ಕಾಳಮ್ಮ ನಗರದ ಮಹಿಳೆ ರಂಜಿತಾ ಕೊಲೆ ಖಂಡಿಸಿ ಹಿಂದೂ ಸಂಘಟನೆಗಳು ಭಾನುವಾರ ಕರೆ ನೀಡಿದ್ದ ಯಲ್ಲಾಪುರ ಬಂದ್‌ಗೆ ನಾಗರೀಕರಿಂದ ಅಪಾರ ಸ್ಪಂದನೆ ವ್ಯಕ್ತವಾಯಿತು.

ರಂಜಿತಾ ಕೊಲೆ ಖಂಡಿಸಿ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಕಾಳಮ್ಮ ನಗರದ ಮಹಿಳೆ ರಂಜಿತಾ ಕೊಲೆ ಖಂಡಿಸಿ ಹಿಂದೂ ಸಂಘಟನೆಗಳು ಭಾನುವಾರ ಕರೆ ನೀಡಿದ್ದ ಯಲ್ಲಾಪುರ ಬಂದ್‌ಗೆ ನಾಗರೀಕರಿಂದ ಅಪಾರ ಸ್ಪಂದನೆ ವ್ಯಕ್ತವಾಯಿತು.

ಪಟ್ಟಣದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಭಾನುವಾರ ಬೆಲ್ ರಸ್ತೆಯಲ್ಲಿ ನಡೆಯಬೇಕಿದ್ದ ವಾರದ ಸಂತೆಯೂ ನಡೆಯಲಿಲ್ಲ. ವಾಹನಗಳ ಓಡಾಟ, ಬಸ್ ಸಂಚಾರ ಎಂದಿನಂತೆ ಇತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. 300ಕ್ಕೂ ಹೆಚ್ಚು ಪೊಲೀಸರು ಪಟ್ಟಣದಲ್ಲಿ ಪಥ ಸಂಚಲನ ನಡೆಸಿದರು.

ಪಟ್ಟಣದ ಬಸವೇಶ್ವರ ಸರ್ಕಲ್ ಬಳಿ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಈ ವೇಳೆ ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಇದೊಂದು ಜಿಹಾದ್ ಪ್ರಕರಣ. ಕೊಲೆಗಾರ ಆತ್ಮಹತ್ಯೆ ಮಾಡಿಕೊಂಡರೂ ಈ ಪ್ರಕರಣದ ಹಿಂದೆ ಯಾರಿದ್ದಾರೋ ಅವರಿಗೆ ತಕ್ಕ ಶಿಕ್ಷೆ ಆಗಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದಕ್ಕೆ ಇದು ಸಾಕ್ಷಿ ಎಂದರು.

ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಕೊಲೆಯಾದ ಮಹಿಳೆಯ ಮಗನಿಗೆ ಊಟ, ವಸತಿ ಹಾಗೂ ಉಚಿತ ಶಿಕ್ಷಣವನ್ನು ವಿಶ್ವದರ್ಶನ ಶಿಕ್ಷಣ ಸಂಸ್ಥೆಯಿಂದ ನೀಡಲಾಗುವುದು ಎಂದು ಘೋಷಿಸಿದರು.

ರಫೀಕ್ ರಂಜಿತಾಳನ್ನು ಕೊಂದು ತಾನೂ ಸತ್ತಿರುವ ಈ ಘಟನೆ ಆತ್ಮಹತ್ಯಾ ದಾಳಿಯ ಮಾದರಿ ಇದ್ದಂತೆ. ಕಾನೂನಿನ ಮೂಲಕ, ಮತ ಬ್ಯಾಂಕ್ ಉದ್ದೇಶದಿಂದ ರಾಜ್ಯ ಸರ್ಕಾರ ಹಿಂದೂಗಳನ್ನು ಹತ್ತಿಕ್ಕುವ ಕಾರ್ಯಕ್ಕೆ ಮುಂದಾಗಿದೆ. ಕಾನೂನು-ಸುವ್ಯವಸ್ಥೆ ಕಾಪಾಡುವ ಪೊಲೀಸರನ್ನು ತಮಗೆ ಬೇಕಾದಂತೆ ಬಳಸಿಕೊಳ್ಳಲಾಗುತ್ತಿದೆ. ಈ ಕೊಲೆ ಕೇವಲ ಯಲ್ಲಾಪುರಕ್ಕೆ ಸೀಮಿತವಾದುದಲ್ಲ. ರಾಜ್ಯದ ಹಿಂದೂಗಳು ಎಚ್ಚೆತ್ತುಕೊಳ್ಳದೇ ಹೋದಲ್ಲಿ ಇನ್ನಷ್ಟು ದುಃಸ್ಥಿತಿ ಬರುವ ಸಾಧ್ಯತೆ ಇದೆ ಎಂದರು.

