ಅನುದಾನ ಮಂಜೂರಾತಿಗಾಗಿ ಬೃಹತ್ ಪಂಜಿನ ಮೆರವಣಿಗೆ

| Published : Feb 08 2024, 01:39 AM IST

ಸಾರಾಂಶ

ಗಾಣಿಗ ಸಮಾಜ ಅತ್ಯಂತ ಹಿಂದುಳಿದಿದ್ದು, ವ್ಯವಸಾಯ ಮತ್ತು ಎಣ್ಣೆ ತೆಗೆಯುವುದು ಮೂಲ ಉದ್ಯೋಗವಾಗಿದೆ. ಹಿಂದುಳಿದ ಸಮಾಜವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ನಿಗಮ ಅಥವಾ ಮಂಡಳಿಯನ್ನು ಸರ್ಕಾರ ರಚಿಸಬೇಕು

ಗದಗ: ರಾಜ್ಯ ಸರ್ಕಾರ ಗಾಣಿಗ ಅಭಿವೃದ್ಧಿ ನಿಗಮಕ್ಕೆ ₹೧೦೦೦ ಕೋಟಿ ಅನುದಾನ ಮಂಜೂರಾತಿಗೆ ಆಗ್ರಹಿಸಿ ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾ ರಾಜ್ಯ ಯುವ ಘಟಕದ ವತಿಯಿಂದ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಬೃಹತ್ ಪಂಜಿನ ಮೆರವಣಿಗೆ ನಡೆಸಲಾಯಿತು.

ಈ ವೇಳೆ ಯುವ ಘಟಕದ ರಾಜ್ಯಾಧ್ಯಕ್ಷ ಮಂಜುನಾಥ್ ಪಿ. ಪರ್ವತಗೌಡ್ರ ಮಾತನಾಡಿ, ಗಾಣಿಗ ಸಮಾಜ ಅತ್ಯಂತ ಹಿಂದುಳಿದಿದ್ದು, ವ್ಯವಸಾಯ ಮತ್ತು ಎಣ್ಣೆ ತೆಗೆಯುವುದು ಮೂಲ ಉದ್ಯೋಗವಾಗಿದೆ. ಹಿಂದುಳಿದ ಸಮಾಜವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ನಿಗಮ ಅಥವಾ ಮಂಡಳಿಯನ್ನು ಸರ್ಕಾರ ರಚಿಸಬೇಕು ಎಂದು ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾದ ನೇತೃತ್ವದಲ್ಲಿ ರಾಜ್ಯಾದ್ಯಂತ ನಡೆಸಿದ ಹೋರಾಟಕ್ಕೆ ಮಣಿದು ಅಂದಿನ ಸರ್ಕಾರ ಗಾಣಿಗ ಅಭಿವೃದ್ಧಿ ನಿಗಮ ರಚಿಸಿತ್ತು. ವಿಪರ್ಯಾಸವೆಂದರೆ ಘೋಷಣೆಯಾದ ನಿಗಮ ಈ ವರೆಗೂ ನೋಂದಣಿಯಾಗಿಲ್ಲ ಅಥವಾ ಅನುಷ್ಠಾನಗೊಂಡಿಲ್ಲ. ನಿಗಮಕ್ಕೆ ಈ ಹಿಂದಿನ ಸರ್ಕಾರ ಮತ್ತು ಈಗಿನ ಸರ್ಕಾರಗಳು ಯಾವುದೇ ರೀತಿಯಿಂದ ಒಂದು ಪೈಸಾ ಅನುದಾನ ಒದಗಿಸಿಲ್ಲ ಎಂದು ಆರೋಪಿಸಿದರು.

ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಗಾಣಿಗ ಅಭಿವೃದ್ಧಿ ನಿಗಮ ನೋಂದಣಿ ಮಾಡಬೇಕು. ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಕಚೇರಿ ತೆರೆಯಬೇಕು. ₹೧೦೦೦ ಕೋಟಿ ಅನುದಾನ ಒದಗಿಸಬೇಕು. ಇಲ್ಲದೆ ಇದ್ದಲ್ಲಿ ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾ ನೇತೃತ್ವದಲ್ಲಿ ಸಮಸ್ತ ಗಾಣಿಗ ಸಮಾಜದವರು ಕರ್ನಾಟಕ ಬಂದ್‌ಗೆ ಕರೆ ಕೊಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಶಿವಣ್ಣ ಹುಡೇದ ಮಾತನಾಡಿ, ನಮ್ಮ ಗಾಣಿಗ ಸಮಾಜದ ಹೆಮ್ಮೆಯ ನಾಯಕರು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಅವರು ಎಲ್ಲೆ ಇರಲಿ ಅವರ ಜತೆ ರಾಜ್ಯದ ಗಾಣಿಗ ಸಮಾಜವಿದೆ. ಅವರ ಪಟ್ಟ ಪರಿಶ್ರಮ ಮತ್ತು ಅವರ ಪ್ರಭಾವದಿಂದ ಈಗಿನ ಸರ್ಕಾರಕ್ಕೆ ೨೫ರಿಂದ ೩೦ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲು ಸಾಧ್ಯವಾಗಿದೆ. ಆದ್ದರಿಂದ ನಮ್ಮ ನಾಯಕರಿಗೆ ಸರ್ಕಾರ ಕೂಡಲೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು. ಇಲ್ಲದೆ ಇದ್ದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸಮಾಜ ತಕ್ಕ ಉತ್ತರ ಕೊಡುತ್ತದೆ ಎಂದರು.

ಸುರೇಶ ಮುಳಗುಂದ, ಮಲ್ಲಿಕಾರ್ಜುನ ಕೊರಕನವರ, ಮಂಜುನಾಥ ಬಿಳೆಯಲಿ, ಈಶ್ವರ ಕಾನಗೌಡ್ರ, ನಾಗರಾಜ ಹನುಮಂತಗೌಡ್ರ, ಸಂಜು ಬೆನಹಾಳ, ಪರಸು ಬನ್ನೂರ, ಮುತ್ತು ಬಿಳೆಲಿ, ಬಸವರಾಜ ಹುಡೇದ, ಬಸವರಾಜ ಮುಳ್ಳಾಳ, ಗುರುರಾಜ ಕಲಕೇರಿ, ಉದಯ ದಳವಾಯಿ, ಪಾಂಡು ಗಡಾದ, ಪ್ರಕಾಶ ಬಿಂದರಕುಂದಿ, ಸುನೀಲ ಹೋಣ್ಣಪ್ಪನವರ, ರಮೇಶ ಹನುಮಂತಗೌಡ್ರ, ಜಗದೀಶ್ ಕವಲೂರ ಇದ್ದರು.