ಬಹುಪಯೋಗಿ ಯಂತ್ರಕ್ಕೆ ಭಾರಿ ಡಿಮ್ಯಾಂಡ್‌

| Published : Sep 15 2025, 01:00 AM IST

ಸಾರಾಂಶ

ಅರೇಕುರಹಟ್ಟಿಯ ಶ್ರೀನಿವಾಸ್ ಜನರಲ್ ಎಂಜಿನಿಯರಿಂಗ್ ವರ್ಕ್ಸ್‌ನವರು ಅಭಿವೃದ್ಧಿಪಡಿಸಿದ ಬಹುಪಯೋಗಿ ಎಡೆ ಹೊಡೆಯುವ ಯಂತ್ರಕ್ಕೆ ಮನ ಸೋಲದವರಿಲ್ಲ. ಈ ಯಂತ್ರವು ಒಂದೇ ಬಾರಿ ಎಡೆ ಹೊಡೆಯುವುದರ ಜತೆಗೆ ಗೊಬ್ಬರ ಹಾಕುವುದು, ಬೆಳೆಗಳಿಗೆ ಔಷಧ ಸಿಂಪಡಿಸುವ ಕಾರ್ಯ ಮಾಡುತ್ತದೆ.

ಧಾರವಾಡ: ಈ ಬಹುಪಯೋಗಿ ಎಡೆ ಕುಂಟೆಗೆ ಮನಸೋಲದವರಿಲ್ಲ. ಈ ಒಂದೇ ಯಂತ್ರವು ಮೂವರ ಕೆಲಸ ಮಾಡುತ್ತದೆ. ಹಾಗಾಗಿ ಈ ಬಾರಿಯ ಕೃಷಿಮೇಳದಲ್ಲಿ ಈ ಎಡೆಕುಂಟೆಗೆ ಭಾರಿ ಡಿಮ್ಯಾಂಡ್‌ ಬಂದಿದೆ.

ಅರೇಕುರಹಟ್ಟಿಯ ಶ್ರೀನಿವಾಸ್ ಜನರಲ್ ಎಂಜಿನಿಯರಿಂಗ್ ವರ್ಕ್ಸ್‌ನವರು ಅಭಿವೃದ್ಧಿಪಡಿಸಿದ ಬಹುಪಯೋಗಿ ಎಡೆ ಹೊಡೆಯುವ ಯಂತ್ರಕ್ಕೆ ಮನ ಸೋಲದವರಿಲ್ಲ. ಈ ಯಂತ್ರವು ಒಂದೇ ಬಾರಿ ಎಡೆ ಹೊಡೆಯುವುದರ ಜತೆಗೆ ಗೊಬ್ಬರ ಹಾಕುವುದು, ಬೆಳೆಗಳಿಗೆ ಔಷಧ ಸಿಂಪಡಿಸುವ ಕಾರ್ಯ ಮಾಡುತ್ತದೆ. ಇದರಿಂದ ಕಾರ್ಮಿಕರ ಕೊರತೆ ನೀಗುವುದಲ್ಲದೇ ಸಮಯದ ಉಳಿತಾಯವೂ ಆಗಲಿದೆ.

ಸಾಮಾನ್ಯವಾಗಿ ರೈತರು ಎತ್ತುಗಳಿಂದ ಒಂದು ದಿನಕ್ಕೆ 2 ರಿಂದ 3 ಎಕರೆ ಹೊಲ ಎಡೆ ಹೊಡೆಯುತ್ತಾರೆ. ಆದರೆ, ಈ ಯಂತ್ರದಿಂದ ಕೇವಲ ಒಂದೇ ಗಂಟೆಯಲ್ಲಿ 6 ಎಕರೆ ಜಮೀನನ್ನು ಎಡೆ ಹೊಡೆಯಬಹುದು. ಅಲ್ಲದೇ ಇದೇ ಅವಧಿಯಲ್ಲಿ ಗೊಬ್ಬರ, ಔಷಧಿ ಸಿಂಪಡಿಸಬಹುದು.

