ವಕ್ಫ್ ಬೋರ್ಡ್ ಹೆಸರಲ್ಲಿ ಭಾರೀ ಅವ್ಯವಹಾರ: ಕೇಂದ್ರದಿಂದ ತಿದ್ದುಪಡಿ ಮಸೂದೆ

| Published : Sep 16 2024, 01:46 AM IST

ವಕ್ಫ್ ಬೋರ್ಡ್ ಹೆಸರಲ್ಲಿ ಭಾರೀ ಅವ್ಯವಹಾರ: ಕೇಂದ್ರದಿಂದ ತಿದ್ದುಪಡಿ ಮಸೂದೆ
Share this Article
  • FB
  • TW
  • Linkdin
  • Email

ಸಾರಾಂಶ

ವಕ್ಫ್ ಬೋರ್ಡ್ 1995ರ ಕಾಯ್ದೆ ತಿದ್ದುಪಡಿಯಿಂದ ಯಾವುದೇ ಸಮಾಜಕ್ಕೆ ನೋವುಂಟು ಮಾಡುವ ಉದ್ದೇಶವಿಲ್ಲ. ವಕ್ಫ್ ಬೋರ್ಡ್ ಹೆಸರಲ್ಲಿ ನಡೆಯುತ್ತಿರುವ ಅವ್ಯವಹಾರಗಳಿಗೆ ಕಡಿವಾಣ ಹಾಕುವ ಉದ್ದೇಶ ಕೇಂದ್ರ ಸರ್ಕಾರದ್ದಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಕಲಘಟಗಿ: ವಕ್ಫ್ ಬೋರ್ಡ್ ಹೆಸರಲ್ಲಿ ಭಾರೀ ಅವ್ಯವಹಾರಗಳು ನಡೆದಿರುವ ಕಾರಣ ಕೇಂದ್ರ ಸರ್ಕಾರ ವಕ್ಫ್ ಬೋರ್ಡ್ ತಿದ್ದುಪಡಿ ಮಸೂದೆ ಜಾರಿಗೆ ಮುಂದಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು.

ತಾಲೂಕಿನ ಉಗ್ನಿಕೇರಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ವಕ್ಫ್ ಬೋರ್ಡ್ 1995ರ ಕಾಯ್ದೆ ತಿದ್ದುಪಡಿಯಿಂದ ಯಾವುದೇ ಸಮಾಜಕ್ಕೆ ನೋವುಂಟು ಮಾಡುವ ಉದ್ದೇಶವಿಲ್ಲ. ವಕ್ಫ್ ಬೋರ್ಡ್ ಹೆಸರಲ್ಲಿ ನಡೆಯುತ್ತಿರುವ ಅವ್ಯವಹಾರಗಳಿಗೆ ಕಡಿವಾಣ ಹಾಕುವ ಉದ್ದೇಶ ಕೇಂದ್ರ ಸರ್ಕಾರದ್ದಾಗಿದೆ. ಈ ಬಗ್ಗೆ ಜಾಗೃತಿ ಕೂಡ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ರಾಜ್ಯ ಸೇರಿದಂತೆ ದೇಶದ ವಿವಿಧೆಡೆ ವಕ್ಫ್ ಬೋರ್ಡ್ ಹೆಸರಲ್ಲಿ ದೊಡ್ಡ ಮಟ್ಟದ ಅವವ್ಯಹಾರಗಳು ನಡೆದಿವೆ. ಬೆಂಗಳೂರಿನ ವಿಲ್ಸನ್ ಮ್ಯಾನರ್ ಹೋಟೆಲ್, ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದಲ್ಲಿ ಆಸ್ತಿಯೊಂದನ್ನು ವಕ್ಫ್ ಬೋರ್ಡ್‌ಗೆ ಸೇರಿಸಲಾಗಿದೆ. ಯಾವುದೇ ಒಂದು ಆಸ್ತಿ ಅವ್ಯವಹಾರದ ಮೂಲಕ ದುರುಪಯೋಗಕ್ಕೆ ಬಲಿಯಾಗಬಾರದು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವಕ್ಫ್ ಬೋರ್ಡ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ ಎಂದು ಹೇಳಿದರು.

ವಕ್ಫ್ ಬೋರ್ಡ್ ಹೆಸರಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಸರ್ಕಾರಕ್ಕೆ ಲಿಖಿತವಾಗಿ ಪತ್ರಗಳನ್ನು ಬರೆಯುವ ಮೂಲಕ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲು ಮುಂದಾಗಬೇಕಿದೆ. ಅಲ್ಲದೇ ವಕ್ಫ್ ಬೋರ್ಡ್ ಕಾಯ್ದೆಗೆ ಜನರು ಬೆಂಬಲ ವ್ಯಕ್ತಪಡಿಸಬೇಕು ಎಂದರು.

ಇದೇ ವೇಳೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಬಿಜೆಪಿಯವರಿಗೆ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂಬ ಹೇಳಿಕೆಗೆ ಉತ್ತರಿಸಿದ ಜೋಶಿ, ಅಂತಹ ಅಸಂಬದ್ಧ ಹೇಳಿಕೆಗಳಿಗೆ ನಾನು ಉತ್ತರಿಸುವುದಿಲ್ಲ ಎಂದು ಹೇಳಿದರು.

ಮಾಜಿ ಎಂಎಲ್‌ಸಿ ನಾಗರಾಜ ಛಬ್ಬಿ ಮಾತನಾಡಿ, ದೇಶದ ಪ್ರಧಾನಿಗಳ ಬಗ್ಗೆ ಮಾತನಾಡುವ ಸಚಿವ ಸಂತೋಷ ಲಾಡ್, ತಮ್ಮದೇ ಕಾಂಗ್ರೆಸ್ ಸರ್ಕಾರವಿದ್ದರೂ ಕಲಘಟಗಿ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲು ಆಗುತ್ತಿಲ್ಲ. ಕ್ಷೇತ್ರ ಹಸಿರು ಬರಗಾಲ, ಅತಿವೃಷ್ಟಿಯಿಂದ ತತ್ತರಿಸಿದ್ದರೂ ಸಚಿವರಿಗೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಇವುಗಳಿಂದ ನುಣುಚಿಕೊಳ್ಳಲು ಇಲ್ಲ-ಸಲ್ಲದ ಮಾತು ಹೇಳಿಕೆ ನೀಡುತ್ತಿದ್ದಾರೆ ಎಂದು ಸಚಿವ ಲಾಡ್ ವಿರುದ್ಧ ಹರಿಹಾಯ್ದರು.

ಇದೇ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಜಿಪಂ ಮಾಜಿ ಸದಸ್ಯ ಐ.ಸಿ. ಗೋಕುಲ, ಬಿಜೆಪಿ ಮುಖಂಡರಾದ ಶಶಿಧರ ನಿಂಬಣ್ಣವರ, ಅಣ್ಣಪ್ಪ ಓಲೇಕಾರ, ಕಿರಣ ಪಾಟೀಲ ಕುಲಕರ್ಣಿ, ಮದನ ಪಾಟೀಲಕುಲಕರ್ಣಿ, ರವಿ ಅಲ್ಲಾಪುರ ಇತರರಿದ್ದರು.