ಸಾರಾಂಶ
ಗುತ್ತಲ: ಭಕ್ತರು ಕಷ್ಟ ಎದುರಾದಾಗ ಮನದಲ್ಲಿ ನೆನೆದರೆ ಕಷ್ಟ ದೂರಾಗಿ ಇಷ್ಟಾರ್ಥಗಳನ್ನು ಈಡೇರಿಸುವ ಗುತ್ತಲದ ಶ್ರೀ ಹೇಮಗಿರಿ ಚನ್ನಬಸವೇಶ್ವರ ಮಠ ಐತಿಹಾಸಿಕ ಹಿನ್ನೆಲೆಯ ಮಠವಾಗಿದೆ ಎಂದು ಮುಂಡರಗಿಯ ಡಾ. ಅನ್ನದಾನೇಶ್ವರ ಸ್ವಾಮೀಜಿ ತಿಳಿಸಿದರು.ಪಟ್ಟಣದ ಶ್ರೀಗುರು ಪಟ್ಟದ ಹೇಮಗಿರಿ ಚನ್ನಬಸವೇಶ್ವರರ ನೂತನ ಶಿಲಾಮಠದ ಧರ್ಮ ಜಾಗೃತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಮಠವನ್ನು ನಿರ್ಮಿಸಿ ಪೀಠಾಧಿಪತಿಗಳನ್ನು ನೇಮಕ ಮಾಡದ ಏಕೈಕ ಮಠ ಹೇಮಗಿರಿಮಠವಾಗಿದೆ. ವೀರಶೈವ ಸಿದ್ಧಾಂತದಲ್ಲಿ ಲಿಂಗಪೂಜೆಗೆ ವಿಶೇಷ ಶಕ್ತಿ ಹಾಗೂ ಮಹತ್ವವಿದೆ. 3 ಕೋಟಿಗೂ ಅಧಿಕ ಮೊತ್ತದಲ್ಲಿ ಭಕ್ತರ ಕಾಣಿಕೆಯಿಂದ ನಿರ್ಮಾಣವಾದ ಮಠವಾಗಿದ್ದು, ಅದ್ಭುತವಾದ ಕಲೆ ಹಾಗೂ ಶಿಲ್ಪಕಲೆಯಿಂದ ನಿರ್ಮಾಣವಾಗಿರುವ ಮಠ ನಾಡಿನ ಭಕ್ತರು ಹೇಮಗಿರಿ ಅಜ್ಜಯ್ಯನ ಮೇಲಿನ ಶಕ್ತಿ ಹಾಗೂ ಭಕ್ತಿಯ ಧ್ಯೂತಕವಾಗಿದೆ ಎಂದರು. ಕಲ್ಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ಭಗವಂತ ಕರುಣಿಸಿದ ದೇಹ ಧರ್ಮಕ್ಕೆ, ಸಮಾಜಕ್ಕೆ ಮೀಸಲಾಗಬೇಕು. ಅಂದಾಗ ಮಾತ್ರ ಭೂಮಿಯ ಮೇಲೆ ಮಾನವನಾಗಿ ಜನಿಸಿದ್ದು ಸಾರ್ಥಕವಾಗುವುದು ಎಂದರು.ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಸರ್ವ ಜನಾಂಗದ ಶಾಂತಿಯ ತೋಟ ಗುತ್ತಲದ ಹೇಮಗಿರಿಮಠ. ಪಟ್ಟಣದ ಹಾಗೂ ಸುತ್ತಮುತ್ತಲಿನ ಸಾವಿರಾರು ಭಕ್ತರು ಜಾತಿ, ಧರ್ಮದ ಭೇದವಿಲ್ಲದೆ ಮಠದ ನಿರ್ಮಾಣಕ್ಕಾಗಿ ಭಕ್ತಿಯ ಕಾಣಿಕೆ ನೀಡಿರುವುದೆ ವಿಶೇಷವಾಗಿದೆ ಎಂದರು.ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮೀಜಿ ಮಾತನಾಡಿ, ಭಕ್ತರ ಕಷ್ಟವನ್ನು ಪರಿಹರಿಸುವ ಹೇಮಗಿರಿ ಚನ್ನಬಸವೇಶ್ವರರು, ಭಕ್ತಿ ಎನ್ನುವುದು ಶಕ್ತಿ ಆಗಿರಬೇಕು. ಅದರೊಂದಿಗೆ ಸತ್ಕಾರ್ಯದ ಕೆಲಸದಿಂದ ಮಾಡಿದ ದೇಣಿಗೆ ಮಾತ್ರ ದೇವರಿಗೆ, ಮಠಗಳಿಗೆ ಸಲ್ಲುವುದು ಎಂದರು.
ನೆಗಳೂರ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಉಸಿರು ಇರುವ ತನಕ ದೇಹಕ್ಕೆ ಬೆಲೆ. ಆದ್ದರಿಂದ ಉಸಿರು ನಿಲ್ಲುವುದರೊಳಗೆ ಸಮಾಜಕ್ಕಾಗಿ, ಧರ್ಮ ಕಲ್ಯಾಣಕ್ಕಾಗಿ ಸಮಯವನ್ನು ಮೀಸಲಿಡಿ ಎಂದರು. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಾಳವ್ವ ಗೊರವರ, ಸಿ.ಬಿ. ಕುರುವತ್ತಿಗೌಡ್ರ, ಕೊಟ್ರಯ್ಯಸ್ವಾಮಿ ಕೋವಳ್ಳಿಮಠ, ರುದ್ರಪ್ಪ ಹಾದಿಮನಿ, ಚನ್ನಪ್ಪ ಕಲಾಲ, ಕೋಟ್ರೇಶಪ್ಪ ಅಂಗಡಿ, ಶಂಕ್ರಪ್ಪ ಚಂದಾಪುರ, ಬಸವರಾಜ ಹೇಮಗಿರಿಮಠ, ಶಂಭುಲಿಂಗಯ್ಯ ಹೇಮಗಿರಿಮಠ, ಶಿವಪುತ್ರಯ್ಯ ಹೇಮಗಿರಿಮಠ, ಶಿವಪ್ಪ ನಂದಿಗೊಣ್ಣನವರ, ಅಜ್ಜಪ್ಪ ತರ್ಲಿ, ಸಂಗಯ್ಯಸ್ವಾಮಿ ಭೂಸನೂರಮಠ, ಸಿದ್ದಪ್ಪ ಬಿ. ಶೆಟ್ಟರ ಸೇರಿದಂತೆ ಅನೇಕರಿದ್ದರು.ಪ್ರಾಸ್ತಾವಿಕವಾಗಿ ಪಿ.ಎನ್. ಹೇಮಗಿರಿಮಠ ಮಾತನಾಡಿದರು. ಪ್ರಭುಸ್ವಾಮಿ ಹೇಮಗಿರಿಮಠ ನಿರೂಪಿಸಿದರು. ವೀರೇಶ ಗಡ್ಡದೇವರಮಠ ಸ್ವಾಗತಿಸಿದರು. ವೀರಯ್ಯ ಪ್ರಸಾಧಿಮಠ ವಂದಿಸಿದರು.