ಬೆಂಗಳೂರು : ಕೃಷಿ ಮೇಳಕ್ಕೆ ಜಿಕೆವಿಕೆಯಲ್ಲಿ ಬೃಹತ್‌ ಮರಗಳಿಗೆ ಕೊಡಲಿ : ಜನರ ಆಕ್ರೋಶ

| Published : Oct 26 2024, 01:47 AM IST / Updated: Oct 26 2024, 07:52 AM IST

ಸಾರಾಂಶ

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಹೆಬ್ಬಾಳದ ಜಿಕೆವಿಕೆ ಕ್ಯಾಂಪಸ್‌ನ ಕೃಷಿ ಮೇಳ ನಡೆಯುವ ಮೈದಾನದಲ್ಲಿದ್ದ ಬೃಹತ್‌ ಮರಗಳನ್ನು ಕಡಿದಿದ್ದು ಇದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

 ಬೆಂಗಳೂರು : ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಹೆಬ್ಬಾಳದ ಜಿಕೆವಿಕೆ ಕ್ಯಾಂಪಸ್‌ನ ಕೃಷಿ ಮೇಳ ನಡೆಯುವ ಮೈದಾನದಲ್ಲಿದ್ದ ಬೃಹತ್‌ ಮರಗಳನ್ನು ಕಡಿದಿದ್ದು ಇದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಕೃಷಿ, ಮರಗಳ ಮಹತ್ವದ ಬಗ್ಗೆ ಪ್ರಮುಖವಾಗಿ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ‘ಬೋಧನೆ’ ಮಾಡಬೇಕಾದ ಕೃಷಿ ವಿಶ್ವವಿದ್ಯಾನಿಲಯವೇ ಮರಗಳ ಬುಡಕ್ಕೆ ಗರಗಸ ಇಟ್ಟರೆ ಹೇಗೆ? ಇದು ಯಾವ ಸಂದೇಶವನ್ನು ರವಾನಿಸುತ್ತದೆ? ಹದಿನೈದು, ಇಪ್ಪತ್ತು ವರ್ಷಗಳಷ್ಟು ಹಳೆಯದಾದ ಬೃಹತ್‌ ಗಾತ್ರದ ಹುಣಸೆ ಮತ್ತಿತರ ಮರಗಳನ್ನು ಏಕಾಏಕಿ ಕಡಿದು ಉರುಳಿಸಿದ್ದು ಏಕೆ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಅಪಾರ ಸಸ್ಯ ಸಂಪತ್ತನ್ನು ಹೊಂದಿರುವುದರಿಂದ ಜಿಕೆವಿಕೆ ಕ್ಯಾಂಪಸ್‌ ವಾಯು ವಿಹಾರಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ. ಹೀಗೆ ವಾಯು ವಿಹಾರಕ್ಕೆಂದು ತೆರಳಿದ್ದವರಿಗೆ ಶುಕ್ರವಾರ ದಿಗ್ಭ್ರಮೆ ಉಂಟಾಗಿದೆ. ಏಕೆಂದರೆ ಬೃಹದಾಕಾರದ, ಹಲವು ವರ್ಷಗಳ ದಪ್ಪ ಗಾತ್ರದ ಐದು ಮರಗಳನ್ನು ಧರೆಗುರುಳಿಸಲಾಗಿದೆ. ಸಸ್ಯ ಸಂರಕ್ಷಣೆಯ ಬಗ್ಗೆ ನೀತಿ ಬೋಧನೆ ಮಾಡುವ ಕೃಷಿ ವಿಶ್ವವಿದ್ಯಾಲಯವೇ ಮರಗಳ ಕಡಿತಲೆಗೆ ಮುಂದಾದರೆ ಹೇಗೆ ? ಎಂದು ವಾಯು ವಿಹಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನ.14 ರಿಂದ 17 ರವರೆಗೂ ಜಿಕೆವಿಕೆಯಲ್ಲಿ ಬಹು ನಿರೀಕ್ಷಿತ ‘ಕೃಷಿ ಮೇಳ’ ಆಯೋಜನೆಯಾಗಲಿದೆ. ಮೇಳ ಹಮ್ಮಿಕೊಳ್ಳುವ ಮೈದಾನದಲ್ಲೇ ಇಷ್ಟು ವರ್ಷ ಇದ್ದ ಮರಗಳನ್ನು ಈಗ ಕಡಿದಿದ್ದು ಸರಿಯೇ ? ಒಂದೊಮ್ಮೆ ಕೃಷಿ ಮೇಳದ ಸಿದ್ಧತೆಗೆ ಅಡ್ಡಿ ಉಂಟಾಗಲಿದೆ ಎಂದು ಈ ಮರಗಳನ್ನು ಕಡಿದಿದ್ದರೆ, ಇಷ್ಟು ವರ್ಷ ಈ ಮರಗಳ ನಡುವೆಯೇ ಮೇಳ ಆಯೋಜಿಸಿರಲಿಲ್ಲವೇ? ಆಡಳಿತ ಮಂಡಳಿಗೆ ಜವಾಬ್ದಾರಿ ಬೇಡವೇ ಎಂದು ಸಾರ್ವಜನಿಕರು ಹರಿಹಾಯ್ದಿದ್ದಾರೆ.

ಮರಗಳ ಕಡಿತದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ‘ಕನ್ನಡ ಪ್ರಭ’ ಸ್ಥಳ ಪರಿಶೀಲನೆ ನಡೆಸಿದಾಗ, ಕೃಷಿ ಮೇಳದ ಸಾರ್ವಜನಿಕ ಸಮಾರಂಭ ನಡೆಯುವ ವೇದಿಕೆಯ ಸಮೀಪದ ಮೈದಾನದಲ್ಲಿದ್ದ ಐದು ಮರಗಳನ್ನು ಕಡಿದಿರುವುದು, ಮರಗಳ ರೆಂಬೆ ಕೊಂಬೆಗಳನ್ನು ಟ್ರ್ಯಾಕ್ಟರ್‌ಗಟ್ಟಲೇ ತುಂಬಿಕೊಂಡು ತೆರಳುತ್ತಿದ್ದುದೂ ಕಂಡುಬಂತು.