ಇದರೊಂದಿಗೆ ಆಳವಾದ ಉಳುಮೆಗೆ ಸುಧಾರಿಸಿದ ದಿಂಡಿನ ಕುಂಟೆಯನ್ನು ಇವರು ಅಭಿವೃದ್ಧಿಪಡಿಸಿದ್ದಾರೆ. ಮೊದಲು ಈ ಯಂತ್ರ 7 ಅಡಿ ಉದ್ದವಿತ್ತು. ಇದೀಗ ಈ ಯಂತ್ರವನ್ನು 13 ಅಡಿಗೆ ವಿಸ್ತರಿಸಲಾಗಿದೆ. ಇದರಿಂದ ಮತ್ತಷ್ಟು ವೇಗವಾಗಿ ಕೃಷಿ ಕೆಲಸ ಮಾಡಬಹುದು. ಜತೆಗೆ ಗಿಡ- ಮರಗಳು ಇದ್ದಲ್ಲಿ ಯಂತ್ರವನ್ನು ಮಡಚಲು ಅನುಕೂಲವಾಗುವಂತೆ ತಯಾರಿಸಲಾಗಿದೆ. ಇದೇ ರೀತಿ ಸ್ವಯಂಚಾಲಿತ ಕೂರಿಗೆ, ಟ್ರ್ಯಾಕ್ಟರ್‌ನಿಂದ ಬಿತ್ತುವ ಕೂರಿಗೆ, ಎತ್ತುಗಳಿಂದ ಬಿತ್ತುವ ಕೂರಿಗೆ, ಟ್ರ್ಯಾಕ್ಟರ್‌ನಿಂದ ಹರಗುವ ಕೂರಿಗೆ ಸಿದ್ಧಪಡಿಸಿದ್ದು, ಗ್ರಾಹಕರಿಂದ ಹೆಚ್ಚಿನ ಬೇಡಿಕೆ ಹೊಂದಿವೆ. ಉತ್ತಮ ಗುಣಮಟ್ಟ ಇರುವುದರಿಂದ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಹಲವು ಪ್ರಶಸ್ತಿ: ಈ ಸಂಸ್ಥೆಯ ಮಾಲಿಕರಾದ ಡಿ.ಕೆ. ಲಕ್ಕಣ್ಣವರ ಅವರಿಗೆ 2016ರಲ್ಲಿ ಏಷಿಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭದಿಂದ ಅಸಮಾನ್ಯ ಕನ್ನಡಿಗ ಪ್ರಶಸ್ತಿ, 2019ರಲ್ಲಿ ಸುಕೋ ಬ್ಯಾಂಕ್‌ ವತಿಯಿಂದ ಸುಕೃತ ಕೃಷಿ ತಂತ್ರಜ್ಞ ಪ್ರಶಸ್ತಿ ಪಡೆದಿದೆ. ಧಾರವಾಡದ ಕೃಷಿ ಮೇಳದಲ್ಲಿ 1997ರಲ್ಲಿ ಪ್ರಥಮ, 1998ರಲ್ಲಿ ದ್ವಿತೀಯ, 1999ರಿಂದ 2006ರ ವರೆಗೆ ಕೃಷಿ ಮೇಳದಲ್ಲಿ ಉಪಕರಣಗಳ ವಿಭಾಗದಲ್ಲಿ ಪ್ರಥಮ, 1998ರಲ್ಲಿ ರಾಯಚೂರಿನಲ್ಲಿ ನಡೆದ ಕೃಷಿಮೇಳದಲ್ಲಿ ಪ್ರಥಮ ಸ್ಥಾನ ಪಡೆದಿದೆ.

ಇಲ್ಲಿಗೆ ಸಂಪರ್ಕಿಸಿ: ಹೆಚ್ಚಿನ ಮಾಹಿತಿಗೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅರೇಕುರಹಟ್ಟಿ ಗ್ರಾಮದಲ್ಲಿರುವ ಶ್ರೀನಿವಾಸ ಜನರಲ್ ಎಂಜಿನಿಯರಿಂಗ್ ವರ್ಕ್ಸ್‌. ಮೊ: 9880197889, 9110657545 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.

ನಮ್ಮಲ್ಲಿ ತಯಾರಿಸಲಾದ ಬಹುಪಯೋಗಿ ಎಡೆಕುಂಟೆಗೆ ಹೆಚ್ಚಿನ ಬೇಡಿಕೆಯಿದೆ. ರಾಜ್ಯಾದ್ಯಂತವಿರುವ ಪ್ರತಿ ಹಳ್ಳಿಹಳ್ಳಿಗಳಲ್ಲೂ ನಮ್ಮಲ್ಲಿ ತಯಾರಾದ ಕೃಷಿಯಂತ್ರೋಪಕರಣಗಳು ಕಾಣಸಿಗುತ್ತವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿ ರೈತಸ್ನೇಹಿ ಯಂತ್ರಗಳ ಆವಿಷ್ಕಾರ ಉದ್ದೇಶವಿದೆ ಎಂದು ಅರೇಕುರಹಟ್ಟಿಯ ಶ್ರೀನಿವಾಸ ಜನರಲ್ ಎಂಜಿನಿಯರಿಂಗ್ ವರ್ಕ್ಸ್‌ನ ಮಾಲಿಕ ಡಿ.ಕೆ. ಲಕ್ಕಣ್ಣವರ ಹೇಳಿದರು.