ಸಾರಾಂಶ
ಚಕ್ಕಡಿ ರಸ್ತೆ ಹೆಸರಿನಲ್ಲಿ ಸರ್ಕಾರಿ ಗುಡ್ಡ ಹಾಗೂ ತಿರ್ಲಾಪುರದ ನೀರಾವರಿ ಕ್ವಾರಿಗಳ ಮೊರಂ ಮಣ್ಣು ಲೂಟಿ ಮಾಡಲಾಗುತ್ತಿದೆ. ಡಾಂಬರ್ ರಸ್ತೆ ತೆಗೆದು ಮೊರಂ ಮಣ್ಣು ಹಾಕಿ ಚಕ್ಕಡಿ ರಸ್ತೆ ಮಾಡಲಾಗುತ್ತಿದೆ. ಇದು ಕಾನೂನು ಬಾಹಿರ.
ನವಲಗುಂದ:
ವಿಧಾನಸಭಾ ಕ್ಷೇತ್ರದಲ್ಲಿ ಚಕ್ಕಡಿ ರಸ್ತೆಗಳ ನಿರ್ಮಾಣದಲ್ಲಿ ಗೋಲ್‌ಮಾಲ್ ಆಗುತ್ತಿದ್ದು ಈ ಕುರಿತು ತನಿಖೆ ನಡೆಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಕ್ಕಡಿ ರಸ್ತೆಗಳನ್ನು ಯಾವ ಅನುದಾನದಲ್ಲಿ ನಿರ್ಮಿಸಲಾಗುತ್ತಿದೆ, ಗ್ರಾಪಂನಿಂದ ಎಷ್ಟು ಅನುದಾನ ಪಡೆಯಲಾಗಿದೆ. ಯಾವ ಎನ್‌ಜಿಒ ಅಥವಾ ಯಾರಿಗೆ ಟೆಂಡರ್ ನೀಡಲಾಗಿದೆ. ಯಾರ ಹೆಸರಲ್ಲಿ ಬಿಲ್ ತೆಗೆಯಲಾಗುತ್ತಿದೆ. ಇವುಗಳ ಬಗ್ಗೆ ತನಿಖೆಯಾಗಬೇಕು. ಆ ವ್ಯಕ್ತಿ ಎಷ್ಟೇ ಪ್ರಭಾವಿಯಾಗಿದ್ದರೂ, ಅಧಿಕಾರಿಯಿದ್ದರೂ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಚಕ್ಕಡಿ ರಸ್ತೆ ಹೆಸರಿನಲ್ಲಿ ಸರ್ಕಾರಿ ಗುಡ್ಡ ಹಾಗೂ ತಿರ್ಲಾಪುರದ ನೀರಾವರಿ ಕ್ವಾರಿಗಳ ಮೊರಂ ಮಣ್ಣು ಲೂಟಿ ಮಾಡಲಾಗುತ್ತಿದೆ. ಡಾಂಬರ್ ರಸ್ತೆ ತೆಗೆದು ಮೊರಂ ಮಣ್ಣು ಹಾಕಿ ಚಕ್ಕಡಿ ರಸ್ತೆ ಮಾಡಲಾಗುತ್ತಿದೆ. ಇದು ಕಾನೂನು ಬಾಹಿರ. ಕಳೆದ ವರ್ಷ ನಮ್ಮ ಅಧಿಕಾರದ ಅವಧಿಯಲ್ಲಿ ಡಾಂಬರೀಕರಣ ಮಾಡಿದ ರಸ್ತೆಗಳನ್ನು ತೆಗೆಯಲಾಗುತ್ತಿದೆ. ಅವುಗಳನ್ನು ಚಕ್ಕಡಿ ರಸ್ತೆ ಮಾಡಿ. ಲಕ್ಷಗಟ್ಟಲೇ ಬಿಲ್ ತೆಗೆಯಲಾಗುತ್ತಿದೆ. ಅದರ ಸಂಪೂರ್ಣ ಮಾಹಿತಿಯೂ ನನ್ನಲ್ಲಿ ಇದೆ. ಆದರೆ ಕೂಲಂಕುಶವಾಗಿ ತನಿಖೆಯಾಗಬೇಕು ಎಂದರು.ನವಲಗುಂದ ಗುಡ್ಡಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. 3 ಸಾವಿರ ಟಿಪ್ಪರ್‌ಗೂ ಅಧಿಕ ಮೊರಂ ಅಕ್ರಮವಾಗಿ ಸಾಗಿಸಲಾಗಿದೆ. ಆದಷ್ಟು ಬೇಗನೆ ಭೂ ಮತ್ತು ಗಣಿ ಇಲಾಖೆ ಅಧಿಕಾರಿಗಳು, ಸಚಿವರು ಗಮನಹರಿಸಿ ನವಲಗುಂದ ಗುಡ್ಡ ಹಾಗೂ ತಿರ್ಲಾಪುರದ ನೀರಾವರಿ ಇಲಾಖೆಯ ಕ್ವಾರಿಯಲ್ಲಿನ ಮೊರಂ ಯಾವ ಯಾವ ಚಕ್ಕಡಿ ರಸ್ತೆಗಳಿಗೆ ಬಳಿಸಿದ್ದಾರೆ. ಅವುಗಳಿಗೆ ಬಳಸಿರುವ ಟಿಪ್ಪರ್‌ಗಳೆಷ್ಟು, ಜೆಸಿಬಿಗಳೆಷ್ಟು, ಟ್ಯಾಕ್ಟರ್‌ಗಳೆಷ್ಟು ಎಲ್ಲದರ ಬಗ್ಗೆಯೂ ಪರಿಶೀಲನೆ ನಡೆಸಬೇಕು ಎಂದರು.
ಈ ವೇಳೆ ಎಸ್.ಬಿ. ದಾನಪ್ಪಗೌಡರ, ಈರಣ್ಣ ಹಸಬಿ, ನಿಂಗಪ್ಪ ಬಾರಕೇರ, ಮಹಾಂತೇಶ್ ಕಲಾಲ, ರಾಯನಗೌಡ ಪಾಟೀಲ, ಬಸವರಾಜ ಕಟ್ಟಿಮನಿ, ಶರಣಪ್ಪ ಹಕ್ಕರಕಿ, ದೇವರಾಜ ಕರಿಯಪ್ಪಗೌಡರ, ಅಶ್ವಿನಿ ಗೊಲ್ಲರ, ಜಯಪ್ರಕಾಶ್ ಬದಾಮಿ, ವಿನಯ ದಾಡಿಬಾವಿ ಸೇರಿದಂತೆ ಹಲವರು ಇದ್ದರು.