ಕರ್ನಾಟಕದ ಮಧ್ಯಭಾಗ ಶಿವಮೊಗ್ಗದಲ್ಲೇ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ವಕೀಲರ ಸಂಘ ಶನಿವಾರ ನಗರದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಜಾಥಾಕ್ಕೆ ವಿವಿಧ ಸಂಘಟನೆಗಳು ಬೆಂಬಲ ನೀಡಿದವು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕರ್ನಾಟಕದ ಮಧ್ಯಭಾಗ ಶಿವಮೊಗ್ಗದಲ್ಲೇ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ವಕೀಲರ ಸಂಘ ಶನಿವಾರ ನಗರದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಜಾಥಾಕ್ಕೆ ವಿವಿಧ ಸಂಘಟನೆಗಳು ಬೆಂಬಲ ನೀಡಿದವು. ಕಳೆದ 13 ದಿನಗಳಿಂದ ನ್ಯಾಯಪೀಠಕ್ಕೆ ಆಗ್ರಹಿಸಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಶನಿವಾರ ಬೃಹತ್ ಜಾತಾ ಹಮ್ಮಿಕೊಳ್ಳುವುದರ ಮೂಲಕ ಮತ್ತಷ್ಟು ತೀವ್ರತೆಯನ್ನು ಪಡೆದುಕೊಂಡಿತು.ಜಿಲ್ಲಾ ನ್ಯಾಯಾಲಯದ ಆವರಣದಿಂದ ಹೊರಟ ಬೃಹತ್ ಜಾಥಾ ನಗರದ ಮಹಾವೀರ ವೃತ್ತ, ಸರ್ ಎಂ.ವಿಶ್ವೇಶ್ವರಯ್ಯ ರಸ್ತೆ, ಬಿ.ಎಚ್.ರಸ್ತೆಯ ಮೂಲಕ ಶಿವಪ್ಪನಾಯಕ ವೃತ್ತ, ನೆಹರೂ ರಸ್ತೆ, ಸೀನಪ್ಪಶೆಟ್ಟಿ ವೃತ್ತ (ಗೋಪಿಸರ್ಕಲ್), ಬಾಲರಾಜ್ ಅರಸ್ ರಸ್ತೆ, ಪುನಃ ಮಹಾವೀರ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆಗೆ ಸಾಗಿ ಅಲ್ಲಿ ಬಹಿರಂಗ ಸಭೆ ನಡೆಯಿತು. ಬೆಕ್ಕಿನಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ, ಬಸವ ಕೇಂದ್ರದ ಡಾ. ಶ್ರೀ ಬಸವ ಮರಳು ಸಿದ್ದ ಸ್ವಾಮೀಜಿ, ಜಡೆಮಠದ ಡಾ.ಮಹಾಂತ ಸ್ವಾಮೀಜಿ ಸಭೆಯ ಸಾನ್ನಿಧ್ಯ ವಹಿಸಿದ್ದರು.

ಸಭೆಯಲ್ಲಿ ಬಸವ ಕೇಂದ್ರದ ಡಾ. ಶ್ರೀ ಬಸವ ಮರಳು ಸಿದ್ದ ಸ್ವಾಮೀಜಿ ಮಾತನಾಡಿ, ಈಗಾಗಲೇ ಮಂಗಳೂರಿಗೆ ಸಂಚಾರಿ ನ್ಯಾಯಪೀಠ ಮಂಜೂರಾಗಿದ್ದು, ಮಧ್ಯ ಕರ್ನಾಟಕದ ದುರದೃಷ್ಟ. ಮಂಗಳೂರು ಮತ್ತು ಶಿವಮೊಗ್ಗ ನಡುವೆ ಹೋಲಿಕೆ ಮಾಡಿದರೆ ಶಿವಮೊಗ್ಗವೇ ಹೈಕೋರ್ಟ್ ಪೀಠ ಸ್ಥಾಪನೆಗೆ ಪ್ರಶಸ್ಥ ಸ್ಥಳವಾಗಿದೆ. ಒಂದು ವೇಳೆ ಶಿವಮೊಗ್ಗಕ್ಕೆ ಹೈಕೋರ್ಟ್ ಪೀಠ ಮಂಜೂರು ಮಾಡದೇ ಹೋದರೆ ಇನ್ನು ಮುಂದೆಯೂ ನಿರಂತರವಾಗಿ ಹೋರಾಟ ಹಮ್ಮಿಕೊಳ್ಳಲಾಗುವುದು ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.

ಕೆ.ವಿ.ವಸಂತ್‌ಕುಮಾರ್ ಮಾತನಾಡಿ, ನಾಗರಿಕ ಹಿತರಕ್ಷಣಾ ವೇದಿಕೆ ಮೊದಲ ದಿನದಿಂದಲೂ ಹೋರಾಟಕ್ಕೆ ಬೆಂಬಲ ನೀಡುತ್ತಾ ಬಂದಿದೆ. ಮಂಗಳೂರು ಪೀಠವನ್ನು ಒಪ್ಪಲು ಸಾಧ್ಯವಿಲ್ಲ ಎಂದರು.

ರೈತನಾಯಕ ಎಚ್.ಆರ್.ಬಸವರಾಜಪ್ಪ ಮಾತನಾಡಿ, ಈ ಹೋರಾಟ ಪಕ್ಷಾತೀತ-ಜಾತ್ಯತೀತವಾಗಿ ರೂಪುಗೊಂಡಿದ್ದು, ಎಲ್ಲಾ ಸಂಘಟನೆಗಳು ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದೆ. ಶಿವಮೊಗ್ಗ ಹೋರಾಟದ ಜಿಲ್ಲೆಯಾಗಿದ್ದು, ಬಹುತೇಕ ಚಳುವಳಿಗಳು ಇಲ್ಲಿಂದಲೇ ಪ್ರಾರಂಭವಾಗಿದ್ದವು. ಹೈಕೋರ್ಟ್ ಪೀಠದ ಬೇಡಿಕೆ ಮನ್ನಿಸದಿದ್ದರೆ ಹೋರಾಟ ತೀವ್ರವಾಗಿ ಬೇಡಿಕೆ ಈಡೇರುವವರೆಗೆ ಮುಂದುವರೆಯುತ್ತದೆ ಎಂದರು.

ಹಿರಿಯ ವಕೀಲ ಅಶೋಕ್ ಜಿ. ಭಟ್ ಮಾತನಾಡಿ, ಶಿವಮೊಗ್ಗದ ಜನ ಒಗ್ಗಟ್ಟಿನ ಹೋರಾಟ ಮಾಡಿ ಸರ್ಕಾರಕ್ಕೆ ವಾಸ್ತವಾಂಶ ಇಂದು ತೋರಿಸಿದ್ದಾರೆ. ಮಂಗಳೂರಿಗೆ ಸಂಪರ್ಕದ ವ್ಯವಸ್ಥೆ ಸರಿಯಿಲ್ಲ. ಶಿವಮೊಗ್ಗದಲ್ಲಿ ಪೀಠವಾದರೆ ಎಲ್ಲಾ ರೀತಿಯ ಸಂಪರ್ಕ ವ್ಯವಸ್ಥೆ ಇದೆ. ಐದು ಜಿಲ್ಲೆಗಳಿಗೂ ಉತ್ತಮ ಸಂಪರ್ಕ ವ್ಯವಸ್ಥೆ ಇದ್ದು, ಕೇಸುಗಳ ಅಂಕಿಅಂಶದ ದೃಷ್ಟಿಯಿಂದಲೂ ಶಿವಮೊಗ್ಗದಲ್ಲಿ ಪೀಠ ಸ್ಥಾಪನೆ ಆಗಲೇಬೇಕು ಎಂದರು.

