ಹರಿಹರ ಜಾತ್ರೆ: ಕುರಿ, ಕೋಳಿಗಳ ಭರ್ಜರಿ ವ್ಯಾಪಾರ

| Published : Mar 13 2025, 12:47 AM IST

ಸಾರಾಂಶ

ಸುತ್ತಲ 64 ಹಳ್ಳಿಗಳ ಒಡತಿ, ನಗರದ ಗ್ರಾಮದೇವತೆ ಊರಮ್ಮ ದೇವಿ ಜಾತ್ರೆಗೆ ದಿನಗಣನೆ ಪ್ರಾರಂಭವಾಗಿದ್ದು, ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆದ ಕುರಿ ಸಂತೆಯಲ್ಲಿ ಕುರಿ, ಕೋಳಿ ಹಾಗೂ ಟಗರುಗಳ ಕೋಟ್ಯಂತರ ರು.ಗಳ ಭರ್ಜರಿ ವ್ಯಾಪಾರ ವಹಿವಾಟು ನಡೆಯಿತು.

ಕನ್ನಡಪ್ರಭ ವಾರ್ತೆ ಹರಿಹರ ಸುತ್ತಲ 64 ಹಳ್ಳಿಗಳ ಒಡತಿ, ನಗರದ ಗ್ರಾಮದೇವತೆ ಊರಮ್ಮ ದೇವಿ ಜಾತ್ರೆಗೆ ದಿನಗಣನೆ ಪ್ರಾರಂಭವಾಗಿದ್ದು, ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆದ ಕುರಿ ಸಂತೆಯಲ್ಲಿ ಕುರಿ, ಕೋಳಿ ಹಾಗೂ ಟಗರುಗಳ ಕೋಟ್ಯಂತರ ರು.ಗಳ ಭರ್ಜರಿ ವ್ಯಾಪಾರ ವಹಿವಾಟು ನಡೆಯಿತು.

ಮಾರಾಟಗಾರರು ಕರಿಕುರಿ, ಕೆಂದುಕುರಿ. ಬಿಳಿಕುರಿ. ಬನ್ನೂರು ಕುರಿ, ಉಡ್ಡಿ ಟಗರುಗಳನ್ನು ಮಾರುಕಟ್ಟೆಗೆ ತಂದಿದ್ದರು. ಇವುಗಳಲ್ಲಿ ಜವಾರಿ ಹಾಗೂ ಕರಿಕುರಿಗೆ ಬೇಡಿಕೆ ಹೆಚ್ಚು ಇತ್ತು. ನಾಟಿ ತಳಿಯ ಕುರಿ ಮತ್ತು ಮೇಕೆಗಳು ಸಹ ಗ್ರಾಹಕರನ್ನು ಸೆಳೆದವು. ಅನೇಕರು ಉಡ್ಡಿಯಾಡುವ ಟಗರುಗಳನ್ನು ಖರೀದಿಸಿದರು.

ಐದು, ಹತ್ತು ಸಾವಿರ ರು. ಇರುವ ಜವಾರಿ ಕರಿಕುರಿ ಬೆಲೆ ಜಾತ್ರೆ ಹಿನ್ನೆಲೆ ಎರಡ್ಮೂರು ಪಟ್ಟು ಹೆಚ್ಚು ದರಕ್ಕೆ ಮಾರಾಟವಾದವು. ಉಡ್ಡಿ ಆಡುವ ಕಾಳಗದ ಟಗರಿನ ಮೌಲ್ಯ ₹50 ಸಾವಿರದಿಂದ ₹1 ಲಕ್ಷಕ್ಕೂ ಹೆಚ್ಚು, ಉಳಿದಂತೆ ಮೇಕೆಗಳು ₹8 ಸಾವಿರದಿಂದ ₹20 ಸಾವಿರವರೆಗೆ ಮಾರಾಟವಾದವು.

ಸಾಮಾನ್ಯವಾಗಿ ಸಿಗುವ ಫಾರಂ ಕೋಳಿಗಳ ಬೆಲೆ ₹150ರಿಂದ ₹250 ರವರೆಗೆ ಇದ್ದರೆ, ನಾಟಿ (ಜವಾರಿ) ಕೋಳಿಗಳ ಬೆಲೆ ತೂಕಕ್ಕೆ ಅನುಗುಣವಾಗಿ 1ಕ್ಕೆ ₹350 ರಿಂದ ₹650 ವರಗೆ ಮಾರಾಟವಾದವು. ಕೆಲವರು ಪಕ್ಕದ ರಾಣೆಬೇನ್ನೂರು, ಹರಪನಹಳ್ಳಿ, ದೊಗ್ಗಳ್ಳಿ, ದಾವಣಗೆರೆಯಲ್ಲಿ ಕುರಿಗಳನ್ನು ಖರೀದಿ ಮಾಡುವ ಸಾಧ್ಯತೆ ಇದೆ. ಹಬ್ಬಕ್ಕೆ 10,000ಕ್ಕೂ ಹೆಚ್ಚು ಕುರಿಗಳು ದೇವಿಗೆ ಅರ್ಪಣೆಯಾಗುವ ಸಾಧ್ಯತೆ ಇದೆ.

- - - -12ಎಚ್‍ಆರ್‍ಆರ್ 01 & 01ಎ: