ಸಾರಾಂಶ
ಶಿಗ್ಗಾಂವಿ: ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಘಟಕ ಮತ್ತು ಬಸವೇಶ್ವರ ರೈತ ಹಿತಾಭಿವೃದ್ಧಿ ಸಂಘಗಳ ಆಶ್ರಯದಲ್ಲಿ ತಾಲೂಕಿನ ಹುಲಗೂರ ಗ್ರಾಪಂ ಆವರಣದಲ್ಲಿ ಪ್ರತಿಭಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ಹನುಮಂತಪ್ಪ ಹುಚ್ಚಣ್ಣನವರ ಮಾತನಾಡಿ, ಹುಲಗೂರ ಗ್ರಾಪಂನಲ್ಲಿ ರೈತರ ಮನವಿಗಳನ್ನು ತಿರಸ್ಕಾರ ಮಾಡುವ ಮೂಲಕ ರೈತರನ್ನು ಕಡೆಗಣಿಸಲಾಗುತ್ತಿದೆ. ಸರ್ಕಾರದ ವಿವಿಧ ಯೋಜನೆಗಳ ಲಾಭಗಳು ಫಲಾನುಭವಿಗಳಿಗೆ ತಲುಪದೇ ಬಡ ಕುಟುಂಬಗಳಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.೧೫ನೇ ಹಣಕಾಸಿನ ಯೋಜನೆಯ ಎಲ್ಲ ಕಾಮಗಾರಿಗಳ ಗೌಪ್ಯವಾಗಿಡಲಾಗಿದೆ. ಹುಲಗೂರ ಗ್ರಾಮ ವ್ಯಾಪ್ತಿಯ ಕೃಷಿ ಭೂಮಿಯಲ್ಲಿ ಅನಧಿಕೃತವಾಗಿ ೫ ಗುಂಟೆಗೂ ಅಧಿಕ ವಿಸ್ತೀರ್ಣದ ನಿವೇಶನವಾಗಿ ದಾಖಲು ಮಾಡಲಾಗುತ್ತಿದೆ. ಇಲಾಖೆ ಹಿರಿಯ ಅಧಿಕಾರಿಗಳು ಪಂಚಾಯಿತಿಯ ಕಾರ್ಯ ವಿಧಾನ ಪರಿಶೀಲಿಸಿ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.ಸಂಘಟನೆ ತಾಲೂಕು ಅಧ್ಯಕ್ಷ ಆನಂದ ಕೆಳಗಿನಮನಿ ಮಾತನಾಡಿ, ಹುಲಗೂರ ಗ್ರಾಮ ಪಂಚಾಯಿತಿಯಲ್ಲಿ ಆಡಳಿತ ಸಂಪೂರ್ಣವಾಗಿ ಹದಗೆಟ್ಟಿದ್ದು, ರೈತರು ಹಲವಾರು ಸಮಸ್ಯೆಗಳಿಂದ ಬಳಲುವಂತಾಗಿದೆ. ನರೇಗಾ ಪ್ರಗತಿ ಸಂಪೂರ್ಣ ಶೂನ್ಯವಾಗಿದೆ. ರೈತ ಫಲಾನುಭವಿಗಳು ಸರ್ಕಾರದ ಯೋಜನೆಗಳ ಲಾಭ ಪಡೆಯಲು ಹಲವಾರು ಬಾರಿ ಮನವಿ ನೀಡಿದರೂ ರೈತರ ಪರವಾಗಿ ಒಂದೂ ಕ್ರಿಯಾಯೋಜನೆ ಮಾಡುತ್ತಿಲ್ಲ ಎಂದು ಆಪಾದಿಸಿದರು.ಪ್ರತಿಭಟನೆಯಲ್ಲಿ ಶಂಕರಗೌಡ ಪಾಟೀಲ, ರುದ್ರಪ್ಪ ಬಳಿಗಾರ, ಮಂಜುನಾಥ ಕಂಕನವಾಡ, ದೇವರಾಜ ದೊಡ್ಡಮನಿ, ಚನ್ನಬಸಪ್ಪ ಹಾವಣಗಿ, ಚಂದ್ರಣ್ಣ ರಾಮಜೋಗಿ, ಶ್ರೀನಿವಾಸ ಚಿಕ್ಕನಗೌಡ್ರ, ರಮೇಶ ದೊಡ್ಮನಿ, ಚಂದ್ರಣ್ಣ ಕರೆಕನ್ನಮ್ಮನವರ, ನಿರ್ಮಲಾ ಕಂಟೆಣ್ಣವರ, ಗೌರಮ್ಮ ಹೊಸಮನಿ, ದಯಾನಂದ ಮಣಸಿನಕಾಯಿ, ಬಸಯ್ಯ ಹಿರೇಮಠ ಸೇರಿದಂತೆ, ಸುತ್ತಲಿನ ಗ್ರಾಮಗಳ ರೈತರು ಇದ್ದರು. ತಾಪಂ ಕಾರ್ಯನಿರ್ವಾಕ ಅಧಿಕಾರಿ ಮಂಜುನಾಥ ಸಾಳುಂಕೆ ಅವರು ರೈತರಿಂದ ಮನವಿ ಸ್ವೀಕರಿಸಿದರು.
ಗ್ರಾಪಂ ಅಧ್ಯಕ್ಷ ಜಾವೇದಅಹ್ಮದ ಸವಣೂರ ಮಾತನಾಡಿ, ಗ್ರಾಮದ ಪ್ರತಿ ವಾರ್ಡ್‌ನಲ್ಲಿಯೂ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ಮಾಡಲಾಗಿದೆ. ರೈತ ಸಂಘಟನೆಗಳು ಕೆಲವು ಕೆಲಸಗಳಾಗಿಲ್ಲ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ಅವರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸಲು ಸಿದ್ಧನಿದ್ದೇನೆ ಎಂದರು.