ಸಾರಾಂಶ
ಧಾರವಾಡ: ಮಾನವ ಕಳ್ಳ ಸಾಗಾಣಿಕೆ ಮಾಡುವುದು, ದೌರ್ಜನ್ಯ ಎಸಗುವುದು ಹೀನಕೃತ್ಯವಾಗಿದೆ. ಇದೊಂದು ಸಮಾಜಕ್ಕೆ ಅಂಟಿದ ರೋಗ. ಇದನ್ನು ತಡೆಗಟ್ಟುವಲ್ಲಿ ಪ್ರತಿಯೋಬ್ಬ ನಾಗರಿಕರು ಬದ್ಧರಾಗಿರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾದೀಶ ಪಿ.ಎಫ್. ದೊಡ್ಡಮನಿ ಹೇಳಿದರು.
ಇಲ್ಲಿಯ ಆಲೂರು ವೆಂಕಟರಾವ್ ಸಾಂಸ್ಕೃತಿಕ ಸಭಾ ಭವನದಲ್ಲಿ ಜಿಲ್ಲಾಡಳಿತವು ಬುಧವಾರ ಆಯೋಜಿಸಿದ್ದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆಯಲ್ಲಿ ಕಾನೂನು ಅರಿವು- ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಾನವ ಕಳ್ಳ ಸಾಗಾಣಿಕೆ ತಡೆಯುವುದು ಎಲ್ಲರ ಕರ್ತವ್ಯ. ಮಕ್ಕಳು, ಮಹಿಳೆ, ಪುರುಷ ಎನ್ನದೆ ಎಲ್ಲ ರೀತಿಯ ಜನರನ್ನು ವಿವಿಧ ಕಾರಣಗಳಿಗಾಗಿ ಅಪಹರಣ, ಕಳ್ಳ ಸಾಗಾಣಿಕೆ ಮಾಡಲಾಗುತ್ತಿದೆ. ಮುಖ್ಯವಾಗಿ ಹಣದ ಆಮಿಷ, ದೌರ್ಜನ್ಯಗಳಿಂದ ಕಳ್ಳ ಸಾಗಾಣಿಕೆ ಮಾಡುತ್ತಾರೆ. ಇಂದು ಯಾರದೋ ಕುಟುಂಬದಲ್ಲಿ ಆಗಿರಬಹುದು. ಮುಂದಿನ ದಿನಗಳಲ್ಲಿ ನಮ್ಮ ಕುಟುಂಬದಲ್ಲೂ ಅಗಬಹುದು. ಈ ಎಚ್ಚರಿಕೆಯಿಂದ ನಾವು ಎದುರಿಸಿ, ಕಳ್ಳ ಮಾನವ ಸಾಗಾಣಿಕೆ ಆಗದಂತೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದರು.
ಮಾನವ ಕಳ್ಳ ಸಾಗಾಣಿಕೆ ಕಂಡುಬಂದರೆ ತಕ್ಷಣ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಮಾಹಿತಿ ನೀಡಬೇಕು. ಅನೇಕ ಸಲ ಪೊಲೀಸರಿಗೆ ಮಾಹಿತಿ ಕೊಟ್ಟರೆ ತಾವು ಸಾಕ್ಷಿ ಆಗಿ, ನ್ಯಾಯಾಲಯಕ್ಕೆ ಅಲೆಯಬೇಕಾಗುತ್ತದೆ ಎಂಬ ತಪ್ಪು ಗ್ರಹಿಕೆ ಮೂಡುತ್ತದೆ. ಆದರೆ, ಸಾಕ್ಷಿದಾರ ಒಂದು ಸಲ ಮಾತ್ರ ನ್ಯಾಯಾಲಯಕ್ಕೆ ಬಂದು ಸಾಕ್ಷಿ ನುಡಿದರೆ ಸಾಕು, ಮತ್ತೇ ಅವರು ಬರುವ ಅಗತ್ಯವಿಲ್ಲ. ಆದ್ದರಿಂದ ಸಮಾಜ ಈ ಅನಿಷ್ಠವನ್ನು ತೊಲಗಿಸಲು ಧೈರ್ಯದಿಂದ ಮುಂದೆ ಬಂದು, ಮಾಹಿತಿ ಹಂಚಿಕೊಳ್ಳಬೇಕು ಎಂದರು.ಅಂತಾರಾಷ್ಟ್ರೀಯ ನ್ಯಾಯ ಮಿಷನ್ಸ್ ಸಂಸ್ಥೆಯ ವಿನೋದ್ ಕುಮಾರ್ ಪಿ. ಹಾಗೂ ಸರ್ಸಿ ದ್ದಪ್ಪ ಕಂಬಳಿ ಕರ್ನಾಟಕ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಶಶಿರೇಖಾ ಮಾಳಗಿ, ಮಾನವ ಕಳ್ಳ ಸಾಗಾಣಿಕೆ ಅಪರಾಧ ಹಾಗೂ ರಕ್ಷಣಾತ್ಮಕ ಕಾನೂನುಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಪೊಲೀಸ್ ಇಲಾಖೆಯ ಸಿಇಎನ್ ವಿಭಾಗದ ಡಿವೈಎಸ್‌ಪಿ ಶಿವಾನಂದ ಕಟಗಿ, ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ದನಗೌಡರ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಎಸ್.ಎಂ. ಹಿರೇಮಠ, ಜಿಲ್ಲಾ ನಿರೂಪಣಾಧಿಕಾರಿ ಡಾ. ಕಮಲಾ ಬೈಲೂರ ವೇದಿಕೆ ಮೇಲಿದ್ದರು.ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಂ. ಹೊನಕೇರಿ, ಪೊಲೀಸ್ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಲಿಂಗತ್ವ ಅಲ್ಪಸಂಖ್ಯಾತರು, ಮಾಜಿ ದೇವದಾಸಿಯರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಡಾ. ಎಚ್.ಎಚ್. ಕುಕನೂರ ಸ್ವಾಗತಿಸಿದರು. ವಿಜಯಲಕ್ಷ್ಮಿ ಪಾಟೀಲ ವಂದಿಸಿದರು. ಸುನಿತಾ ನಾಡಿಗೇರ ನಿರೂಪಿಸಿದರು.