ವಿಷ್ಣು ಮಹಾಕಾಳಿಯ ಬೃಹತ್ ವಿಗ್ರಹ ಲೋಕಾರ್ಪಣೆ

| Published : Mar 23 2025, 01:32 AM IST

ಸಾರಾಂಶ

ಈ ಭಾಗದಲ್ಲಿ ಭಕ್ತಿಯ ಸೆಲೆ ಇರುವುದರಿಂದ ವಿಷ್ಣು ಮಹಾಕಾಳಿಯ ಬೃಹತ್ ಮೂರ್ತಿ ಪ್ರತಿಷ್ಠಾಪನೆ ಆಗಲು ಸಾಧ್ಯವಾಗಿದೆ. ಸಕಲ ಭಕ್ತರ ಸಮಸ್ಯೆ ನಿವಾರಣೆಯಾಗಲಿ ಎಂದು ನಂಜಾವಧೂತ ಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ಕುಣಿಗಲ್

ಈ ಭಾಗದಲ್ಲಿ ಭಕ್ತಿಯ ಸೆಲೆ ಇರುವುದರಿಂದ ವಿಷ್ಣು ಮಹಾಕಾಳಿಯ ಬೃಹತ್ ಮೂರ್ತಿ ಪ್ರತಿಷ್ಠಾಪನೆ ಆಗಲು ಸಾಧ್ಯವಾಗಿದೆ. ಸಕಲ ಭಕ್ತರ ಸಮಸ್ಯೆ ನಿವಾರಣೆಯಾಗಲಿ ಎಂದು ನಂಜಾವಧೂತ ಸ್ವಾಮೀಜಿ ನುಡಿದರು.

ಕುಣಿಗಲ್ ತಾಲೂಕಿನ ಅಮೃತ್ತೂರು ಹೋಬಳಿಯ ಕೊರಟಿ ಹೊನ್ನಮಾಚನಹಳ್ಳಿ ಶ್ರೀ ಶನೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ನಿರ್ಮಿಸಿರುವ 35 ಅಡಿಯ ಬೃಹತ್ ವಿಷ್ಣು ಮಹಾಕಾಳಿ ದೇವಿಯ ವಿಗ್ರಹವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಯಾವ ಮನೆಯಲ್ಲಿ ಹೆಣ್ಣು ಮಕ್ಕಳು ಸಂತೋಷವಾಗಿರುತ್ತಾರೋ ಆ ಮನೆಯಲ್ಲಿ ದೇವರು ನೆಲೆಸುತ್ತಾನೆ ಎಂಬುದು ಹಲವಾರು ವರ್ಷಗಳಿಂದ ಸಾಬೀತಾಗಿದೆ, ಜೊತೆಗೆ ಹೆಣ್ಣು ಮಕ್ಕಳು ಇರುವ ಮನೆ ಸಂತೋಷವಾಗಿರುತ್ತದೆ. ಆದ್ದರಿಂದ ಹೆಣ್ಣಿಗೆ ಶಕ್ತಿ ಮತ್ತು ದೇವರ ರೂಪವನ್ನು ನೀಡಿದ್ದೇವೆ ಎಂದರು. ಕಾಗೆಯನ್ನು ಪೂಜಿಸುವ ನಾವು ಪ್ರತಿಯೊಂದು ವಿಚಾರದಲ್ಲಿ ಪರಿಸರವನ್ನು ಪೂಜಿಸುತ್ತೇವೆ. ಇಂತಹ ಸಂದರ್ಭದಲ್ಲಿ ಭಗವಂತ ಪ್ರಕೃತಿ ರೂಪದಲ್ಲಿ ನಮಗೆ ಒಳಿತು ಮಾಡುತ್ತಿದ್ದಾನೆ. ಬಸವಣ್ಣನನ್ನು ನಾವು ಪೂಜಿಸಿ ಒಳಿತು ಕಂಡಿದ್ದೇವೆ. ನಮ್ಮ ಕಷ್ಟಗಳು ಕೊರಟಿ ಹೊನ್ನಮಾಚನಹಳ್ಳಿಯ ಶನೇಶ್ವರ ದೇವಾಲಯದಲ್ಲಿ ದೂರಾಗುತ್ತಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಡಿಸಿಎಂ ಅಶ್ವತ್ಥ್ ನಾರಾಯಣ ಮಾತನಾಡಿ, ದೇವಾಲಯದ ನಿರ್ಮಾಣ, ದೈವ ಕಾರ್ಯಗಳು ಎಲ್ಲರಿಂದಲೂ ಸಾಧ್ಯವಿಲ್ಲ. ಅದನ್ನು ಮಾಡಬೇಕೆಂದರೆ ದೈವ ರೇಖೆ ಇರಬೇಕು. ದೇವಾಲಯದ ಪ್ರಧಾನ ಅರ್ಚಕರಾದ ಕೃಷ್ಣಪ್ಪನವರಿಗೆ ದೈವ ಬಲವಿದೆ, ಆದ್ದರಿಂದ ಅವರು ಇಂತಹ ಸಾಧನೆ ಮಾಡಲು ಸಾಧ್ಯ. ಬಸವಣ್ಣ, ಶನೇಶ್ವರನ ದೇವಾಲಯದ ಜೊತೆಗೆ ವಿಷ್ಣು ಮಹಾಕಾಳಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ, ಭಗವಂತ ಎಲ್ಲರಿಗೂ ಒಳಿತು ಮಾಡುತ್ತಾನೆ ಎಂಬ ನಂಬಿಕೆ ಇದೆ, ರಾಜ್ಯಕ್ಕೆ ಒಳಿತಾಗಬೇಕು, ಉತ್ತಮ ಮಳೆ ಬೆಳೆಯಾಗಿ ರೈತರು ಸುಖವಾಗಿ ಇರಬೇಕೆಂದರು.

