ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ಫೆ.27 ರಂದು ಜೆಡಿಎಸ್ ಪಕ್ಷದ ಕಿತ್ತೂರು ಕರ್ನಾಟಕದ ಬೃಹತ್ ಜನತಾ ಸಮಾವೇಶ ನಡೆಸಲಾಗುತ್ತಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ ಕುಮಾರಸ್ವಾಮಿ ಹೇಳಿದರು.ನಗರದ ನೂತನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಜಯಪುರ, ಬಾಗಲಕೋಟೆ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಈ ಭಾಗದ 7 ಜಿಲ್ಲೆಗಳನ್ನೊಳಗೊಂಡ ಜನತಾ ಸಮಾವೇಶ ನಡೆಸಲಾಗುತ್ತಿದೆ. ಈ ಸಮಾವೇಶದಲ್ಲಿ ದೇವೇಗೌಡರು ಹಾಗೂ ಕುಮಾರಸ್ವಾಮಿಯವರು ಸೇರಿದಂತೆ ಪಕ್ಷದ ನಾಯಕರೆಲ್ಲ ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ 7 ಜಿಲ್ಲೆಗಳಿಂದ ಸುಮಾರು ಲಕ್ಷ ಕಾರ್ಯಕರ್ತರು ಆಗಮಿಸಲಿದ್ದಾರೆ. ಸಮಾವೇಶಗಳಿಗೆ ಸಂಬಂಧಿಸಿದಂತೆ ಈಗಾಗಲೇ ಹಲವು ಜಿಲ್ಲೆಗಳಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಚರ್ಚೆಗಳನ್ನು, ಹಲವು ಸಭೆಗಳನ್ನು ಮಾಡಲಾಗಿದೆ. ಎಲ್ಲರ ಸಹಾಯ, ಸಹಕಾರದಿಂದ ಹಾಸನದಲ್ಲಿ ಮಾಡಲಾಗಿದ್ದ ಮೊದಲ ಜನತಾ ಸಮಾವೇಶ ಈಗಾಗಲೇ ಯಶಸ್ವಿಯಾಗಿದೆ. ಹಾಗಾಗಿ ಪಕ್ಷಕ್ಕೆ 25 ವರ್ಷ ತುಂಬಿದ ಹಿನ್ನೆಲೆ ಈ ಭಾಗದಲ್ಲೂ ಬೆಳ್ಳಿಹಬ್ಬ ಮಾಡಬೇಕು ಎಂದು ನಿರ್ಣಯಿಸಲಾಗಿದೆ ಎಂದರು.ಯಾವುದೇ ಚುನಾವಣೆಯ ಗೆಲುವು ಸೋಲು ನಾಯಕತ್ವವನ್ನು ನಿರ್ಣಯಿಸುವುದಿಲ್ಲ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಈಗಾಗಲೇ ಮೊದಲ ಹಂತದಲ್ಲಿ ರಾಜ್ಯಾದ್ಯಂತ ಸಂಚರಿಸಿ ಕೆಲಸ ಮಾಡಿದ್ದೇನೆ. ಯಾವುದೇ ಸ್ಥಾನಮಾನ ನೋಡಿಕೊಂಡು ಕೆಲಸ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಎಚ್.ಡಿ.ದೇವೆಗೌಡರು ಸಿದ್ದರಾಮಯ್ಯನವರನ್ನು ಉಪಮುಖ್ಯಮಂತ್ರಿ ಮಾಡಿರದೆ ಹೋಗಿದ್ದರೇ ಇಂದು ಅವರು ಸಿಎಂ ಆಗುತ್ತಿದ್ದರಾ? ಹಾಗೆಯೇ ಎಂ.