ಸಾರಾಂಶ
ಹಳಿಯಾಳ: ತಂತ್ರಜ್ಞಾನದ ಜತೆಯಲ್ಲಿ ಕೌಶಲ್ಯ ಜ್ಞಾನ ಹೊಂದಿರುವನಿಗೆ ಉದ್ಯಮ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಅಪಾರವಾದ ಅವಕಾಶಗಳಿವೆ. ಅದಕ್ಕಾಗಿ ಇಂದಿನ ಯುವಪೀಳಿಗೆ ಹಾಗೂ ವಿದ್ಯಾಥಿಗಳು ಕೃತಕ ಬುದ್ಧಿಮತೆ ಹಾಗೂ ಡಿಜಿಟಲ್ ತಂತ್ರಜ್ಞಾನದಲ್ಲಿ ಪಾರಂಗತರಾಗಲು ಆದ್ಯತೆ ನೀಡಬೇಕು ಎಂದು ವಿ.ಆರ್.ಡಿ.ಎಂ. ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು ಕರೆ ನೀಡಿದರು.
ಪಟ್ಟಣದ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಕೌಶಲ್ಯ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ನಾವು ಕಲಿತ ಕೌಶಲ್ಯವು ನಮ್ಮಲ್ಲಿರುವ ರಚನಾತ್ಮಕತೆ, ನಾವಿನ್ಯತೆ ಮತ್ತು ವಿಮರ್ಶಾತ್ಮಕ ಚಿಂತನೆಗಳನ್ನು ವೃದ್ಧಿಸಲು ಅನುವು ಮಾಡಿಕೊಡುತ್ತದೆ. ಕೌಶಲ್ಯ ಕ್ಷೇತ್ರಕ್ಕೆ ವ್ಯಾಪ್ತಿಯೆಂಬುದಿಲ್ಲ, ಪ್ರತಿ ಕ್ಷಣ ಗಳಿಗೆಯಲ್ಲೂ ಕೌಶಲ್ಯ ಕ್ಷೇತ್ರವು ಹೊಸ ಹೊಸ ಅವಿಷ್ಕಾರಗಳನ್ನು ಪರಿಚಯಿಸುತ್ತ ನಮ್ಮನ್ನು ಅಧ್ಯಯನಶೀಲರಾಗುವಂತೆ ಮಾಡುತ್ತದೆ. ಅದಕ್ಕಾಗಿ ನಾವು ಪಡೆದ ಕೌಶಲ್ಯವನ್ನು ನಿರಂತರವಾಗಿ ನವೀಕರಿಸಲು ಪ್ರಯತ್ನಿಸಬೇಕು, ಸಾಪ್ಟ್ ಸ್ಕೀಲ್ ಹಾಗೂ ಡಿಜಿಟಲ್ ಸ್ಕೀಲ್ ಕಲಿಯಬೇಕು ಎಂದರು.ತರಬೇತಿ ಕೇಂದ್ರದ ಮಾಜಿ ವಿದ್ಯಾರ್ಥಿ, ಪಾಟೀಲ್ ಕಾರ್ ಸೆಂಟರ್ ಮಾಲೀಕ ಕಿಶನ ಪಾಟೀಲ ಮಾತನಾಡಿ, ನಾನು ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಪಡೆದ ಶಿಕ್ಷಣ ಹಾಗೂ ಕೌಶಲ್ಯ ಜ್ಞಾನವು ನನಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಿದೆ. ವಿದ್ಯಾರ್ಥಿಗಳು ತಮ್ಮ ತರಬೇತಿ ಮುಕ್ತಾಯವಾದ ನಂತರ ಸ್ವಂತ ಉದ್ಯೋಗ ಆರಂಭಿಸಲು ಗಮನಹರಿಸಬೇಕು ಎಂದರು.
ಸಂಸ್ಥೆಯ ಪ್ರಾಚಾರ್ಯ ದಿನೇಶ್ ಆರ್. ನಾಯ್ಕ್ ಮಾತನಾಡಿ, ಇದೊಂದು ವಿಶೇಷ ದಿನವಾಗಿದ್ದು, ಕಳೆದ ವರ್ಷ ಇಂಡಿಯಾ ಸ್ಕೀಲ್ ಸ್ಪರ್ಧೆಯಲ್ಲಿ ಕನಾಟಕವನ್ನು ಪ್ರತಿನಿಧಿಸಿದ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳಿಗೆ ಬೆಂಗಳೂರಿನ ವಿಧಾನ ಸೌಧದಲ್ಲಿ ನಡೆಯುವ ಸಮಾರಂಭಕ್ಕೆ ವಿಶೇಷ ಆಮಂತ್ರಣ ನೀಡಿರುವುದು ಸಂತಸದ ಬೆಳವಣಿಗೆಯಾಗಿದೆ ಎಂದರು.ವಿದ್ಯಾರ್ಥಿಗಳಿಗೆ ಕೌಶಲ್ಯ ಪರೀಕ್ಷಿಸುವ ವಿವಿಧ ವೃತ್ತಿಯವರು ರಚಿಸಿದ ತಾಂತ್ರಿಕ ಮಾದರಿ ರಚನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಎಂಎಂವಿ ವಿಭಾಗ ಪ್ರಥಮ ಸ್ಥಾನ, ಆನಂತರ ಸ್ಥಾನಗಳನ್ನು ಕ್ರಮವಾಗಿ ಆರ್‌ಎಸಿಟಿ, ಎಲೆಕ್ಟ್ರಿಷಿಯನ್ ಮತ್ತು ಡ್ರೇಸ್ ಮೇಕಿಂಗ್ ವಿಭಾಗಗಳು ಪಡೆದವು. ವಿದ್ಯಾರ್ಥಿನಿ ಅರ್ಪಿತಾ ಜವಳಿ ಅವರು ಯುವ ಕೌಶಲ್ಯ ದಿನಾಚರಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ಅನಿಸಿಕೆಗಳನ್ನು ಹೇಳಿದರು.ತರಬೇತಿ ಕೇಂದ್ರದ ಉಪನ್ಯಾಸಕರು ಹಾಗೂ ಸಾಂಸ್ಕೃತಿಕ ವಿಭಾಗದ ದಿನೇಶ್ ಡಿ. ನಾಯ್ಕ ಕಾರ್ಯಕ್ರಮ ಆಯೋಜಿಸಿದ್ದರು. ಕಿರಿಯ ತರಬೇತಿ ಅಧಿಕಾರಿ ಅವಿನಾಶ ಲೋನಿ ಕಾರ್ಯಕ್ರಮ ನಿರ್ವಹಿಸಿದರು.