ಗ್ರಾಪಂ ಮಾಜಿ ಅಧ್ಯಕ್ಷ ಟಿಟಿ ವೆಂಕಟೇಶ್ ಮಾತನಾಡಿದರು.

ಸಂಸ್ಥಾಪಕರಾದ ಕೃಷ್ಣಪ್ಪ ಮಾತನಾಡಿ, ಹಲವಾರು ದಿನಗಳಿಂದ ವಿಷ್ಣು ಕಾಳಿ ರೂಪದಲ್ಲಿ ನನ್ನನ್ನು ಕಾಡಲಾರಂಭಿಸಿದರು, ಈ ಬಗ್ಗೆ ಹಲವಾರು ಕ್ಷೇತ್ರಗಳಲ್ಲಿ ಮತ್ತು ಧರ್ಮ ಪಂಚಾಂಗದಲ್ಲಿ ಪ್ರಶ್ನಿಸಲಾಗಿ ವಿಷ್ಣು ಮಹಾಕಾಳಿಗೆ ಇಲ್ಲಿ ನೆಲೆಸಬೇಕೆಂಬ ಸಂಕಲ್ಪ ಇದೆ ಎಂದು ಹೇಳಲಾಗಿತ್ತು. ಅದಕ್ಕೋಸ್ಕರ ಹಲವರು ಭಕ್ತರ ಸಹಕಾರದಿಂದ ಈ ದಿನ 35 ಅಡಿಯ ಮಹಾ ಬೃಹದಾಕಾರದ ವಿಷ್ಣು ಮಹಾಕಾಳಿ ದೇವಿ ವಿಗ್ರಹವನ್ನು ನಿರ್ಮಿಸಲಾಗಿದೆ. ಅದರಂತೆ ರೂಪವಿಲ್ಲದ ಮೂಲವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಪ್ರತಿದಿನ ಹಲವಾರು ಹೋಮ, ಪೂಜೆ ಸೇರಿದಂತೆ ವಿಶೇಷ ಧಾರ್ಮಿಕ ಕಾರ್ಯಗಳು ನಡೆಯುತ್ತಿವೆ ಎಂದರು.

