ಮಹಿಳೆಯರನ್ನು ಕೇವಲ ‘ವೋಟ್ ಬ್ಯಾಂಕ್’ ಮಾಡಿಕೊಂಡಿರುವ ಕಾಂಗ್ರೆಸ್: ರೂಪಾಲಿ ಆಕ್ರೋಶ
ಕನ್ನಡಪ್ರಭ ವಾರ್ತೆ ಕಾರವಾರಕೇಂದ್ರ ಸರ್ಕಾರ ಮಂಡಿಸಿದ ಐತಿಹಾಸಿಕ ಶೇ. 33ರಷ್ಟು ನಾರಿಶಕ್ತಿ ವಂದನಾ ಮಹಿಳಾ ಮೀಸಲಾತಿ ಮಸೂದೆಗೆ ಅಡ್ಡಿಪಡಿಸುವ ಮೂಲಕ ವಿರೋಧ ಪಕ್ಷಗಳು ದೇಶದ ಶೇ. 50ಕ್ಕೂ ಅಧಿಕ ಮಹಿಳೆಯರ ಕನಸನ್ನು ಭಗ್ನಗೊಳಿಸಿವೆ ಎಂದು ಮಾಜಿ ಶಾಸಕಿ ಹಾಗೂ ಬಿಜೆಪಿ ನಾಯಕಿ ರೂಪಾಲಿ ನಾಯ್ಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮಹಿಳೆಯರು ಶೇ. 50ರಷ್ಟು ಮೀಸಲಾತಿಯನ್ನೇನೂ ಕೇಳಿರಲಿಲ್ಲ, ಬದಲಾಗಿ ಕೇವಲ ಶೇ. 33ರಷ್ಟನ್ನು ಮಾತ್ರ ಕೇಳಿದ್ದರು. ಆದರೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಇದಕ್ಕೂ ಅವಕಾಶ ನೀಡದೆ ಮಹಿಳೆಯರ ಹಕ್ಕುಗಳನ್ನು ಅಕ್ಷರಶಃ ಕಗ್ಗೊಲೆ ಮಾಡಿವೆ ಎಂದು ಗುಡುಗಿದರು.ಇಂದಿರಾಗಾಂಧಿ, ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯಂತಹ ಪ್ರಭಾವಿ ನಾಯಕಿಯರನ್ನು ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ, ಒಂದು ದಿನವೂ ಮಹಿಳಾ ಮೀಸಲಾತಿಯ ಬಗ್ಗೆ ಒಳ್ಳೆಯ ಯೋಚನೆ ಬಾರದಿರುವುದು ವಿಪರ್ಯಾಸ. ಆ ಪಕ್ಷವು ಮಹಿಳೆಯರನ್ನು ಕೇವಲ ಮತದಾನಕ್ಕೆ ಮಾತ್ರ ಸೀಮಿತಗೊಳಿಸಿ, ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.
ಇಂದು ಮಹಿಳೆಯರು ಪುರುಷರಷ್ಟೇ ಸಮಾನವಾಗಿ, ಯಾರಿಗೂ ಕಮ್ಮಿಯಿಲ್ಲದಂತೆ ಕೆಲಸ ಮಾಡುತ್ತಿದ್ದಾರೆ. ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ಪೂಜನೀಯ ಸ್ಥಾನವಿದೆ. ಆದರೆ, ಮಹಿಳೆಯರಿಗೆ ಅನ್ಯಾಯ ಮಾಡಿ ಅಗೌರವ ತೋರುತ್ತಿರುವ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ತಕ್ಕ ಶಾಸ್ತಿ ಅನುಭವಿಸಲಿದೆ ಹಾಗೂ ಸಂಪೂರ್ಣವಾಗಿ ನಿರ್ಣಾಮವಾಗಲಿದೆ ಎಂದು ಅವರು ಎಚ್ಚರಿಸಿದರು.ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರು ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಸಬಲರಾಗಿ ದೇಶವನ್ನು ಮುನ್ನಡೆಸಬೇಕು ಎಂಬ ದೊಡ್ಡ ಕನಸು ಕಂಡಿದ್ದಾರೆ. ಪುರುಷರ ಸ್ಥಾನಗಳನ್ನು ಕಸಿದುಕೊಳ್ಳದೆ, ಕ್ಷೇತ್ರ ಮರು ವಿಂಗಡಣೆ (ಡಿಲಿಮಿಟೇಶನ್) ಮಾಡುವ ಮೂಲಕ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ನೀಡುವ ಗುರಿಯನ್ನು ಹೊಂದಲಾಗಿದೆ. ಈ ಕುರಿತು ಗೃಹ ಸಚಿವ ಅಮಿತ್ ಶಾ ಅಧಿವೇಶನದಲ್ಲಿ ಸ್ಪಷ್ಟವಾಗಿ ಮನವರಿಕೆ ಮಾಡಿಕೊಟ್ಟಿದ್ದರು. ಆದರೂ ವಿರೋಧ ಪಕ್ಷವಾಗಿರುವ ಕಾಂಗ್ರೆಸ್, ತಮ್ಮ ಮಿತ್ರಪಕ್ಷಗಳೊಂದಿಗೆ ಸೇರಿ, ಪ್ರಧಾನಿ ಮೋದಿ ಅವರಿಗೆ ಪ್ರಚಾರ ಸಿಗುತ್ತದೆ ಎನ್ನುವ ಕನಿಷ್ಠ ಮಟ್ಟದ ಯೋಚನೆಯೊಂದಿಗೆ ಮಹಿಳೆಯರ ಮೀಸಲಾತಿ ಮಸೂದೆಗೆ ಹಿನ್ನಡೆಯಾಗುವಂತೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.26ರಂದು ಬೃಹತ್ ಮಹಿಳಾ ಸಮಾವೇಶ
ಮಹಿಳಾ ದಿನಾಚರಣೆಯ ಅಂಗವಾಗಿ ಬಾಕಿ ಉಳಿದಿದ್ದ ಬೃಹತ್ ಮಹಿಳಾ ಸಮಾವೇಶವನ್ನು ಏ. 26ರಂದು ಆಯೋಜಿಸಲಾಗಿದೆ ಎಂದು ರೂಪಾಲಿ ನಾಯ್ಕ ಹೇಳಿದರು.
ನಗರದ ಗ್ರಾಮದೇವರ ದೇವಸ್ಥಾನದ ಪಕ್ಕದಲ್ಲಿರುವ ಬೃಂದಾವನ ಹಾಲ್‌ನಲ್ಲಿ ಅಂದು ದಿನಪೂರ್ತಿ ಕಾರ್ಯಕ್ರಮ ನಡೆಯಲಿದೆ. ಮುಂಜಾನೆ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಹಾಗೂ ಸಂಜೆ ಗಾಯನ ಸ್ಪರ್ಧೆ ಜರುಗಲಿವೆ. ಸಾರ್ವಜನಿಕರು ತಮ್ಮ ಕುಟುಂಬ ಸಮೇತರಾಗಿ ಬಂದು ಈ ಸಮಾವೇಶದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ವಿನಂತಿಸಿದರು.