ಪ್ರತಿಯೊಬ್ಬರು ಕಾನೂನು ಪಾಲಿಸಿದಲ್ಲಿ ಮಾನವ ಹಕ್ಕುಗಳ ರಕ್ಷಣೆ ಸಾಧ್ಯ: ನ್ಯಾ. ಪ್ರಕಾಶ್‌

| Published : Dec 12 2024, 12:35 AM IST

ಸಾರಾಂಶ

ಚಿಕ್ಕಮಗಳೂರು, ತನ್ನಂತೆ ಇತರರನ್ನು ಭಾವಿಸಿ ಸಮಾಜದಲ್ಲಿ ಶಾಂತಿಯುತ ಸಹಬಾಳ್ವೆ ಜೀವನ ನಡೆಸುವುದು ನಮ್ಮೆಲ್ಲರ ಕರ್ತವ್ಯ. ಪ್ರತಿಯೊಬ್ಬರು ಕಾನೂನು ತಿಳಿದು ಪಾಲಿಸಿದಲ್ಲಿ ಮಾನವ ಹಕ್ಕುಗಳ ರಕ್ಷಣೆ ಸಾಧ್ಯ ಎಂದು ಪ್ರಧಾನ ಕೌಟುಂಬಿಕ ನ್ಯಾಯಾಧೀಶರಾದ ವಿ.ಪ್ರಕಾಶ್‌ ಹೇಳಿದರು.

ವಿಶ್ವ ಮಾನವ ಹಕ್ಕುಗಳ ದಿನಾಚರಣೆ, ತಾಪಂನಲ್ಲಿ ನಡೆದ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ತನ್ನಂತೆ ಇತರರನ್ನು ಭಾವಿಸಿ ಸಮಾಜದಲ್ಲಿ ಶಾಂತಿಯುತ ಸಹಬಾಳ್ವೆ ಜೀವನ ನಡೆಸುವುದು ನಮ್ಮೆಲ್ಲರ ಕರ್ತವ್ಯ. ಪ್ರತಿಯೊಬ್ಬರು ಕಾನೂನು ತಿಳಿದು ಪಾಲಿಸಿದಲ್ಲಿ ಮಾನವ ಹಕ್ಕುಗಳ ರಕ್ಷಣೆ ಸಾಧ್ಯ ಎಂದು ಪ್ರಧಾನ ಕೌಟುಂಬಿಕ ನ್ಯಾಯಾಧೀಶರಾದ ವಿ.ಪ್ರಕಾಶ್‌ ಹೇಳಿದರು.