ಪಿ.ಪ್ರಕಾಶ ಅವರನ್ನೂ ಡಿಸಿಎಂ ಮಾಡಲಾಗಿತ್ತು. ಹಾಗಂತ ಅವರ್ಯಾರೂ ನಮ್ಮ ಸಮಾಜದವರಲ್ಲ. ಜನತಾದಳ ಪಕ್ಷ ಯಾವಾಗಲೂ ಸರ್ವ ಜನಾಂಗಕ್ಕೂ, ಸರ್ವ ಸಮಾಜಕ್ಕೂ ನ್ಯಾಯ ಒದಗಿಸುತ್ತಲೇ ಬಂದಿದೆ. ಹಳೆ ಮೈಸೂರು ಪ್ರಾಂತ್ಯದಲ್ಲಿ 52 ರಲ್ಲಿ 40 ಕ್ಷೇತ್ರಗಳಲ್ಲಿ ನಾವು ಗೆದ್ದಿದ್ದೇವೆ. ಕಲ್ಯಾಣ ಕರ್ನಾಟಕದಲ್ಲಿ 12 ಹಾಗೂ ಮಧ್ಯ ಕರ್ನಾಟಕದಲ್ಲಿ 8 ಸ್ಥಾನಗಳನ್ನು ನಾವು ಯಾವಾಗಲೂ ಗೆಲ್ಲುತ್ತಲೇ ಇದ್ದೇವೆ. ಜನತಾದಳ ಪಕ್ಷ ತನ್ನದೇ ಶಕ್ತಿ, ತನ್ನ ವರ್ಚಸ್ಸನ್ನು ಉಳಿಸಿಕೊಂಡಿದೆ ಎಂದರು.ಜನತಾದಳ ಪಕ್ಷದಲ್ಲಿ ಬೆಳೆದ 50ಕ್ಕೂ ಹೆಚ್ಚು ಜನ ಗುರುತಿಸಿಕೊಂಡು ಈಗ ಬೇರೆ ಬೇರೆ ಪಕ್ಷಗಳಲ್ಲಿ ಬೆಳೆದಿದ್ದಾರೆ. ಈಗಿರುವ ಸರ್ಕಾರದಲ್ಲಿ 9 ಜನ ಸಚಿವರು ಜೆಡಿಎಸ್ ಪ್ರಾಡಕ್ಟಗಳೇ. ಹಾಗಂತ ಪಕ್ಷ ವೀಕ್ ಆಗಿಲ್ಲ, ದೇವೇಗೌಡರು ಕಟ್ಟಿ ಬೆಳೆಸಿದ ಈ ಪ್ರಾದೇಶಿಕ ಪಕ್ಷ 25 ವರ್ಷ ಪೂರೈಸಿದೆ. ಇದು ನಾಯಕರನ್ನು ತಯಾರು ಮಾಡುವ ಕಾರ್ಖಾನೆ ಇದ್ದಂತೆ. ಇನ್ನೂ ಜೆಡಿಎಸ್ ಪಕ್ಷ ಸದೃಢವಾಗಿದೆ ಎಂದು ಪಕ್ಷದಲ್ಲಿ ಬೆಳೆದು ಬೇರೆ ಪಕ್ಷಕ್ಕೆ ಸೇರುವವರ ಕುರಿತು ವಿವರಿಸಿದರು.ಇಂದಿನ ಸಿಎಂ ಆಡಳಿತದಲ್ಲಿ ಪ್ರತಿ ವರ್ಷ ಒಂದು ಲಕ್ಷ ಕೋಟಿ ಸಾಲ ಆಗಿದೆ. ದಿನಕ್ಕೆ ₹300 ಕೋಟಿ ಸಾಲ ಆಗಿದೆ. ಪ್ರತಿನಿತ್ಯ ಕುರ್ಚಿ ಕಿತ್ತಾಟ ಗದ್ದಲದಲ್ಲೇ ಇವರು ಕಾಲ ಕಳೆಯುತ್ತಿದ್ದಾರೆ. ಇದರಿಂದಾಗಿ ಸಂಪದ್ಭರಿತ ರಾಜ್ಯ ಬಡವಾಗುತ್ತಿದೆ. ರಾಜ್ಯ ಸರ್ಕಾರದ 1000 ದಿನದ ಸಂಭ್ರಮವೆಂದರೆ ಜನತೆ ಮೇಲೆ ಸಾಲ ಹೊರೆಸಿದ್ದೇ ಇವರ ಸಾಧನೆ ಎಂದು ವ್ಯಂಗ್ಯವಾಡಿದರು.ಗೋಷ್ಠಿಯಲ್ಲಿ ಶಾಸಕ ರಾಜುಗೌಡ ಪಾಟೀಲ, ಮಾಜಿ ಶಾಸಕ ದೇವಾನಂದ ಚವ್ಹಾಣ, ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ, ಮುಖಂಡರಾದ ವೆಂಕಟರಾವ ನಾಡಗೌಡ, ಬಿ.ಡಿ.ಪಾಟೀಲ, ಅಪ್ಪುಗೌಡ ಪಾಟೀಲ, ಮಲ್ಲಿಕಾರ್ಜುನ ಯಂಡಿಗೇರಿ, ಸುನಿತಾ ಚವ್ಹಾಣ ಸೇರಿದಂತೆ ಹಲವರು ಇದ್ದರು.ಮುಖಂಡರು, ಕಾರ್ಯಕರ್ತರ ಜತೆ ನಿಖಲ್ ಸಭೆ
