ಸಾರಾಂಶ
ಕನ್ನಡಪ್ರಭ ವಾರ್ತೆ ಅಳ್ನಾವರ
ಕೆಲ ದಿನಗಳಿಂದ ಆಗುತ್ತಿರುವ ಅತ್ಯುತ್ತಮ ಮಳೆಯಿಂದ ಸಮೀಪದ ಹುಲಿಕೇರಿಯ ಇಂದಿರಮ್ಮನ ಕೆರೆಯು ಸಂಪೂರ್ಣ ತುಂಬಿದ್ದು, ಅತ್ಯಾಕರ್ಷಕವಾಗಿ ಕೋಡಿ ಬೀಳುವ ಮೂಲಕ ಜಲನರ್ತನ ಸೃಷ್ಟಿಯಾಗಿದೆ.ಜಲಪಾತದ ಮಾದರಿಯಲ್ಲಿ ಹರಿಯುತ್ತಿರುವ ಕೋಡಿ ಅತ್ಯಾಕರ್ಷಕವಾಗಿ ಕಾಣುತ್ತಿದ್ದು, ಈ ಜಲನರ್ತನವನ್ನು ಕಣ್ತುಂಬಿಕೊಳ್ಳಲು ಅಳ್ನಾವರ, ಧಾರವಾಡ ಹಾಗೂ ಸುತ್ತಲಿನ ಗ್ರಾಮಗಳ ಜನರು ತಂಡೋಪತಂಡವಾಗಿ ಬರುತ್ತಿದ್ದಾರೆ. ಸೋಮವಾರ ರಾತ್ರಿಯಿಂದ ಕೆರೆಯ ಕೋಡಿ ಹರಿಯುತ್ತಿದ್ದು, ತುಂಬಿದ ಕೆರಯಿಂದ ಎರಡು ಕಾಲುವೆಗಳ ಮೂಲಕ ಹೆಚ್ಚುವರಿ ನೀರು ಹೋಗುತ್ತಿದೆ. ಸೋಮವಾರ ರಾತ್ರಿ 5 ಸಾವಿರ ಕ್ಯೂಸೆಕ್ ನೀರು ಹೊರಹೋಗುತ್ತಿದ್ದು, ಮಂಗಳವಾರ ಮಳೆಯ ಪ್ರಮಾಣ ಕಡಿಮೆಯಾಗಿದೆ. ಮಧ್ಯಾಹ್ನದ ವೇಳೆಗೆ 2500 ಕ್ಯೂಸೆಕ್ ನೀರು ಹೊರಹೋಗುತ್ತಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಪತ್ರಿಕೆಗೆ ಮಾಹಿತಿ ನೀಡಿದರು.
ಗ್ರಾಮಸ್ಥರಿಂದ ಪೂಜೆಈ ಹಿಂದೆ ಅತಿವೃಷ್ಟಿಯಿಂದಾಗಿ ಕೆರೆ ಒಡೆದು ಹೋಗಿತ್ತು. ಆ ಬಳಿಕ ಕಳೆದ ನಾಲ್ಕು ವರ್ಷದಲ್ಲಿ ಮೊದಲ ಬಾರಿಗೆ ಕೆರೆ ತುಂಬಿದ್ದರಿಂದ ಗ್ರಾಮದ ಜನರು ಮಂಗಳವಾರ ಗಂಗಾದೇವಿಗೆ ಉಡಿತುಂಬಿ ಹರಕೆ ತಿರಿಸಿದರು. ಜೊತೆಗೆ ಬೇರೆ ಗ್ರಾಮಗಳಿಂದ ಜನರು ಬಂದು ಪೂಜೆ ಸಲ್ಲಿಸುತ್ತಿದ್ದಾರೆ. 2019ರಲ್ಲಿ ಅತಿವೃಷ್ಟಿ ರೌದ್ರನರ್ತನವನ್ನು ತಾಳಿದ್ದ ಕೆರೆಯು ಕೃಷಿಭೂಮಿ, ಜನವಸತಿಪ್ರದೇಶ, ಜಾನುವಾರಗಳನ್ನು ಆಹುತಿ ಪಡೆಯುವುದಲ್ಲದೆ ಕೆರೆಯ ಕೋಡಿ ಮತ್ತು ಸೇತುವೆಯನ್ನು ನಾಶ ಮಾಡಿತ್ತು. ಇದೀಗ ಕೆರೆಯ ಕೋಡಿಯ ಮರು ನಿರ್ಮಾಣದ ನಂತರ ಮೊದಲ ಬಾರಿಗೆ ಕೋಡಿ ಹರಿದಿದ್ದು, ಮನಮೋಹಕವಾಗಿ ಕಾಣುತ್ತಿದೆ. ಕೆರೆಯಲ್ಲಿ ನೀರಿನ ಪ್ರಮಾಣ ಅಧಿಕವಾಗುತ್ತಿರುವುದರಿಂದ ಕೆರೆಯ ಇನ್ನೊಂದು ಬದಿಗಿರುವ ಹೊಲಗಳಿಗೆ ಹೊಗಿದ್ದ ರೈತರನ್ನು ತಾಲೂಕು ಆಡಳಿತದಿಂದ ಸುರಕ್ಷಿತವಾಗಿ ದಂಡೆ ಸೇರಿಸಿದ ಘಟನೆಯೂ ನಡೆಯಿತು. ರೈತರಾಗಲಿ, ಜನರಾಗಲಿ ಯಾರೂ ಕೆರೆಯ ಬಳಿ ಓಡಾಡದಂತೆ ಮತ್ತು ಜನದಟ್ಟನೆಯಾಗದಂತೆ ಕ್ರಮವಹಿಸಲು ಇದೇ ಸಂದರ್ಭದಲ್ಲಿ ತಹಸೀಲ್ದಾರ ಅವರು ಆದೇಶಿಸಿದರು. ಎಚ್ಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆ ಸಹ ಕೆರೆ ಆವರಣದಲ್ಲಿ ಸೂಕ್ತ ಬಂದೋಬಸ್ತ್ ಒದಗಿಸಿದೆ.
