ಠಾಣೆ ಮೇಲೆ ಮಾನವ ಹಕ್ಕು ಆಯೋಗ ದಾಳಿ

| Published : Feb 11 2024, 01:48 AM IST

ಠಾಣೆ ಮೇಲೆ ಮಾನವ ಹಕ್ಕು ಆಯೋಗ ದಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಬೈ ಮೂಲದ ಯಾಸಿನ್ ನನ್ನು ಕಾನೂನುಬಾಹಿರವಾಗಿ ಠಾಣೆಯಲ್ಲಿಟ್ಟಿದ್ದ ಆರೋಪ ಹಿನ್ನೆಲೆ, ಠಾಣೆ ಮೇಲೆ ಎಸ್‌ಎಚ್‌ಆರ್‌ಸಿ ಪೊಲೀಸ್ ವಿಭಾಗದ ಡಿವೈಎಸ್ಪಿ ಸುಧೀರ್ ಹೆಗಡೆ ನೇತೃತ್ವದ ತಂಡ ದಾಳಿ ನಡೆಸಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮನೆಗಳ್ಳತನ ಪ್ರಕರಣ ಸಂಬಂಧ 9 ದಿನ ಹೊರರಾಜ್ಯದ ವ್ಯಕ್ತಿಯೊಬ್ಬನ್ನು ಅಕ್ರಮ ಬಂಧನದಲ್ಲಿಟ್ಟಿದ್ದ ಆರೋಪದ ಮೇರೆಗೆ ಅಮೃತಹಳ್ಳಿ ಠಾಣೆ ಮೇಲೆ ರಾಜ್ಯ ಮಾನವ ಹಕ್ಕುಗಳ ಆಯೋಗದ (ಎಸ್‌ಎಚ್‌ಆರ್‌ಸಿ) ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ.

ಮುಂಬೈ ಮೂಲದ ಯಾಸಿನ್ ಮುಕ್ಬುಲ್‌ನನ್ನು ಕಾನೂನುಬಾಹಿರವಾಗಿ ಠಾಣೆಯಲ್ಲಿಟ್ಟಿದ್ದ ಆರೋಪ ಬಂದಿದ್ದು, ಠಾಣೆ ಮೇಲೆ ಶುಕ್ರವಾರ ಸಂಜೆ ಎಸ್‌ಎಚ್‌ಆರ್‌ಸಿ ಪೊಲೀಸ್ ವಿಭಾಗದ ಡಿವೈಎಸ್ಪಿ ಸುಧೀರ್ ಹೆಗಡೆ ನೇತೃತ್ವದ ತಂಡವು ದಾಳಿ ನಡೆಸಿತು. ಸಿಸಿಟಿವಿ ದೃಶ್ಯಾವಳಿ ಹಾಗೂ ಕೆಲ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಠಾಣೆಯಲ್ಲಿ ಯಾಸಿನ್‌ನನ್ನು ಅಕ್ರಮ ಬಂಧದಲ್ಲಿಟ್ಟಿರುವ ಸಂಗತಿ ಖಚಿತವಾದ ಹಿನ್ನೆಲೆಯಲ್ಲಿ ಇನ್‌ಸ್ಪೆಕ್ಟರ್‌ ಅಂಬರೀಷ್ ಸೇರಿ ಇತರರ ವಿರುದ್ಧ ಎಸ್‌ಎಚ್‌ಆರ್‌ಸಿ ಪ್ರಕರಣ ದಾಖಲಿಸಿದೆ.

ವಿಮಾನದಲ್ಲಿ ಕರೆತಂದಿದ್ರು?: 2023ರಲ್ಲಿ ಮನೆಗಳ್ಳತನ ಪ್ರಕರಣ ಸಂಬಂಧ ಯಾಸಿನ್‌ನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದರು. ಬಳಿಕ ಜಾಮೀನು ಪಡೆದು ಹೊರಬಂದ ಆರೋಪಿ ನಗರವನ್ನು ತೊರೆದು ಮುಂಬೈಗೆ ಮರಳಿದ್ದ. ಈ ಪ್ರಕರಣದ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಹೊರಡಿಸಿದ್ದ ವಾರೆಂಟ್‌ ಆಧಾರದ ಮೇಲೆ ಮುಂಬೈಗೆ ತೆರಳಿದ ಅಮೃತಹಳ್ಳಿ ಠಾಣೆ ಪೊಲೀಸರು, ಫೆ.1ರಂದು ಯಾಸಿನ್‌ನನ್ನು ವಶಕ್ಕೆ ಪಡೆದು ವಿಮಾನದಲ್ಲಿ ನಗರಕ್ಕೆ ಕರೆತಂದಿದ್ದರು.