ಮೃತ ಮಹಿಳೆಯ ಕುಟುಂಬಕ್ಕೆ ಸರ್ಕಾರದಿಂದ ಕನಿಷ್ಠ ₹50 ಲಕ್ಷ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಆರೋಪಿ ಸತ್ತರೂ ತ‌ನಿಖೆ ನಿಲ್ಲಬಾರದು. ಅಂತಹ ಕುಕೃತ್ಯ ಎಸಗುವಂತಹ ದುಷ್ಕರ್ಮಿಗಳು ಯಲ್ಲಾಪುರದಲ್ಲಿ ಅನೇಕರಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಆಗಬೇಕು ಎಂದರು.

ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ, ಪ್ರಮುಖರಾದ ರಾಮು ನಾಯ್ಕ, ಶ್ಯಾಮಿಲಿ ಪಟಾಣಕರ್, ಪ್ರಸಾದ ಹೆಗಡೆ, ಗೋಪಾಲಕೃಷ್ಣ ಬಗನಗದ್ದೆ, ನಾಗೇಶ ಪತ್ತಾರ, ಗಜಾನನ ನಾಯ್ಕ ತಳ್ಳಿಕೇರಿ, ಎಸ್.ಎನ್. ಭಟ್ಟ ಏಕಾನ, ವೆಂಕಟರಮಣ ಬೆಳ್ಳಿ, ಉಮೇಶ ಭಾಗ್ವತ, ಚಿದಾನಂದ ಹರಿಜನ, ಜಗನ್ನಾಥ ರೇವಣಕರ್, ಲೋಕೇಶ ಪಾಟಣಕರ್ ಮುಂತಾದವರು ಮಾತನಾಡಿ ಘಟನೆಯನ್ನು ಖಂಡಿಸಿದರು.

ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಎಸ್.ಪಿ. ದೀಪನ್, ಉಪವಿಭಾಗಾಧಿಕಾರಿ ಕಾವ್ಯಾರಾಣಿ ಪ್ರತಿಕ್ರಿಯಿಸಿ, ಆರೋಪಿ ಆತ್ಮಹತ್ಯೆ ಮಾಡಿಕೊಂಡರೂ, ಪ್ರಕರಣದ ತನಿಖೆ ಪೂರ್ಣವಾಗಿ ಮಾಡಲಾಗುವುದು. ಮೃತರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡುವ ಪ್ರಯತ್ನ ಮಾಡಲಾಗುವುದೆಂದು ಭರವಸೆ ನೀಡಿದರು.

500ಕ್ಕೂ ಹೆಚ್ಚು ಜನ ಸೇರಿದ್ದರು.

ಗುಳ್ಳಾಪುರದಲ್ಲೂ ಬೆಂಬಲ

ಮಹಿಳೆಯ ಹತ್ಯೆ ಖಂಡಿಸಿ ವಿವಿಧ ಹಿಂದೂ ಸಂಘಟನೆಗಳು ಕರೆ ನೀಡಿದ್ದ ಯಲ್ಲಾಪುರ ಬಂದ್‌ಗೆ ತಾಲೂಕಿನ ಗುಳ್ಳಾಪುರದಲ್ಲೂ ಬೆಂಬಲ ನೀಡಲಾಯಿತು.

ಗುಳ್ಳಾಪುರದ ಅಂಗಡಿಕಾರರು ಅಂಗಡಿ ಮುಂಗಟ್ಟು ಬಂದ್ ಮಾಡಿ ಬೆಂಬಲ ಸೂಚಿಸಿದರು. ಮೃತ ರಂಜಿತಾ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ನಡೆಸಲಾಯಿತು.

ಡೋಂಗ್ರಿ ಗ್ರಾಪಂ ಅಧ್ಯಕ್ಷ ವಿನೋದ ಭಟ್ಟ, ಸ್ಥಳೀಯ ಮುಖಂಡರಾದ ನಾಗಪತಿ ಹೆಗಡೆ, ವಿಶ್ವ ಭಟ್ಟ, ಕಮಲಾಕರ ನಾಯ್ಕ, ಚಂದು ನಾಯ್ಕ ಕೊಡ್ಲಗದ್ದೆ, ಮಹಾಬಲೇಶ್ವರ ಭಟ್ಟ, ಆರ್.ಸಿ. ಹೆಗಡೆ, ವಿ.ಎಸ್. ಭಟ್ಟ ಕಲ್ಲೇಶ್ವರ, ನಾರಾಯಣ ಹೆಗಡೆ, ಸದಾಶಿವ ಹೆಗಡೆ, ಸತೀಶ್ ಶೆಟ್ಟಿ, ರವಿ ನಾಯ್ಕ, ವಿಷ್ಣು ನಾಯ್ಕ, ರಾಘವೇಂದ್ರ ನಾಯ್ಕ, ರಾಘವೇಂದ್ರ ಶೆಟ್ಟಿ ಇತರರಿದ್ದರು.