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ದಿ. ಮಾಜಿ ಶಾಸಕ ಸಿ.ಎಂ. ನಿಂಬಣ್ಣವರ ಅಂದಿನ ನಿರಾವರಿ ಸಚಿವ ಮಾಧುಸ್ವಾಮಿಯವರನ್ನು ಕರೆಯಿಸಿ ವಿಶೇಷ ಅನುದಾನವನ್ನು ನೀಡುವಂತೆ ಮನವಿ ಮಾಡಿ ₹9 ಕೋಟಿ ಹಣದಲ್ಲಿ ಬೃಹದಾಕಾರದ ಕೋಡಿಯನ್ನು ನಿರ್ಮಾಣ ಮಾಡಿಸಿದ್ದರು. ಕಾಲುವೆಗಳ ದುರಸ್ತಿಗಾಗಿ ₹6 ಕೋಟಿ ಹಣವನ್ನು ಸಹ ಮಂಜೂರ ಮಾಡಿಸಿದ್ದರು. ದುರಾದೃಷ್ಟವಶಾತ್ ರಾಜಕೀಯ ಕಾರಣದಿಂದ ಕಾಲುವೆ ದುರಸ್ತಿ ಮಾತ್ರ ಆಗದೇ ಬರೀ ಕೋಡಿ ಕಾಮಗಾರಿ ಮಾತ್ರ ಮುಗಿದಿದೆ. ಈ ಬಗ್ಗೆ ಸಚಿವ ಸಂತೋಷ ಲಾಡ್ ಗಮನಕ್ಕೂ ತಂದಿದ್ದು, ಶೀಘ್ರದಲ್ಲಿ ಕಾಲುವೆ ಕಾಮಗಾರಿ ಸಹ ಮಾಡಿಸುವುದಾಗಿ ಅವರು ಭರವಸೆ ನೀಡಿದ್ದಾರೆ.ಧಾರವಾಡ ಜಿಲ್ಲೆಯಲ್ಲಿ ಹೇಳಿಕೊಳ್ಳುವ ದೊಡ್ಡ ಕೆರೆಗಳಿಲ್ಲ. ಇರುವ ಕೆಲವೇ ಕೆರೆಗಳ ವಿಸ್ತೀರ್ಣ ಚಿಕ್ಕದು. ಆದರೆ, ಅಳ್ನಾವರ ಸಮೀಪದಲ್ಲಿರುವ ಹುಲಿಕೇರಿಯ ಇಂದಿರಮ್ಮನ ಕೆರೆ ಸುಮಾರು 700 ಎಕರೆ ಪ್ರದೇಶಲ್ಲಿದ್ದು 1241 ಹೆಕ್ಟೇರ್ ಅಚ್ಚುಕಟ್ಟು ನೀರಾವರಿ ಕ್ಷೇತ್ರವನ್ನು ಹೊಂದಿದೆ. ಇಂದಿರಾಗಾಂಧಿ ಅವರ ಹೆಸರಿನಲ್ಲಿ 1984ರಲ್ಲಿ ಈ ಕೆರೆ ಕಟ್ಟಿದ್ದು, ಸಾವಿರಾರ ರೈತರಿಗೆ ಕೆರೆ ಕೃಷಿ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಿದೆ.
ಕೃಷಿಗೆ ನೀರುಈ ಭಾಗದ ಜೀವನಾಡಿಯಾಗಿರುವ ಹುಲಿಕೇರಿಯ ಇಂದಿರಮ್ಮನ ಕೆರೆಯು ಸಾವಿರಾರು ಕೃಷಿ ಭೂಮಿಗೆ ನೀರು ನೀಡುತ್ತಿದೆ. ಇದರಿಂದ ಸ್ಥಳೀಯ ರೈತರಿಗೆ ಕೃಷಿ ಆದಾಯದಲ್ಲಿ ದ್ವಿಗುಣವಾಗಲಿದೆ. ಕೆರೆ ತುಂಬಿದ್ದು ತುಂಬಾ ಖುಷಿಯಾಗಿದೆ ಬರುವ ದಿನಗಳಲ್ಲಿ ನಾನು ಬಂದು ವಿಶೇಷ ಪೂಜೆ ಸಲ್ಲಿಸುತ್ತೇನೆ.ಸಂತೋಷ ಲಾಡ್, ಜಿಲ್ಲಾ ಉಸ್ತವಾರಿ ಸಚಿವರು.
ಕೆರೆ ಕೋಡಿಸೋಮವಾರ ತಡರಾತ್ರಿಯಿಂದಲೇ ಕೆರೆಯ ಕೋಡಿ ಹರಿಯುತ್ತಿದ್ದು, ಐದು ಸಾವಿರ ಕ್ಯೂಸೇಕ್ ನೀರು ಹೊರಹೋಗುತ್ತಿದೆ. ಇದರ ಜೊತೆಗೆ ಎರಡು ಕಾಲುವೆಗಳಿಂದಲೂ ನೀರು ಹರಿಬಿಡಲಾಗುತ್ತಿದೆ.ಎನ್.ಎಚ್. ಭಜಂತ್ರಿ, ಸಣ್ಣ ನೀರಾವರಿ ಇಲಾಖೆ ಸಹಾಯಕ ಎಂಜಿನಿಯರ್