ವಕೀಲ ಸಂಘದ ಅಧ್ಯಕ್ಷ ಜಿ.ಆರ್.ರಾಘವೇಂದ್ರಸ್ವಾಮಿ ಮಾತನಾಡಿ, ಮೊದಲು ಜಿಲ್ಲೆಯ ಎಲ್ಲಾ ತಾಲ್ಲೂಕಿನ ವಕೀಲರ ಸಭೆ ನಡೆಸಿ, ಈ ಸಮಸ್ಯೆ ಬಗ್ಗೆ ವಿವರಿಸಿದಾಗ ಎಲ್ಲರೂ ಬೆಂಬಲಿಸಿ ಹೋರಾಟಕ್ಕೆ ಸಿದ್ಧರಾದರು. ಹೈಕೋರ್ಟ್ ಪೀಠದ ಅನಿವಾರ್‍ಯತೆ ಮನಗಂಡ ಎಲ್ಲಾ ಸಂಘ-ಸಂಸ್ಥೆಗಳು ಕೈಜೋಡಿಸಿದವು. ವಕೀಲರು ತಮ್ಮ ದಿನನಿತ್ಯದ ಪ್ರಾಕ್ಟೀಸ್‌ನಲ್ಲೇ ಬ್ಯೂಸಿಯಾಗಿರುತ್ತಾರೆ. ಆದರೆ ಈಗ ಅನಿವಾರ್‍ಯತೆಯನ್ನು ಮನಗಂಡು ಹೋರಾಟಕ್ಕೆ ಕೈಜೋಡಿಸಿ ಬೀದಿಗಿಳಿದಿದ್ದಾರೆ. ಫಲ ಸಿಗುವವರೆಗೆ ನಾವು ಹೋರಾಟ ನಿಲ್ಲಿಸುವುದಿಲ್ಲ ಎಂದರು.