ನಗರದ ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯದ ಭವನದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ ಕುಮಾರಸ್ವಾಮಿಯವರು ಕಿತ್ತೂರು ಕರ್ನಾಟಕ ವಿಭಾಗದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು. ಫೆ.27 ರಂದು ನಡೆಯಲಿರುವ ಕಿತ್ತೂರು ಕರ್ನಾಟಕ ಭಾಗದ ಪಕ್ಷದ ರಜತ ಮಹೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಸಿ, ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಕೂಲಂಕಷವಾಗಿ ಚರ್ಚಿಸಿದರು. ಈ ವೇಳೆ ಕೋರ್ ಕಮಿಟಿ ಅಧ್ಯಕ್ಷ ಜೆ.ಕೆ.ಕೃಷ್ಣಾರೆಡ್ಡಿ, ಮಾಜಿ ಸಚಿವ ವೆಂಕಟರಾವ ನಾಡಗೌಡ, ಶಾಸಕ ರಾಜುಗೌಡ ಪಾಟೀಲ್, ಮಾಜಿ ಶಾಸಕ ದೇವಾನಂದ ಚವ್ಹಾಣ, ರಾಜ್ಯ ಉಪಾಧ್ಯಕ್ಷೆ ಜ್ಯೋತಿ ಪ್ರಕಾಶ ಮಿರ್ಜಿ, ಪಕ್ಷದ ಮುಖಂಡರಾದ ಬಿ.ಡಿ.ಪಾಟೀಲ, ಸೋಮನಗೌಡ ಪಾಟೀಲ, ಸುನೀತಾ ಚವ್ಹಾಣ, ಅಪ್ಸರಾಬೇಗಂ ಛಪ್ಪರಬಂದ, ಮಲ್ಲಿಕಾರ್ಜುನ ಯಂಡಿಗೇರಿ, ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ, ಶಂಕರ ಮಾಡಲಗಿ, ಕೆ.ಪಿ.ಮಗೆಣ್ಣನವರ, ಹನಮಂತ ಮಾವಿನಮರದ ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಜಿಲ್ಲೆಗೂ ದೇವೇಗೌಡರಿಗೂ ಅವಿನಾಭಾವ ಸಂಬಂಧವಿದೆ. ಆಲಮಟ್ಟಿ ಎತ್ತರಕ್ಕೆ ದೇವೇಗೌಡರು ಕೊಡುಗೆ ಕೊಟ್ಟಿದ್ದಾರೆ. ಹಾಗಾಗಿ ಜಿಲ್ಲೆಯಲ್ಲಿ ಪಕ್ಷ ಶಕ್ತಿಯುತವಾಗಿದೆ. 2028ರಲ್ಲಿ ಜನರು ಪಕ್ಷಕ್ಕೆ ಆಶೀರ್ವದಿಸಲಿದ್ದಾರೆ. ಮಾಜಿ ಪಿಎಂ ಎಚ್.ಡಿ.ದೇವೇಗೌಡರ ಮಾರ್ಗದರ್ಶನದಲ್ಲಿ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಜೆಡಿಎಸ್ ಸಮಾವೇಶಗಳನ್ನು ಮಾಡಲಾಗುತ್ತಿದೆ.
-ನಿಖಿಲ ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರು.