡ ಪ್ರಮಾಣದ ಆರ್ಡರ್‌ಗಳು ಬರುತ್ತಿವೆ. ಕೈತಯಾರಿಕೆಯ ಉತ್ಪನ್ನಗಳಾಗಿರುವುದರಿಂದ ದೊಡ್ಡ ಬೇಡಿಕೆ ಬಂದಾಗ ಕಾಲಾವಕಾಶ ಪಡೆದು ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಲಾಗುತ್ತಿದೆ.
ಕೃಷಿಮೇಳಕ್ಕೆ ಮೊದಲ ಹೆಜ್ಜೆ:ಮೈಸೂರು ದಸರಾ ಸೇರಿದಂತೆ ಹಲವು ಮೇಳಗಳಲ್ಲಿ ಭಾಗವಹಿಸಿರುವ ಕಾರಾಗೃಹ ಉತ್ಪನ್ನಗಳ ಮಳಿಗೆ ರಾಜ್ಯದಲ್ಲೇ ಮೊದಲ ಬಾರಿಗೆ ಧಾರವಾಡ ಕೃಷಿಮೇಳದಲ್ಲಿ ಕಾಣಿಸಿಕೊಂಡಿದೆ. ಇಲ್ಲಿ ದೊರೆತ ಸ್ಪಂದನೆ, ಕೃಷಿ ಮೇಳಗಳಲ್ಲೂ ಇಂತಹ ವಸ್ತುಗಳಿಗೆ ಉತ್ತಮ ಮಾರುಕಟ್ಟೆ ಇದೆ ಎಂಬುದನ್ನು ತೋರಿಸಿದೆ.
ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಮೇಳ, ಉತ್ಸವ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಉತ್ಪನ್ನಗಳನ್ನು ಪರಿಚಯಿಸಿ, ಕೈದಿಗಳ ಕೌಶಲ್ಯಕ್ಕೆ ವಿಶಾಲ ಮಾರುಕಟ್ಟೆ ಕಲ್ಪಿಸುವ ಉದ್ದೇಶ ಹೊಂದಲಾಗಿದೆ.ಶಿಕ್ಷೆಯ ಜತೆಗೆ ಬದುಕಿನ ಪಾಠ:
ಕಾರಾಗೃಹದ ಚಟುವಟಿಕೆಗಳು ಶಿಕ್ಷೆಗೆ ಮಾತ್ರ ಸೀಮಿತವಾಗದೆ, ಕೈದಿಗಳಲ್ಲಿ ಸಕಾರಾತ್ಮಕ ಚಿಂತನೆ, ಕೌಶಲ್ಯ ಹಾಗೂ ಆತ್ಮವಿಶ್ವಾಸ ಬೆಳೆಸುವತ್ತವೂ ಸಾಗುತ್ತಿವೆ. ಬಿಡುವಿನ ಸಮಯವನ್ನು ಸೃಜನಶೀಲವಾಗಿ ಬಳಸಿಕೊಳ್ಳಲು ಕ್ರಿಕೆಟ್, ಸಾಂಸ್ಕೃತಿಕ, ಸಂಗೀತ ಸೇರಿದಂತೆ ಹಲವು ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ.35 ಮಂದಿಗೆ ಅಕ್ಷರಾಭ್ಯಾಸ:
ಅಕ್ಷರಜ್ಞಾನವಿಲ್ಲದ ಕೈದಿಗಳಿಗೆ ಕಾರಾಗೃಹದಲ್ಲೇ ಸಾಕ್ಷರತಾ ತರಗತಿ ನಡೆಸಲಾಗುತ್ತಿದೆ. ಪ್ರಸ್ತುತ ಸುಮಾರು 35 ಮಂದಿ ನಿಯಮಿತವಾಗಿ ಅಕ್ಷರಾಭ್ಯಾಸ ಮಾಡುತ್ತಿದ್ದಾರೆ. ಮುಕ್ತ ಶಾಲಾ ಶಿಕ್ಷಣದ ಮೂಲಕ ಉನ್ನತ ಶಿಕ್ಷಣಕ್ಕೂ ಅವಕಾಶ ಕಲ್ಪಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 25 ಮಂದಿ ಪದವಿ ಶಿಕ್ಷಣಕ್ಕೆ ನೋಂದಾಯಿಸಿಕೊಂಡಿದ್ದಾರೆ.ಹೀಗೆ, ಗೋಡೆಗಳೊಳಗಿನ ಕೈಗಳಿಗೆ ಕೆಲಸ, ಮನಸ್ಸಿಗೆ ಚಟುವಟಿಕೆ, ಕಲಿಕೆಗೆ ಅವಕಾಶ ಮತ್ತು ಕಾಯಕಕ್ಕೆ ಮಾರುಕಟ್ಟೆ ಕಲ್ಪಿಸುವ ಮೂಲಕ ಶಿಕ್ಷೆಯ ಜತೆಗೆ ಪುನರ್ವಸತಿಯನ್ನೂ ಜೋಡಿಸುವ ಪ್ರಯತ್ನ ನಡೆಯುತ್ತಿದೆ. ಕೃಷಿಮೇಳದಲ್ಲಿ ಜನರ ಮೆಚ್ಚುಗೆ ಗಳಿಸುತ್ತಿರುವ ಈ ಉತ್ಪನ್ನಗಳು, ತಪ್ಪು ಹೆಜ್ಜೆ ಇಟ್ಟ ಬದುಕುಗಳಿಗೆ ದುಡಿಮೆಯ ಮೂಲಕ ಹೊಸ ದಾರಿ ತೋರಿಸುತ್ತಿವೆ.
ಶಿಕ್ಷೆ ನೀಡುವುದಷ್ಟೇ ನಮ್ಮ ಉದ್ದೇಶವಲ್ಲ. ಖೈದಿಗಳ ಕೌಶಲ್ಯಕ್ಕೆ ತಕ್ಕಂತೆ ಕೆಲಸ ನೀಡಿ ಸ್ವಾವಲಂಬಿಗಳನ್ನಾಗಿಸುವುದು ನಮ್ಮ ಗುರಿ. ಕೃಷಿಮೇಳದ ಸ್ಪಂದನೆ ಇದಕ್ಕೆ ಮತ್ತಷ್ಟು ಉತ್ತೇಜನ ನೀಡಿದೆ.ರಘುಪತಿ, ಕೇಂದ್ರ ಕಾರಾಗೃಹ ಅಧೀಕ್ಷಕ ಧಾರವಾಡ