ಬಳಿಕ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗೆ 13 ದಿನಗಳಿಂದ ನಡೆಯುತ್ತಿರುವ ಹೋರಾಟದ ಸಂಪೂರ್ಣ ಚಿತ್ರಣವನ್ನು ನೀಡಿ ಮನವಿ ಸಲ್ಲಿಸಲಾಯಿತು. ಹೈಕೋರ್ಟ್ ಪೀಠಕ್ಕೆ ಜಿಲ್ಲಾಧಿಕಾರಿಗಳು ಜಾಗವನ್ನು ಗುರುತಿಸಿ ಸರ್ಕಾರಕ್ಕೆ ಸಕಾರಾತ್ಮಕವಾಗಿ ಶಿಫಾರಸು ಮಾಡಬೇಕೆಂದು ಆಗ್ರಹಿಸಲಾಯಿತು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಹೋರಾಟದ ಬಗ್ಗೆ ಸರ್ಕಾರಕ್ಕೆ ಅರಿವಿದೆ. ನಿಮ್ಮ ಮನವಿಯನ್ನು ಯಥಾವತ್ತಾಗಿ ಶಿಫಾರಸ್ಸಿನೊಂದಿಗೆ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ವಕೀಲರಾದ ವಾಸುದೇವಮೂರ್ತಿ, ಕೆ.ಪಿ.ಶ್ರೀಪಾಲ್, ರಾಜಕೀಯ ಮುಖಂಡರಾದ ಆಯನೂರು ಮಂಜುನಾಥ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ದೀಪಕ್‌ಸಿಂಗ್, ಜಿಲ್ಲಾ ಕಾಂಗ್ರೆಸ್ ಪಕ್ಷದ ಮುಖಂಡರಾದ ರಮೇಶ್ ಶಂಕರಘಟ್ಟ, ಬಿ.ಎ.ರಮೇಶ್ ಹೆಗ್ಡೆ, ಶ್ವೇತಾ ಬಂಡಿ, ಖಲೀಂಪಾಷಾ, ಶಿವಕುಮಾರ್, ನಾಗರಾಜ್ ಕಂಕಾರಿ, ಪಾಲಾಕ್ಷಿ, ರಾಷ್ಟ್ರಭಕ್ತರ ಬಳಗದ ಕೆ.ಈ. ಕಾಂತೇಶ್, ಸೈಯದ್ ವಾಹಿದ್ ಅಡ್ಡು, ಡಿಎಸ್‌ಎಸ್ ಪ್ರಮುಖರಾದ ಎಂ.ಗುರುಮೂರ್ತಿ, ಜಯ ಕರ್ನಾಟಕ ಜನಪರ ವೇದಿಕೆ ಸುರೇಶ್ ಶೆಟ್ಟಿ, ಸಿಐಟಿಯು ಕಾರ್ಯಕರ್ತರು, ಜಿಲ್ಲಾ ಮಲೆನಾಡು ಮುದ್ರಕರ ಸಂಘದ ಗಣೇಶ್ ಬಿಳಗಿ ಮತ್ತು ಪದಾಧಿಕಾರಿಗಳು, ಜಿಲ್ಲಾ ವಾಣಿಜ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್, ಹರ್ಷ ಕಾಮತ್ ಮತ್ತು ಪದಾಧಿಕಾರಿಗಳು, ಜಿಲ್ಲಾ ಛಾಯಾ ಗ್ರಾಹಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಜವಳಿ ವರ್ತಕರ ಸಂಘದ ಪದಾಧಿಕಾರಿಗಳು, ಬೀದಿಬದಿ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು, ಜೈನ್ ವರ್ತಕರ ಸಂಘ, ಜೆಸಿಐ ಮತ್ತು ರೋಟರಿ ಸಂಘಟನೆಗಳು, ವೀರಶೈವ ಮಹಾಸಭಾ, ಸ್ಮಾರ್ಥ ಬ್ರಾಹ್ಮಣರ ಸಂಘ, ಶಿವಮೊಗ್ಗ ಪ್ರೆಸ್ ಟ್ರಸ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ(ರಿ), ದಸಂಸ.(ಅಂಬೇಡ್ಕರ್ ವಾದ), ಪಿಟಿಸಿಎಲ್‌ ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿ, ಪೀಸ್ ಆರ್ಗನೈಜೇಷನ್, ಆದಿ ಜಾಂಬವ, ಮಲ್ನಾಡ್ ಕೌಂಟಿ ನಿವಾಸಿಗಳ ಸಂಘ, ದೀವರ ಕ್ಷೇಮಾಭಿವೃದ್ಧಿ ಸಂಘ, ಜಿಲ್ಲಾ ಒಕ್ಕಲಿಗರ ಸಂಘ, ಸೇರಿದಂತೆ 35 ಕ್ಕೂ ಹೆಚ್ಚು ಸಂಘಟನೆಗಳು ಜಾಥಾದಲ್ಲಿ ಭಾಗವಹಿಸಿದ್ದವು.

-----

ಒಂದು ಕಡೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದರೆ ಇನ್ನೊಂದೆಡೆ ಹೈಕೋರ್ಟ್ ಪೀಠದ ಹೋರಾಟದ ಕಾವು ನಮ್ಮನ್ನು ಸುಡುತ್ತಿದೆ. ಜನಪ್ರತಿನಿಧಿಗಳಾಗಿ ಇಂತಹ ಹೋರಾಟಗಳನ್ನು ಹಮ್ಮಿಕೊಂಡಿರುವುದು ಅಭಿನಂದನೀಯ. ಹೋರಾಟಕ್ಕೆ ಅವಕಾಶ ಕೊಡದೆ ಆದಷ್ಟು ಬೇಗ ಪೀಠ ಸ್ಥಾಪನೆಯ ಪ್ರಸ್ತಾವನೆಯನ್ನು ಪುನರ್ ಪರಿಶೀಲಿಸಬೇಕು. ಹೋರಾಟ ಮಾರಕವಾಗುವುದಕ್ಕೂ ಮೊದಲು ಬಹುಬೇಗ ಸಮಸ್ಯೆಗೆ ಸರ್ಕಾರ ಪರಿಹಾರ ನೀಡಬೇಕು. ನೂತನ ಸರ್ಕಾರದ ಹೊಸ ಮುಖ್ಯಮಂತ್ರಿಗಳಿಗೆ ನಾವು ಈ ಮೂಲಕವೇ ಪೀಠ ಸ್ಥಾಪನೆಯ ಪ್ರಸ್ತಾವನೆಯನ್ನು ಸಲ್ಲಿಸುತ್ತಿದ್ದೇವೆ.

-ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ ಬೆಕ್ಕಿನ ಕಲ್ಮಠ

-----------

ಎಲ್ಲಾ ಭಿನ್ನಾಭಿಪ್ರಾಯ, ಪಕ್ಷಬೇಧಗಳನ್ನು ಮರೆತು ಈ ಹೋರಾಟಕ್ಕೆ ಬೆಂಬಲ ಸಿಗುತ್ತಿದೆ. ಉತ್ತರ ಕರ್ನಾಟಕಕ್ಕೆ, ಕಲ್ಯಾಣ ಕರ್ನಾಟಕಕ್ಕೆ ಪೀಠ ಸ್ಥಾಪನೆಮಾಡಿ ಅವರ ಬೇಡಿಕೆ ಈಡೇರಿಸಿದ್ದೀರಿ. ಮಂಗಳೂರಿಗೆ ಪೀಠ ಮಂಜೂರು ಮಾಡಿದ್ದು, ಅವೈಜ್ಞಾನಿಕ. ಸರ್ಕಾರ ಇನ್ನೊಮ್ಮೆ ಇದನ್ನು ಪರಿಶೀಲಿಸಿ ಶಿವಮೊಗ್ಗಕ್ಕೆ ಸಂಚಾರಿಪೀಠ ಮಂಜೂರು ಮಾಡಬೇಕು. ಈ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ನಿಲ್ಲಿಸುತ್ತೇವೆ. ಆದರೆ ಪೀಠಕ್ಕಾಗಿ ಹೋರಾಟ ನಿರಸನ ಮುಂದುವರಿಯುತ್ತದೆ. ಬೇಡಿಕೆ ಈಡೇರುವವರೆಗೆ ಹೋರಾಟ ನಿಲ್ಲುವುದಿಲ್ಲ.

-ಕೆ.ಬಸಪ್ಪಗೌಡ, ಗೌರವಾಧ್ಯಕ್ಷರು, ಹೈಕೋರ್ಟ್ ಸಂಚಾರಿಪೀಠ ಹೋರಾಟ ಸಮಿತಿ.

---------

ಶಾಂತಿಗೆ ಹೆಸರಾದ ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯ ಹೋರಾಟದ ಕಿಚ್ಚು ಹೆಚ್ಚಾಗಿ ಶಾಂತಿ ಕದಡಬಾರದು. ನಾವು ಶಾಂತಿಗೂ ಸಿದ್ಧ. ಸಮರಕ್ಕೂ ಬದ್ಧ. ಶಿವಮೊಗ್ಗ ಮಧ್ಯ ಕರ್ನಾಟಕದ ಪ್ರಮುಖ ಸ್ಥಳವಾಗಿದ್ದರಿಂದ ಪ್ರಥಮ ಪ್ರಾಶಸ್ತ್ಯ ನೀಡಿ. ಶಿವಮೊಗ್ಗಕ್ಕೆ ತಕ್ಷಣ ಹೈಕೋರ್ಟ್ ಸಂಚಾರಿಪೀಠ ಮಂಜೂರು ಮಾಡಲು ಸರ್ಕಾರ ಮುಂದಾಗಬೇಕು.

-ಕೆ.ಈ. ಕಾಂತೇಶ್, ರಾಷ್ಟ್ರಭಕ್ತರ ಬಳಗ.