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಮಾನವ ಹಕ್ಕುಗಳ ಪರಿಧಿ ವ್ಯಾಪಕ ಸ್ವರೂಪದ್ದು, ಅದು ನಾಗರಿಕ, ರಾಜಕೀಯ, ಸಾಂಸ್ಕೃತಿಕ ಮತ್ತು ಆರ್ಥಿಕ ಹಕ್ಕುಗಳನ್ನು ಒಳಗೊಂಡಿದೆ. ಭಾರತದ ಸಂವಿಧಾನ ಪ್ರತಿ ಪ್ರಜೆಗೂ ಸಮಾನತೆಯ ಹಕ್ಕು, ಸಮಾನ ಕಾನೂನು ರಕ್ಷಣೆ, ಶೋಷಣೆ ರಹಿತ ಆರೋಗ್ಯ ಪೂರ್ಣ ಪರಿಸರದಲ್ಲಿ ಗೌರವಯುತ ಜೀವನ ನಡೆಸುವ ಹಕ್ಕು, ತಮ್ಮ ಆಯ್ಕೆಯ ವೃತ್ತಿ, ಕಲಿಕೆ ಹಕ್ಕು, ಭಾರತದ ಯಾವುದೇ ಸ್ಥಳಕ್ಕೆ ಹೋಗಲು ಮತ್ತು ಅಲ್ಲಿ ವಾಸಿಸಲು, ಆತ್ಮಸಾಕ್ಷಿ ಸ್ವಾತಂತ್ರ್ಯ, ನಂಬಿಕೆ ಮತ್ತು ಧಾರ್ಮಿಕ ಸ್ವಾತಂತ್ರ್ಯ, ಅಸ್ಪೃಶ್ಯತೆ, ಜಾತಿ ಮತ ಅಥವಾ ಲಿಂಗ ಆಧಾರಿತ ತಾರತಮ್ಯದಿಂದ ಮುಕ್ತವಾಗಿ ಜೀವಿಸುವ ಹಕ್ಕನ್ನು ನೀಡಿದೆ. ಇವುಗಳನ್ನು ತಿಳಿದು ಅನುಸರಿಸುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ ಎಂದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ. ಹನುಮಂತಪ್ಪ ಮಾತನಾಡಿ, ಸಮಾಜದಲ್ಲಿ ಪ್ರತಿ ಯೊಬ್ಬರಿಗೂ ಸಮಾನತೆ, ಸ್ವಾತಂತ್ರ್ಯದಿಂದ ಬದುಕುವ ಹಕ್ಕಿದೆ. ಪ್ರಜೆಯ ಮಾನವ ಹಕ್ಕುಗಳನ್ನು ರಕ್ಷಿಸುವುದು ರಾಜ್ಯದ ಮತ್ತು ಇದರ ಎಲ್ಲಾ ಸಂಸ್ಥೆಗಳ ಆದ್ಯ ಕರ್ತವ್ಯ. ರಾಜ್ಯದ ಯಾವುದೇ ಕಚೇರಿ ಅಥವಾ ಸಂಸ್ಥೆಯಿಂದಾಗಲೀ ವಿವಿಧ ರೀತಿ ಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾದ ಪಕ್ಷದಲ್ಲಿ ಅಥವಾ ಮಾನವ ಹಕ್ಕುಗಳ ರಕ್ಷಣೆ ಮಾಡಲು ವಿಫಲವಾದ ಸಂದರ್ಭಗಳಲ್ಲಿ, ತೊಂದರೆಗೆ ಒಳಗಾದವರ ಪರವಾಗಿ ಅವರ ಕುಂದು ಕೊರತೆ ಆಲಿಸಿ ನ್ಯಾಯ ದೊರಕಿಸಿಕೊಡುವುದೇ ಮಾನವ ಹಕ್ಕುಗಳ ಆಯೋಗದ ಉದ್ದೇಶ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮಾನವ ಹಕ್ಕುಗಳ ಸಮಿತಿ ಅಧ್ಯಕ್ಷ ಎಚ್.ಸಿ. ನಟರಾಜ್ ಮಾತನಾಡಿ, ಸಾರ್ವಜ ನಿಕ ಬದುಕನ್ನು ನಿರ್ವಹಿಸುವ ಪ್ರತಿಯೊಬ್ಬ ನಾಗರಿಕನಿಗೂ ಕಾನೂನಿನ ಅವಶ್ಯಕತೆ ಬಹಳಷ್ಟಿದೆ. ತಾಯಿ ಭ್ರೂಣದಿಂದಲೇ ಮಾನವ ಹಕ್ಕುಗಳು ಪ್ರಾರಂಭವಾಗುತ್ತವೆ. ತಾನು ಬದುಕಬೇಕು ಇತರರನ್ನು ಬದುಕಲು ಬಿಡಬೇಕು ಎಂಬ ಮನೋಭಾವ ದಿಂದ ನಮ್ಮ ಹಕ್ಕುಗಳನ್ನು ನಾವೇ ರಕ್ಷಿಸಬೇಕು. ಲಿಂಗ ತಾರತಮ್ಯ, ವರ್ಣಬೇದ ಹಾಗೂ ಅಸಮಾನತೆಯಂತಹ ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಕಾನೂನು ಪ್ರಾಧಿಕಾರದ ಸಹಾಯಕ ಮುಖ್ಯ ಅಭಿರಕ್ಷಕ ಡಿ. ನಟರಾಜ್ ಮಾನವ ಹಕ್ಕುಗಳ ರಕ್ಷಣ ಕಾಯ್ದೆ -1993 ರ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ದಲ್ಜಿತ್ ಕುಮಾರ್, ತಹಸೀಲ್ದಾರ್ ಡಾ. ಸುಮಂತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮಹಂತೇಶ್ ಭಜಂತ್ರಿ, ವಕೀಲರ ಸಂಘದ ಅಧ್ಯಕ್ಷ ಡಿ.ಬಿ ಸುಜೇಂದ್ರ, ಜಿಲ್ಲಾ ಮಾನವ ಹಕ್ಕುಗಳ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ಕೃಷ್ಣಯ್ಯಗೌಡ ಉಪಸ್ಥಿತರಿದ್ದರು.11 ಕೆಸಿಕೆಎಂ 1ಚಿಕ್ಕಮಗಳೂರಿನ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ನ್ಯಾ. ಪ್ರಕಾಶ್ ಅವರು ಉದ್ಘಾಟಿಸಿದರು. ನ್ಯಾ ಹನುಮಂತಪ್ಪ, ದಲ್ಜಿತ್‌ಕುಮಾರ್‌, ಡಾ. ಸುಮಂತ್‌, ನಟರಾಜ್‌, ಸುಜೇಂದ್ರ, ಮಹಂತೇಶ್‌ ಭಜಂತ್ರಿ ಇದ್ದರು.