ಆದರೆ ನ್ಯಾಯಾಲಯಕ್ಕೆ ಹಾಜರುಪಡಿಸದೆ ಯಾಸಿನ್‌ನನ್ನು ಠಾಣೆಯಲ್ಲೇ ಅಕ್ರಮ ಬಂಧನದಲ್ಲಿಟ್ಟಿದ್ದರು. ಈ ಬಗ್ಗೆ ಎಸ್‌ಎಚ್‌ಆರ್‌ಸಿಗೆ ಯಾಸಿನ್ ಕುಟುಂಬದವರು ದೂರು ನೀಡಿದರು. ದೂರಿನ ಅನ್ವಯ ಠಾಣೆ ಮೇಲೆ ಶುಕ್ರವಾರ ಸಂಜೆ 6 ಗಂಟೆಗೆ ದಾಳಿ ನಡೆಸಿದ ಡಿವೈಎಸ್ಪಿ ಸುಧೀರ್ ಹೆಗಡೆ ಅವರು, ಯಾಸಿನ್ ವಶಕ್ಕೆ ಪಡೆದಿರುವ ಬಗ್ಗೆ ಠಾಣೆಯಲ್ಲಿ ದಾಖಲೆಗಳನ್ನು ಪರಿಶೀಲಸಿದಾಗ ಪೊಲೀಸರ ಕರ್ತವ್ಯಲೋಪ ಪತ್ತೆಯಾಗಿದೆ. ಆರೋಪಿತನ ಬಗ್ಗೆ ಠಾಣೆ ಡೈರಿ ಸೇರಿದಂತೆ ಇತರೆ ದಾಖಲೆಗಳಲ್ಲಿ ಸಹ ಉಲ್ಲೇಖಿಸಿಲ್ಲ. ಹೀಗಾಗಿ ಅಕ್ರಮ ಬಂಧನದಲ್ಲಿಟ್ಟು ಆತನಿಗೆ ಹಿಂಸೆ ನೀಡಿದ್ದಾರೆ ಎನ್ನಲಾಗಿದೆ.ಡಿಸಿಪಿಗೆ ಮಾಹಿತಿ ನೀಡದ ಇನ್‌ಸ್ಪೆಕ್ಟರ್‌?: ಆರೋಪಿಯನ್ನು ಬಂಧಿಸಲು ಹೊರರಾಜ್ಯಕ್ಕೆ ತೆರಳುವ ಮುನ್ನ ಆಯಾ ವಿಭಾಗದ ಡಿಸಿಪಿ ಅವರಿಂದ ಪೊಲೀಸರು ಪೂರ್ವಾನುಮತಿ ಪಡೆಯಬೇಕು. ಆದರೆ ಯಾಸಿನ್ ಬಂಧನಕ್ಕೆ ತೆರಳಿದ್ದಾಗ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್ ಅ‍ವರಿಂದ ಅಮೃತಹಳ್ಳಿ ಪಿಐ ಅಂಬರೀಷ್ ಅನುಮತಿ ಪಡೆದಿರಲಿಲ್ಲ ಎಂದು ಆರೋಪಿಸಲಾಗಿದೆ.

ಇನ್ನು ಆರೋಪಿಯನ್ನು ವಿಮಾನದಲ್ಲಿ ಮುಂಬೈನಿಂದ ಕರೆತರಲಾಗಿದೆ. ಆದರೆ ಅಪರಾಧ ಪ್ರಕರಣದಲ್ಲಿ ಆರೋಪಿಯ ವಿಮಾನ ಪಯಣದ ಕುರಿತು ಕಾನೂನು ಪಾಲಿಸದೆ ಅಮೃತಹಳ್ಳಿ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ. ಜತೆಗೆ ವಾರೆಂಟ್ ಜಾರಿಯಾದ ಆರೋಪಿಯನ್ನು ವಶಕ್ಕೆ ಪಡೆದ ಕೂಡಲೇ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ಠಾಣೆಯಲ್ಲಿ ಆತನನ್ನು ಬಂಧನದಲ್ಲಿ ಇಡುವಂತಿಲ್ಲ. ಹೀಗಿದ್ದರೂ 9 ದಿನಗಳು ಆತನನ್ನು ಪೊಲೀಸರು ಅಕ್ರಮ ಬಂಧನದಲ್ಲಿಟ್ಟಿದ್ದರು. ಅಲ್ಲದೆ ಯಾಸಿನ್ ವಶಕ್ಕೆ ಪಡೆದ ಸಂಬಂಧ ಸ್ಥಳೀಯ ಪೊಲೀಸರಿಗೂ ಕೂಡಾ ಮಾಹಿತಿ ನೀಡಿರಲಿಲ್ಲ ಎಂದು ಮೂಲಗಳು ವಿವರಿಸಿವೆ.ಆರೋಪಿಯಿಂದ ಹಣಕ್ಕೆ ಬೇಡಿಕೆ?: ಹಳೇ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದ ಯಾಸಿನ್‌ ಬಳಿ ಹಣಕ್ಕೆ ಅಮೃತಹಳ್ಳಿ ಪೊಲೀಸರು ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿ ಬಂದಿದೆ. ಹಣ ನೀಡದ ಕಾರಣಕ್ಕೆ ಆತನನ್ನು ಅಕ್ರಮ ಬಂಧನದಲ್ಲಿಟ್ಟು ಕಿರುಕುಳ ಕೊಟ್ಟಿದ್ದಾರೆ ಎಂದು ದೂರಲಾಗಿದೆ.

ವಿಚಾರಣೆಗೆ ಬರುವಂತೆ ನೋಟಿಸ್: ಅಕ್ರಮ ಬಂಧನ ಪ್ರಕರಣ ಸಂಬಂಧ ಫೆ.13ರ ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಪಿಐ ಅಂಬರೀಷ್ ಸೇರಿದಂತೆ ಅಮೃತಹಳ್ಳಿ ಪೊಲೀಸರಿಗೆ ಎಸ್‌ಎಚ್‌ಆರ್‌ಸಿ ನೋಟಿಸ್ ನೀಡಿದೆ. ಈ ಪ್ರಕರಣದಲ್ಲಿ ಆರೋಪಿತ ಪೊಲೀಸರ ವಿಚಾರಣೆ ಬಳಿಕ ಆಯೋಗದ ಮುಖ್ಯಸ್ಥರಿಗೆ ಅಧಿಕಾರಿಗಳು ವರದಿ ಸಲ್ಲಿಸಲಿದ್ದಾರೆ.