ಅರೆ ಶಂಕರ ಮಠದ ಸಿದ್ಧರಾಮ ಚೈತನ್ಯ ಸ್ವಾಮೀಜಿ ಸೇರಿದಂತೆ ಹಲವಾರು ಸ್ವಾಮೀಜಿಗಳು ಕಳಸ ಗೋಪುರಕ್ಕೆ ಅಕ್ಷತೆಯನ್ನು ಅರ್ಪಿಸಿದರು. ದೇವಾಲಯದ ಆವರಣದಲ್ಲಿ ವಿಶೇಷವಾಗಿ ವೀರಗಾಸೆ, ಚಂಡೆ ವಾದ್ಯ ಸೇರಿದಂತೆ ಹಲವಾರು ಕಲಾ ತಂಡಗಳು ತಮ್ಮ ಕಲೆ ಪ್ರದರ್ಶಿಸಿದವು.

ಜಾತ್ರೆ ಹಾಗೂ ವಿಷ್ಣು ಮಹಾಕಾಳಿ ದೇವಾಲಯದ ಉದ್ಘಾಟನೆ ಹಿನ್ನೆಲೆ ದೇವಾಲಯ ಸೇರಿ ದೇವರ ವಿಗ್ರಹಗಳಿಗೆ ಹಲವಾರು ಹೂಗಳಿಂದ ಶೃಂಗರಿಸಲಾಗಿತ್ತು.

ಬೆಳಗ್ಗೆಯಿಂದ ದೇವಾಲಯದಲ್ಲಿ ಹಲವಾರು ಪೂಜೆ, ಪ್ರಾರ್ಥನೆ, ಪಂಚಗವ್ಯ ಪ್ರತಿಷ್ಠಾಪನೆ, ವೇದಪಾರಾಯಣ, ಕಳಸ ಸ್ಥಾಪನೆ, ಮಹಾಮಂಗಳಾರತಿ, ತೀರ್ಥ ಪ್ರಸಾದ, ಹೋಮ, ಜಲಶುದ್ದಿ, ಕ್ಷೀರಶುದ್ದಿ ಸೂತ್ರ ಸೇರಿದಂತೆ ಹಲವಾರು ಪೂಜಾ ವಿಧಾನಗಳು ನಡೆದವು.

ಸಾಂಪ್ರದಾಯಿಕವಾಗಿ ಮಹಾ ಕುಂಭಾಭಿಷೇಕ ಪೂಜಾ ಕಾರ್ಯಕ್ರಮಗಳ ಜೊತೆಗೆ ಮಹಾ ರಥೋತ್ಸವ ಕೂಡ ವಿಜೃಂಭಣೆಯಿಂದ ನಡೆಯಿತು. ಮಧ್ಯಾಹ್ನ 1:30 ಕ್ಕೆ ಶನೇಶ್ವರನನ್ನು ರಥದ ಮೇಲೆ ಕೂರಿಸಿ ಭಕ್ತರ ಸಮ್ಮುಖದಲ್ಲಿ ರಥೋತ್ಸವ ಆಚರಿಸಲಾಯಿತು.

ವಿವಿಧ ಭಾಗಗಳಿಂದ ಬಂದಿದ್ದ ಸಹಸ್ರಾರು ಭಕ್ತರು ಶನೇಶ್ವರನ ರಥಕ್ಕೆ ಹಣ್ಣು, ದವನ ಅರ್ಪಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು. ಬಂದಿದ್ದ ಭಕ್ತರಿಗೆ ದಾಸೋಹ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ಎಲ್ಲೆರಾಂಪುರದ ಹನುಮಂತನಾಥ ಸ್ವಾಮೀಜಿ , ಅರೇಶಂಕರ ಮಠದ ಸಿದ್ಧರಾಮ ಚೈತನ್ಯ ಸ್ವಾಮೀಜಿ, ಮುಖಂಡರಾದ ಉಮೇಶ್ , ರಾಮಣ್ಣ , ಕೃಷ್ಣಪ್ಪ ,ರಾಮಚಂದ್ರಯ್ಯ ಸೇರಿದಂತೆ ಇತರರು ಇದ್ದರು.